ಓಂ ರಾವತ್ ಕಿಸ್ ಕಾಂಟ್ರವರ್ಸಿ: ಕೃತಿ ಬಗ್ಗೆ ಅಸಮಾಧಾನಗೊಂದ ಸೀತಾ ಪಾತ್ರಧಾರಿ ದೀಪಿಕಾ ಚಿಕ್ಲಿಯಾ
Deepika Chikliya : ತಿರುಪತಿ ತಿರುಮಲ ಶ್ರೀವೆಂಕಟೇಶ್ವರನ ದೇಗುಲದ ಆವರಣದಲ್ಲಿ ಆದಿಪುರುಷ್ ಸಿನಿಮಾದ ನಿರ್ದೇಶಕ ಓಂ ರಾವುತ್ (Om Raut), ಆ ಸಿನಿಮಾದಲ್ಲಿ ಸೀತೆಯ ಪಾತ್ರವನ್ನು ನಿರ್ವಹಿಸಿರುವ ನಟಿ ಕೃತಿ ಸನನ್ (Kriti Sanon) ಅವರಿಗೆ ವಿದಾಯ ಹೇಳುವ ಸಂದರ್ಭದಲ್ಲಿ ನಟಿಯ ಕೆನ್ನೆಗೆ ಚುಂಬಿಸಿದ ದೃಶ್ಯವು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಮೇಲೆ ಈ ವಿಚಾರ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ದೇಗುಲದ ಆವರಣದಲ್ಲಿ ಇದೆಂತಹ ಹುಚ್ಚಾಟ ಎಂದು ಅನೇಕರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು.
ಈ ವಿಚಾರ ದೊಡ್ಡ ಸುದ್ದಿಯಾದ ಬೆನ್ನಲ್ಲೇ ಇದೀಗ ಇದರ ಕುರಿತಾಗಿ ಹಿರಿಯ ನಟಿ, ಕಿರುತೆರೆಯಲ್ಲಿ ಪ್ರಸಾರ ಕಂಡು ವಿಶ್ವ ದಾಖಲೆ ಬರೆದ ರಾಮಾಯಣ (Ramayana) ಧಾರಾವಾಹಿಯಲ್ಲಿ ಸೀತೆಯ ಪಾತ್ರಕ್ಕೆ ಜೀವ ತುಂಬಿದ ನಟಿ ದೀಪಿಕಾ ಚಿಖ್ಲಿಯಾ ಅವರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಸುದ್ದಿಯಾದ ಘಟನೆಯ ಕುರಿತಾಗಿ ದೀಪಿಕಾ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ನಟಿ ಕೃತಿ ಸೆನೊನ್ ತನ್ನನ್ನು ಸೀತೆ ಎಂದು ಭಾವಿಸದೇ ಇರಬಹುದು. ಇದನ್ನೂ ಓದಿ : ಅದೊಂದು ಕಾರಣಕ್ಕೆ ಆದಿಪುರುಷ್ ನೋಡಲು 10,000 ಉಚಿತ ಟಿಕೆಟ್: ಕಾಶ್ಮೀರ್ ಫೈಲ್ಸ್ ನಿರ್ಮಾಪಕನ ನಿರ್ಧಾರ
ಅವರು ಕೇವಲ ರಾಮಾಯಣ ಮಹಾಕಾವ್ಯವನ್ನು ಆಧರಿಸಿ ನಿರ್ಮಾಣವಾಗಿರುವ ಓಂ ರಾವುತ್ ಅವರ ಆದಿಪುರುಷ್ (Adipurush) ಸಿನಿಮಾದಲ್ಲಿ ಜಾನಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ. ಹಾಗೆ ಮಾತು ಮುಂದುವರೆಸಿದ ಅವರು, ಈ ಪೀಳಿಗೆಯ ನಟರಲ್ಲಿ ಇದೊಂದು ದೊಡ್ಡ ಸಮಸ್ಯೆ ಎಂದೇ ನಾನು ನಂಬುತ್ತೇನೆ. ಏಕೆಂದರೆ ಅವರು ಪಾತ್ರದೊಳಗೆ ಪ್ರವೇಶಿಸುವುದಿಲ್ಲ ಅಥವಾ ಅವರು ತಾವು ಮಾಡುತ್ತಿರುವ ಪಾತ್ರದ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ.
ಅವರ ಪಾಲಿಗೆ ರಾಮಾಯಣ ಒಂದು ಸಿನಿಮಾ ಆಗಿಯೇ ಇರಬೇಕು. ಬಹುಶಃ ಅವರು ಆಧ್ಯಾತ್ಮಿಕವಾಗಿ ಅದರೊಂದಿಗೆ ನಂಟನ್ನು ಹೊಂದಿಲ್ಲ. ಕೃತಿ ಇಂದಿನ ಪೀಳಿಗೆಯ ನಟಿ. ಇಂದಿನ ದಿನಗಳಲ್ಲಿ, ಯಾರನ್ನಾದರೂ ಚುಂಬಿಸುವುದು ಅಥವಾ ತಬ್ಬಿಕೊಳ್ಳುವುದು ಉತ್ತಮ ಅಭ್ಯಾಸ ಎನ್ನಬಹುದು. ಆದರೆ ಆಕೆ ತನ್ನನ್ನು ತಾನು ಸೀತಾ ದೇವಿ ಎಂದು ಭಾವಿಸಿಲ್ಲ. ಇದು ಭಾವನೆಗಳ ವಿಷಯವಾಗಿದೆ. ನಾನು ಸೀತೆಯ ಪಾತ್ರದಲ್ಲಿ ಜೀವಿಸಿದ್ದೇನೆ.
ಆದರೆ ಇಂದಿನ ನಟಿಯರು ಅದನ್ನು ಒಂದು ಪಾತ್ರವೆಂದು ಪರಿಗಣಿಸುತ್ತಾರೆ. ಚಿತ್ರ ಅಥವಾ ಪ್ರಾಜೆಕ್ಟ್ ಮುಗಿದ ನಂತರ, ಅವರು ಇನ್ನು ಮುಂದೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲವೂ ನಮ್ಮ ಮೇಲೆ ಅವಲಂಬಿತವಾಗಿರುತ್ತದೆ. ನಾವು ರಾಮಾಯಣ ಮಾಡುವಾಗ ಸೆಟ್‌ನಲ್ಲಿ ಯಾರೂ ನಮ್ಮನ್ನು ನಮ್ಮ ಹೆಸರಿನಿಂದ ಕರೆಯಲು ಧೈರ್ಯ ಮಾಡುತ್ತಿರಲಿಲ್ಲ. ನಾವು ನಮ್ಮ ಪಾತ್ರಗಳಲ್ಲಿದ್ದಾಗ, ಸೆಟ್‌ನಲ್ಲಿಯೇ ಅನೇಕ ಜನರು ಬಂದು ನಮ್ಮ ಪಾದಗಳನ್ನು ಮುಟ್ಟುತ್ತಿದ್ದರು.
ಅದೊಂದು ವಿಭಿನ್ನವಾದ ಸಮಯ. ಆ ಸಮಯದಲ್ಲಿ, ಅವರು ನಮ್ಮನ್ನು ನಟರಂತೆ ನೋಡಲಿಲ್ಲ; ಅವರು ನಮ್ಮನ್ನು ದೇವರೆಂದು ಪರಿಗಣಿಸಿದರು. ಆ ಪಾತ್ರಗಳ ನಂತರ ನಾವು ಬೇರೆಯವರನ್ನು ಅಪ್ಪಿಕೊಳ್ಳುವುದು, ಚುಂಚಿಸುವುದು ಸಾಧ್ಯವಾಗಲಿಲ್ಲ. ಆದಿಪುರುಷ್ ಸಿನಿಮಾ ನಟರು ಈ ಸಿನಿಮಾ ನಂತರ ತಮ್ಮ ಮುಂದಿನ ಪ್ರಾಜೆಕ್ಟ್‌ಗಳಲ್ಲಿ ತೊಡಗಿಕೊಳ್ಳುತ್ತಾರೆ. ಅವರು ತಮ್ಮ ಪಾತ್ರಗಳನ್ನು ಮರೆಯಬಹುದು. ಆದರೆ ನಮಗೆ ಅಂತದ್ದು ಆಗಲೇ ಇಲ್ಲ.
ನಾವು ಮೇಲಿನಿಂದ ಇಳಿದು ಬಂದು ಈ ಜಗತ್ತಿನಲ್ಲಿ ವಾಸಿಸುವ ದೇವರುಗಳೆಂದೇ ಇಂದಿಗೂ ಜನರಿಂದ ಪರಿಗಣಿಸಲ್ಪಟ್ಟಿದ್ದೇವೆ. ಆದ್ದರಿಂದಲೇ ನಾವು ಜನರ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದನ್ನೂ ಮಾಡಿಲ್ಲ ಎಂದು ದೀಪಿಕಾ ಹೇಳಿದ್ದಾರೆ. ದೀಪಿಕಾ (Deepika) ಅವರು ಹೇಳಿದ ಮಾತುಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವುದು ಮಾತ್ರವೇ ಅಲ್ಲದೇ ಅದಕ್ಕೆ ಅನೇಕರು ನಿಮ್ಮ ಮಾತು ಅಕ್ಷರಶಃ ಸತ್ಯ ಎಂದಿದ್ದಾರೆ.