Tirupati : ದೇಶದ ಅತ್ಯಂತ ಜನಪ್ರಿಯ ಧಾರ್ಮಿಕ ಸ್ಥಾನವಾಗಿರುವ, ಕಲಿಯುಗ ಪ್ರತ್ಯಕ್ಷ ದೈವ ಶ್ರೀ ವೆಂಕಟೇಶ್ವರ ಸ್ವಾಮಿಯು ನೆಲೆ ನಿಂತಿರುವ ತಿರುಮಲ ತಿರುಪತಿ (Tirumala Tirupati) ದೇಗುಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಭಕ್ತರ ದಟ್ಟಣೆಯಿಂದಾಗಿ ಬರೋಬ್ಬರಿ 48 ಗಂಟೆಗಳ ಸಮಯ ದೈವ ದರ್ಶನಕ್ಕೆ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.
ದೇಗುಲದಲ್ಲಿ ದೇವರ ದರ್ಶನಕ್ಕೆ ಇರುವ ಎಲ್ಲಾ ಸರತಿ ಸಾಲುಗಳು ಸಹಾ ಭರ್ತಿಯಾಗಿದ್ದು, ಇದಲ್ಲದೇ ಬರೋಬ್ಬರಿ 5 ಕಿಮೀ ಗಳ ವರೆಗೆ ಭಕ್ತರ ಸಾಲು ಇದೆ. ಇನ್ನು ಅಲಿಪಿರಿ ಪ್ರವೇಶ ದ್ವಾರದಲ್ಲಿ ಸಹಾ ವಾಹನಗಳ ದಟ್ಟಣೆ ಉಂಟಾಗಿದೆ ಎಂದು ತಿಳಿದು ಬಂದಿದೆ.
ಭಕ್ತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭಕ್ತರಿಗೆ ಹಾಲು, ಆಹಾರ, ಕುಡಿಯುವ ನೀರನ್ನು ಪೂರೈಸುವುದಕ್ಕಾಗಿ ಟಿಟಿಡಿ (TTD) ಬರೋಬ್ಬರಿ 2,500 ಸ್ವಯಂ ಸೇವಕರನ್ನು ನೇಮಕ ಮಾಡಿಕೊಂಡಿದೆ. ಅಕ್ಟೋಬರ್ ಎರಡರ ವರೆಗೆ ಸಾಲು ಸಾಲು ರಜೆ ಇರುವ ಕಾರಣ ದೇಗುಲಕ್ಕೆ ಬರುವ ಭಕ್ತರ ಸಂಖ್ಯೆ ಏರಿಕೆಯಾಗಿದೆ.
ಈಗ ಮುಂದಿನ ದಿನಗಳಲ್ಲಿ ಬೆಟ್ಟದ ಮೇಲೆ ಭಕ್ತರ ದಟ್ಟಣೆಯು ಇನ್ನಷ್ಟು ಹೆಚ್ಚಾಗದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಅಕ್ಟೋಬರ್ 1, 7, 8, 14 ಮತ್ತು 15 ರಂದು ಉಚಿತ ಟೋಕನ್ ವಿತರಣೆಗೆ ಟಿಟಿಡಿ ಬ್ರೇಕ್ ಹಾಕಿದೆ, ಈ ವಿಚಾರವನ್ನು ಟಿಟಿಡಿ ಅಧಿಕೃತ ಘೋಷಣೆ ಮಾಡಿದೆ.