Donkey Milk : ನವಜಾತ ಶಿಶುಗಳಿಗೆ ಮತ್ತು ಪುಟ್ಟು ಮಕ್ಕಳಿಗೆ ಪ್ರಮುಖ ಆಹಾರ ಏನು ಎಂದರೆ ಹಾಲು (Milk) ಎಂದು ಎಲ್ಲರೂ ಸುಲಭವಾಗಿ ಹೇಳುತ್ತಾರೆ. ಹಾಲು ನಿತ್ಯ ಜೀವನದಲ್ಲಿ ಪ್ರಮುಖವಾದ ಆಹಾರಗಳಲ್ಲಿ ಒಂದಾಗಿದೆ. ಚಿಕ್ಕ ಮಕ್ಕಳಷ್ಟೇ ಅಲ್ಲ, ದೊಡ್ಡವರೂ ಸಹಾ ಹಾಲನ್ನು ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಅನೇಕರಿಗೆ ಆಗಾಗ ಹಾಲು, ಟೀ, ಕಾಫಿ ಕುಡಿಯುವುದು ಒಂದು ಅಭ್ಯಾಸವೇ ಆಗಿ ಹೋಗಿದೆ.
ಹಾಲಿನ ವಿಷಯ ಬಂದಾಗಲೆಲ್ಲಾ ಹಸು, ಎಮ್ಮೆ, ಮೇಕೆಯ ಹಾಲನ್ನು ಕುಡಿಯುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ. ಆದರೆ ಇದೇ ವೇಳೆ ಕತ್ತೆಯ ಹಾಲು ಸಹಾ ಅಷ್ಟೇ ಮುಖ್ಯವಾದುದು ಎನ್ನುವ ವಿಚಾರ ನಿಮಗೆ ತಿಳಿದಿದೆಯೇನು? ಜೀವನದಲ್ಲಿ ಒಮ್ಮೆಯಾದರೂ ಕತ್ತೆಯ ಹಾಲನ್ನು ಕುಡಿಯಬೇಕೆಂದು ಹಿರಿಯರು ಹೇಳುತ್ತಾರೆ. ಹಾಗಾದರೆ ಅದನ್ನೇಕೆ ಕುಡಿಯಬೇಕು, ಅದರ ಪ್ರಯೋಜನ ಏನು ತಿಳಿಯೋಣ ಬನ್ನಿ.
ಕತ್ತೆ ಹಾಲಿಗೆ (Donkey Milk) ಈ ಮೊದಲು ಸಾಕಷ್ಟು ಬೇಡಿಕೆ ಇರಲಿಲ್ಲ. ಆದರೆ ಈಗ ಹಸು ಮತ್ತು ಎಮ್ಮೆಯ ಹಾಲಿಗಿಂತ ಕತ್ತೆಯ ಹಾಲಿಗೇ ಹೆಚ್ಚಿನ ಬೇಡಿಕೆ ಇದೆ ಎಂದರೆ ಸುಳ್ಳಲ್ಲ. ಕತ್ತೆ ಹಾಲಿನ ಬೆಲೆ ಸಹಾ ಬಹಳ ದುಬಾರಿಯಾಗಿದೆ. ಆಡು, ಹಸು ಮತ್ತು ಎಮ್ಮೆ ಹಾಲಿಗೆ ಹೋಲಿಕೆ ಮಾಡಿದರೆ, ಕತ್ತೆ ಹಾಲಿನಲ್ಲಿ ತಾಯಿಯ ಹಾಲಿನಲ್ಲಿರುವಷ್ಟೇ ಪೋಷಕಾಂಶಗಳಿವೆ (Nutrients) ಎನ್ನುವುದಾಗಿ ಸಂಶೋಧನೆಯೊಂದು ತಿಳಿಸಿದೆ..
ಹಿಂದಿನ ಕಾಲದಲ್ಲಿ ಒಂದು ವೇಳೆ ಮಕ್ಕಳಿಗೆ ಆರೋಗ್ಯ ಸಮಸ್ಯೆಗಳು ಇದ್ದಲ್ಲಿ ಆಗ ಅವರಿಗೆ ಕತ್ತೆ ಹಾಲು ಕುಡಿಸುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಪ್ರಮುಖ ಕಾರಣ ಕತ್ತೆ ಹಾಲಿನಲ್ಲಿ ಪ್ರೋಟೀನ್, ಖನಿಜಗಳು ಮತ್ತು ವಿಟಮಿನ್ ಗಳು ಸಮೃದ್ಧವಾಗಿರುವುದೇ ಆಗಿದೆ. ಕತ್ತೆ ಹಾಲಿನ ಸೇವನೆಯಿಂದ ಸೋಂಕು, ಕೆಮ್ಮು, ಜ್ವರ, ಅಸ್ತಮಾ ಮತ್ತು ಗಾಯಗಳಿಂದ ಪರಿಹಾರ ಸಿಗುತ್ತದೆ ಎನ್ನಲಾಗಿದ್ದು, ಈ ಹಾಲು ಆಮ್ಲೀಯತೆ ಮತ್ತು ನಿದ್ರಾಹೀನತೆಗೆ ಸಹಾ ಪರಿಹಾರವಾಗಿದೆ.