8 ತಿಂಗಳ ಮಗುವಿಗಾಗಿ ತಾನು ಒಲಂಪಿಕ್ಸ್ ನಲ್ಲಿ ಗೆದ್ದ ಪದಕ ಹರಾಜು ಮಾಡಿದ ಮಹಿಳಾ ಕ್ರೀಡಾಪಟು

Written by Soma Shekar

Updated on:

---Join Our Channel---

ಒಲಂಪಿಕ್ಸ್ ನಲ್ಲಿ ಪದಕ ಗೆಲ್ಲುವುದು ಪ್ರತಿಯೊಬ್ಬ ಕ್ರೀಡಾಪಟುವಿನ ಕನಸಾಗಿರುತ್ತದೆ. ಆ ಕನಸನ್ನು ನನಸು ಮಾಡಿಕೊಳ್ಳುವ ಹಾದಿ ಸುಲಭ ಖಂಡಿತ ಅಲ್ಲ. ಅದಕ್ಕಾಗಿ ವರ್ಷಗಳ ಅವಿರತ ಶ್ರಮ ಹಾಗೂ ಕಠಿಣ ತರಬೇತಿಯ ಅಗತ್ಯವಿರುತ್ತದೆ. ಅಲ್ಲದೇ ಕ್ರೀಡಾಪಟುಗಳಲ್ಲಿ ಗುರಿಸಾಧನೆಯ ಕೆಲವು ನಂಬಿಕೆಯು ಕೂಡಾ ಮುಖ್ಯವಾಗಿರುತ್ತದೆ. ಇಂತಹದೊಂದು ಅಸಾಧಾರಣ ಸಾಧನೆಯನ್ನು ತನ್ನದಾಗಿಸಿಕೊಂಡು, ಒಲಂಪಿಕ್ಸ್ ಪದಕ ಗೆಲ್ಲಲು ಮೂಳೆ ಕ್ಯಾನ್ಸರ್ ಹಾಗೂ ಭುಜದ ಗಾಯ ಜಯಿಸಿ ಬಂದ 25 ವರ್ಷದ ಮಹಿಳಾ ಕ್ರೀಡಾಪಟು ಒಬ್ಬರು ಒಲಿಂಪಿಕ್ಸ್ ನಲ್ಲಿ ತಾವು ಗೆದ್ದಂತಹ ಬೆಳ್ಳಿ ಪದಕವನ್ನು, ತಮ್ಮ ಅಮೂಲ್ಯ ಸಾಧನೆಯನ್ನು ಹರಾಜಿಗೆ ಇಟ್ಟಿರುವಂತಹ ಘಟನೆಯೊಂದು ನಡೆದಿದೆ. ಅಲ್ಲದೇ ಆ ಮಹಿಳಾ ಕ್ರೀಡಾಪಟು ಪದಕವನ್ನು ಹರಾಜು ಇಟ್ಟ ಉದ್ದೇಶವನ್ನು ತಿಳಿದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಿಶ್ವಮಟ್ಟದಲ್ಲಿ ಅಪಾರವಾದ ಮೆಚ್ಚುಗೆಗಳು ಹರಿದುಬರುತ್ತಿದೆ.

ಪೋಲ್ಯಾಂಡ್ ದೇಶದ ಜಾವಲಿನ್ ಥ್ರೋ ಕ್ರೀಡಾಪಟು ಆಗಿರುವಂತಹ ಮಾರಿಯಾ ಆಂಡ್ರೆಜ್ಜಿಕ್ ಎರಡು ವಾರಗಳ ಹಿಂದೆಯಷ್ಟೇ ಟೋಕಿಯೋ ಒಲಂಪಿಕ್ಸ್ ನಲ್ಲಿ ಜಾವೆಲಿನ್ ವಿಭಾಗದಲ್ಲಿ ತನ್ನ ಪರಿಶ್ರಮದ ಫಲವಾಗಿ ರಜತ ಪದಕವನ್ನು ಗೆಲ್ಲುವ ಮೂಲಕ ತಮ್ಮ ಸಾಧನೆಯನ್ನು ಮೆರೆದಿದ್ದರು. ಇದೀಗ ಈ ಕ್ರೀಡಾಕಾರಿಣಿ ತಾವು ಗೆದ್ದ ಪದಕವನ್ನು 8 ತಿಂಗಳ ಮಗುವಿನ ಚಿಕಿತ್ಸೆಗೆ ಹಣವನ್ನು ಹೊಂದಿಸುವ ಸಲುವಾಗಿ ಹರಾಜು ಮಾಡಿರುವಂತಹ ಮಾನವೀಯ ಘಟನೆಯೂ ನಡೆದಿದ್ದು, ಅವರ ಈ ನಿರ್ಧಾರಕ್ಕೆ ವಿಶ್ವವ್ಯಾಪಿಯಾಗಿ ಮೆಚ್ಚುಗೆಗಳು ಹರಿದುಬರುತ್ತಿವೆ.

ಪೋಲ್ಯಾಂಡಿನಲ್ಲಿ 8 ತಿಂಗಳ ಮಗು ಗಂಭೀರವಾದ ಹೃದಯ ಕಾಯಿಲೆಯಿಂದ ಬಳಲುತ್ತಿದ್ದು ಯುರೋಪಿನ ಹಲವು ಆಸ್ಪತ್ರೆಗಳಲ್ಲಿ ಮಗುವಿನ ಚಿಕಿತ್ಸೆ ಸಾಧ್ಯವಿಲ್ಲ ಎಂದು ಹೇಳಿದ, ಹಿನ್ನೆಲೆಯಲ್ಲಿ ಆ ಮಗುವಿನ ಪೋಷಕರಿಗೆ ಇನ್ನು ಉಳಿದ ಒಂದೇ ಒಂದು ಆಸರೆ ಅಮೇರಿಕಾದ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ ದ ವೈದ್ಯಕೀಯ ಕೇಂದ್ರವಾಗಿತ್ತು. ಆದರೆ ಮಗುವಿನ ಚಿಕಿತ್ಸೆಗೆ ಅಗತ್ಯವಾಗಿ ದಂತಹ $ 385,000 ಹಣವನ್ನು ಹೊಂದಿಸುವುದು ಆ ಮಗುವಿನ ಪೋಷಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಶಸ್ತ್ರಚಿಕಿತ್ಸೆಗೆ ಸಮಯ ಕಡಿಮೆಯಿತ್ತು, ದೇಣಿಗೆಗಳ ಮೂಲಕ ಅರ್ಧದಷ್ಟು ಹಣ ಮಾತ್ರ ಸಂಗ್ರಹವಾಗಿತ್ತು.

ಮಗುವಿನ ಪೋಷಕರು ಸಾಮಾಜಿಕ ಜಾಲತಾಣಗಳಲ್ಲಿ ಮಗುವಿನ ಪರಿಸ್ಥಿತಿಯ ಬಗ್ಗೆ ಅಪ್ಡೇಟ್ ಮಾಡಿದ್ದರು. ಅದನ್ನು ಗಮನಿಸಿದ ಮಾರಿಯಾ ನಾನು ಅವರಿಗೆ ಸಹಾಯ ಮಾಡಬೇಕೆಂದು ನಿರ್ಧರಿಸಿ, ಒಲಿಂಪಿಕ್ಸ್ ನಲ್ಲಿ ತಾನು ಗೆದ್ದ ಬೆಳ್ಳಿಯ ಪದಕವನ್ನು ಹರಾಜಿಗೆ ಇಟ್ಟಿದ್ದಾರೆ. ಪೋಲೆಂಡಿನಲ್ಲಿ ಸೂಪರ್ ಮಾರ್ಕೆಟ್ ಗಳ ಜಾಲವನ್ನು ಹೊಂದಿರುವಂತಹ ಜಬ್ಕಾ ಪೋಲ್ಸ್ಕಾ ಎನ್ನುವ ಸಂಸ್ಥೆಯು ಮಾರಿಯಾ ಅವರ ಬೆಳ್ಳಿ ಪದಕವನ್ನು ಹರಾಜಿನಲ್ಲಿ $ 125,000 ಬೆಲೆಗೆ ಖರೀದಿ ಮಾಡಿದ್ದಾರೆ. ಮಾರಿಯಾ ತಮ್ಮ ಪದಕ ಹರಾಜಿನಿಂದ ಕ್ಬಂದಂತಹ ಹಣವನ್ನು 8 ತಿಂಗಳ ಮಗುವಾದ
ಮಿಲ್ಜೋಕ್ ಮಾಲಿಸಾ ಪೋಷಕರಿಗೆ ನೀಡಿದ್ದಾರೆ.

ಜಬ್ಕಾ ಸಂಸ್ಥೆಯು ಮಾರಿಯಾ ಅವರ ಈ ಕಾರ್ಯವನ್ನು ಮೆಚ್ಚಿಕೊಂಡಿದ್ದು, ಮಾರಿಯಾ ಅವರಿಗೆ ಅವರ ಪದಕವನ್ನು ಹಿಂತಿರುಗಿ ನೀಡುವುದಾಗಿ ಹೇಳಿದೆ. ಇನ್ನು ಮಾರಿಯ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ, “ಈ ನಿರ್ಧಾರ ಮಾಡಲು ನನಗೆ ತಡವಾಗಲಿಲ್ಲ. ನಾನು ಮೊದಲ ಬಾರಿಗೆ ಫಂಡ್ ರೈಸ್ ಮಾಡುವ ಕೆಲಸದಲ್ಲಿ ತೊಡಗಿಕೊಂಡಿದ್ದೇನೆ, ಇದೇ ಸರಿಯಾದ ಸಮಯ ಎಂದು ನನಗೆ ಅನಿಸಿತ್ತು” ಎಂದು ಬರೆದುಕೊಂಡಿದ್ದಾರೆ. ಸ್ವತಃ ಮೂಳೆಯ ಕ್ಯಾನ್ಸರ್ ಹಾಗೂ ಭುಜದ ಗಾಯವನ್ನು ಜಯಿಸಿ ಒಲಿಂಪಿಕ್ಸ್ ನಲ್ಲಿ ಸಾಧನೆಯನ್ನು ಮೆರೆದ ಅವರು ” ಪ್ರತಿಕೂಲತೆ ಮತ್ತು ನೋವಿನ ವಿ ರು ದ್ಧ ಹೋರಾಟ ಮಾಡಬೇಕು” ಎನ್ನುವುದನ್ನು ತಿಳಿಸಲು ತಾನು ಮಗುವಿಗೆ ಸಹಾಯ ಮಾಡಲು ಮುಂದೆ ಬಂದಿರುವುದಾಗಿ ಹೇಳಿದ್ದಾರೆ.

Leave a Comment