4 ಗ್ಯಾರಂಟಿಗಳ ಬೆನ್ನಲ್ಲೇ ಮತ್ತೊಂದು ಯೋಜನೆ: ರಾಜ್ಯದ ಜನರಿಗೆ ಗುಡ್ ನ್ಯೂಸ್ ನೀಡಲಿದೆ ರಾಜ್ಯ ಸರ್ಕಾರ
Karnataka : ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರವು ಭರವಸೆ ನೀಡಿದ್ದ 5 ಗ್ಯಾರಂಟಿಗಳಲ್ಲಿ ಈಗಾಗಲೇ ನಾಲ್ಕನ್ನು ಜಾರಿಗೆ ತಂದಿದ್ದು, ಈಗ ಅವುಗಳ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರವು ರಾಜ್ಯದ ಜನತೆಗೆ ಮತ್ತೊಂದು ಶುಭ ಸುದ್ದಿಯನ್ನು ನೀಡುವುದಕ್ಕಾಗಿ ಅಗತ್ಯವಿರುವ ಸಿದ್ಧತೆಗಳನ್ನು ನಡೆಸುತ್ತಿದೆ. ಹೌದು, ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಮಾದರಿಯಲ್ಲಿ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತರುವುದಕ್ಕೆ ಆರೋಗ್ಯ ಇಲಾಖೆ (Health Department) ಯೋಜನೆ ಸಿದ್ಧ ಮಾಡಿಕೊಂಡಿದೆ.
ಈ ಹೊಸ ಸ್ಕೀಂ ಗೆ ಗೃಹ ಆರೋಗ್ಯ ಎನ್ನುವ ಹೆಸರನ್ನು ಇಡಲಾಗಿದೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಗೃಹ ಆರೋಗ್ಯ ಯೋಜನೆಯನ್ನು ಜಾರಿಗೆ ತರುವುದಕ್ಕೆ ಆರೋಗ್ಯ ಇಲಾಖೆಯು ಚಿಂತನೆಯನ್ನು ನಡೆಸಿದ್ದು, ಇದಕ್ಕೆ ಕ್ಯಾಬಿನೆಟ್ (Cabinet) ಅನುಮತಿ ಸಿಗುವುದು ಒಂದೇ ಬಾಕಿ ಇದೆ ಎನ್ನಲಾಗಿದೆ.
ಈ ವಿಚಾರವಾಗಿ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಪ್ರಾಯೋಗಿಕವಾಗಿ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಈ ಸೇವೆಯ ಆರಂಭಕ್ಕೆ ಚಿಂತನೆ ನಡೆಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಡಯಾಬಿಟಿಸ್, ಹೈಪರ್ ಟೆನ್ಷನ್, ಡಿಪಿ ಇಂತಹವುಗಳು ತೀರಾ ಸಾಮಾನ್ಯವಾಗಿದ್ದು, ಇಂತಹ ಆರೋಗ್ಯ ಸಮಸ್ಯೆಗಳನ್ನು ಸಹ ಜನರು ಸಾಮಾನ್ಯವೆಂದು ನಿರ್ಲಕ್ಷ್ಯ ಮಾಡುತ್ತಿದ್ದಾರೆ.
ಒಂದು ವೇಳೆ ಈ ಹೊಸ ಯೋಜನೆ ಜಾರಿಯಾದಲ್ಲಿ ಹೀಗೆ ನಿರ್ಲಕ್ಷ್ಯ ಮಾಡುವವರನ್ನು ಸುಲಭವಾಗಿ ಪತ್ತೆ ಹೆಚ್ಚುವುದಕ್ಕೆ ಸಹಾಯಕವಾಗುವುದು ಎಂದೇ ಹೇಳಲಾಗುತ್ತಿದೆ. ಗೃಹ ಆರೋಗ್ಯ ಯೋಜನೆ ಏನು ಎನ್ನುವ ವಿಚಾರವನ್ನು ತಿಳಿಯೋಣ ಬನ್ನಿ.
ಆರೋಗ್ಯ ಸಿಬ್ಬಂದಿಯನ್ನು ಮನೆ ಬಾಗಿಲಿಗೆ ಕಳುಹಿಸಿ ಆರೋಗ್ಯ ತಪಾಸಣೆಯನ್ನು ನಡೆಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಈ ಹಿಂದೆ ಪ್ರತಿ 5,000 ಜನರಿಗೆ ಆರೋಗ್ಯ ಇಲಾಖೆಯ ವತಿಯಿಂದ ಆರೋಗ್ಯ ಕ್ಷೇಮ ಕೇಂದ್ರ ಸ್ಥಾಪನೆಯನ್ನು ಮಾಡಲಾಗಿತ್ತು.
ಈಗ ಅದೇ ಆರೋಗ್ಯ ಕ್ಷೇಮ ಕೇಂದ್ರದಲ್ಲಿರುವ ಸಮುದಾಯ ಆರೋಗ್ಯ ಅಧಿಕಾರಿ ಮತ್ತು ಆಶಾ ಕಾರ್ಯಕರ್ತೆಯರು ಜೊತೆಯಾಗಿ ಮನೆ ಮನೆ ಭೇಟಿ ಮಾಡುತ್ತಾರೆ. ಈ ವೇಳೆ ಅವರು ಶುಗರ್, ಬಿಪಿ, ಜ್ವರ ಪರಿಶೀಲನೆ ನಡೆಸುತ್ತಾರೆ. ಈ ಕಾಯಿಲೆಗಳು ಯಾರೆಲ್ಲಾದರೂ ಪತ್ತೆಯಾದರೆ ರೋಗಿಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗುತ್ತದೆ.
ಇದಲ್ಲದೇ ಅಗತ್ಯವಿರುವ ಔಷಧಿಗಳನ್ನು ಆಶಾ ಕಾರ್ಯಕರ್ತೆಯರ ಮೂಲಕ ಪ್ರತಿ ತಿಂಗಳು ಮನೆಗೆ ಕಳುಹಿಸುವ ಕೆಲಸವನ್ನು ಕೂಡಾ ಈ ಯೋಜನೆಯಲ್ಲಿ ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ಈ ಯೋಜನೆ ಜಾರಿಯಾದರೆ ಸಾಕಷ್ಟು ಜನರಿಗೆ ಇದರ ಲಾಭ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.