650 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ನಟ ಸತ್ಯಜಿತ್‌ ನಿಧನ: ಕಂಬನಿ ಮಿಡಿದ ಕನ್ನಡ ಚಿತ್ರರಂಗ

Written by Soma Shekar

Published on:

---Join Our Channel---

ಕನ್ನಡ ಚಿತ್ರರಂಗದಲ್ಲಿ 650 ಕ್ಕೂ ಅಧಿಕ ಸಿನಿಮಾಗಳಲ್ಲಿ ಖಳನಟ ಹಾಗೂ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡು, ಜನಪ್ರಿಯತೆ ಪಡೆದುಕೊಂಡಿದ್ದ ಹಿರಿಯ ನಟ ಸತ್ಯಜಿತ್ ಅವರು ತೀವ್ರವಾದ ಅನಾರೋಗ್ಯದ ಕಾರಣದಿಂದ ಇಹಲೋಕವನ್ನು ತ್ಯಜಿಸಿದ್ದಾರೆ. ಕಳೆದ ಹಲವು ದಿನಗಳಿಂದಲೂ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಇತ್ತೀಚಿಗೆ ಅವರ ಆರೋಗ್ಯ ತೀರಾ ಹದಗೆಟ್ಟ ಕಾರಣ ಅವರನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿ, ಅಲ್ಲಿ ಐಸಿಯು ನಲ್ಲಿ ಅವರ ಚಿಕಿತ್ಸೆ ನಡೆಯುತ್ತಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದ ಕಾರಣ ಅವರು ಮಧ್ಯರಾತ್ರಿ ಸುಮಾರು ಎರಡು ಗಂಟೆಯ ವೇಳೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ನಟ ಸತ್ಯ ಜಿತ್ ಅವರಿಗೆ ಗ್ಯಾಂಗ್ರೀನ್ ಆಗಿದ್ದ ಕಾರಣ ಅವರ ಒಂದು ಕಾಲನ್ನು ಸಹಾ ತೆಗೆಯಲಾಗಿತ್ತು. ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು ಆದರೆ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣದೇ ಸತ್ಯಜಿತ್ ಅವರು ಇಹಲೋಕವನ್ನು ತ್ಯಜಿಸಿದ್ದಾರೆ. ಸತ್ಯಜಿತ್ ಅವರ ನಿಜವಾದ ಹೆಸರು ಸೈಯ್ಯದ್ ನಿಜಾಮುದ್ದೀನ್ ಆಗಿದ್ದು, ಸಿನಿ ರಂಗದಲ್ಲಿ ಅವರು ಸತ್ಯಜಿತ್ ಆಗಿ ಹೆಸರನ್ನು ಪಡೆದುಕೊಂಡಿದ್ದಾರೆ.

ಸತ್ಯಜಿತ್‌ ಅವರಿಗೆ ಚಿಕ್ಕ ವಯಸ್ಸಿನಿಂದಲೇ ನಟನೆ ಹಾಗೂ ಸಿನಿಮಾ ರಂಗದ ಬಗ್ಗೆ ಆಸಕ್ತಿ ಇತ್ತು, ಬಣ್ಣದ ಜಗತ್ತಿನ ಕಡೆಗೆ ಅವರು ಆಕರ್ಷಿತರಾಗಿದ್ದರು. ಕನ್ನಡ ಚಿತ್ರರಂಗದ ಎಲ್ಲಾ ಪ್ರಮುಖ ನಟರ ಸಿನಿಮಾಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ವೈವಿದ್ಯಮಯ ಪಾತ್ರಗಳನ್ನು ಪೋಷಿಸಿದ ಅವರು ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದು ಮಾತ್ರ ಖಳ ನಟನಾಗಿ. 72 ವರ್ಷ ವಯಸ್ಸಿನ ಹಿರಿಯ ನಟನ ಅಗಲಿಕೆಗೆ ಸ್ಯಾಂಡಲ್ವುಡ್ ನ ನಟ ನಟಿಯರು ಕಂಬನಿಗೆರೆದಿದ್ದಾರೆ. ಸತ್ಯಜಿತ್‌ ಅವರ ಪಾರ್ಥಿವ ಶರೀರವನ್ನು ಅವರ ಶಬರಿ ನಗರದ ನಿವಾಸದ ಬಳಿ ಅಂತಿಮ ದರ್ಶನಕ್ಕೆ ಇಡಲಾಗಿದೆ.

ಸತ್ಯಜಿತ್‌ ಅವರ ಅಂತಿಮ ಸಂಸ್ಕಾರ ಇಂದು ಮಧ್ಯಾಹ್ನ ನಡೆಯಲಿದೆ ಎನ್ನಲಾಗಿದೆ. ನಟ ಸತ್ಯಜಿತ್‌ ಅವರು ಕೊನೆಯದಾಗಿ ಉಪೇಂದ್ರ ಅವರ ಪತ್ನಿ ಪ್ರಿಯಾಂಕ ಉಪೇಂದ್ರ ಅವರ ಸೆಕೆಂಡ್ ಹಾಫ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲೂ ಸಹಾ ಅವರು ವೀಲ್ ಚೇರ್ ಮೇಲೆ ಕುಳಿತುಕೊಂಡೇ ನಟಿಸಿದ್ದರು. ಅದಾದ ನಂತರ ಅವರು ಯಾವುದೇ ಸಿನಿಮಾದಲ್ಲಿ ಸಹಾ ನಟಿಸಿರಲಿಲ್ಲ. ಅವರ ಆರೋಗ್ಯದ ಸಮಸ್ಯೆಗಳಿಂದ ಅವರು ಸಿನಿಮಾ ರಂಗದಲ್ಲಿ ಸಕ್ರಿಯವಾಗಿರಲಿಲ್ಲ.

Leave a Comment