Nagachaitanya Marriage: ಟಾಲಿವುಡ್ ನ ಹಿರಿಯ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ (Nagarjuna) ಅವರ ನಟ ವಾರಸುದಾರರಾಗಿ ಅವರ ಇಬ್ಬರು ಮಕ್ಕಳಾದ ನಾಗ ಚೈತನ್ಯ ಮತ್ತು ಅಖಿಲ್ ಇಬ್ಬರೂ ಸಹಾ ಸಿನಿಮಾ ರಂಗದಲ್ಲಿ ಇದ್ದಾರೆ. ಹಾಗೆಯೇ ನಾಗೇಶ್ವರ್ ರಾವ್ ಅವರ ಸಹೋದರಿಯ ಪುತ್ರ ಸುಮಂತ್ ಸಹಾ ನಟನಾಗಿ ಹೆಸರನ್ನು ಮಾಡಿದ್ದಾರೆ. ಇದಲ್ಲದೇ ನಾಗಾರ್ಜುನ ಅವರ ಸೋದರ ಸೊಸೆ ಪವನ್ ಕಲ್ಯಾಣ್ ಅವರ ಮೊದಲ ಸಿನಿಮಾದಲ್ಲಿ ನಾಯಕಿಯಾಗಿದ್ದರು.
ನಾಗಾರ್ಜುನ ಅವರ ಕುಟುಂಬದಲ್ಲಿ ವಿಚ್ಚೇದನ ಅನ್ನೋದು ಹೊಸದೇನಲ್ಲ. ನಾಗಾರ್ಜುನ ಅವರು ತಮ್ಮ ಮೊದಲ ಪತ್ನಿಗೆ ವಿಚ್ಛೇದನ ನೀಡಿ ನಟಿ ಅಮಲಾ ಕೈ ಹಿಡಿದವರು. ಇನ್ನು ಸುಮಂತ್ ಅವರು ನಟಿ ಕೀರ್ತಿ ರೆಡ್ಡಿ ಜೊತೆ ದಾಂಪತ್ಯ ಜೀವನಕ್ಕೆ ಅಡಿಯಿಟ್ಟವರು. ಆದರೆ ಅನಂತರ ವಿಚ್ಚೇದನ ಪಡೆದು ಪತ್ನಿಯಿಂದ ದೂರಾಗಿದ್ದಾರೆ. ನಾಗಾರ್ಜುನ ಅವರ ಕಿರಿಯ ಮಗ ಸಹಾ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಆದರೆ ಅದು ಮದುವೆವರೆಗೂ ಬರಲೇ ಇಲ್ಲ.
ಈಗ ಟಾಲಿವುಡ್ ಅಂಗಳದಲ್ಲಿ ಒಂದಷ್ಟು ಹೊಸ ಸುದ್ದಿಗಳು ಹರಿದಾಡಿವೆ. ಅವುಗಳ ಪ್ರಕಾರ ಅಕ್ಕಿನೇನಿ ನಾಗಾರ್ಜುನ ಅವರ ಮನೆಯಲ್ಲಿ ಮೂರು ಮದುವೆಗಳಿಗೆ ಸಿದ್ಧತೆಗಳು ಆರಂಭವಾಗಿದೆ ಎನ್ನಲಾಗುತ್ತಿದೆ. ಸಮಂತಾರಿಂದ ದೂರಾದ ಮೇಲೆ ಒಂಟಿಯಾಗಿರುವ ನಾಗಚೈತನ್ಯ (Nagachaitanya Marriage) ಅವರಿಗೆ ನಾಗಾರ್ಜುನ ತಾವು ನೋಡಿರುವ ಹುಡುಗಿಯ ಜೊತೆಗೆ ವಿವಾಹ ಮಾಡಿಸಲಿದ್ದಾರೆ ಎನ್ನಲಾಗಿದೆ.
ಮತ್ತೊಂದು ಕಡೆ ಕಿರಿಯ ಮಗ ಅಖಿಲ್ (Akhil Akkineni) ಸಹಾ ಉದ್ಯಮಿಯೊಬ್ಬರ ಮಗಳೊಡನೆ ದಾಂಪತ್ಯ ಜೀವನಕ್ಕೆ ಅಡಿಯಿಡುವರು ಎನ್ನಲಾಗಿದ್ದು, ಸುಮಂತ್ ಕೂಡಾ ವರ್ಷಗಳ ನಂತರ ಮದುವೆ ಆಗುವ ಮನಸ್ಸನ್ನು ಮಾಡಿದ್ದಾರೆ ಎನ್ನಲಾಗಿದೆ. ಏಕಕಾಲದಲ್ಲಿ ಮೂವರಿಗೂ ಕಂಕಣ ಬಲ ಕೂಡಿ ಬರುವ ಹಾಗೆ ಕಂಡಿದ್ದು, ಮದುವೆ ಸಂಭ್ರಮ ಮನೆ ಮಾಡಲಿದೆ ಎನ್ನಲಾಗುತ್ತಿದೆ.