ಡೈನೋಸಾರ್ ಗಳು ಎನ್ನುವುದು ಸದಾ ಒಂದು ಕುತೂಹಲವನ್ನು ಹುಟ್ಟಿಸುವ ವಿಷಯವಾಗಿದೆ. ಅನೇಕ ಜನರಿಗೆ ಅವುಗಳ ಬಗ್ಗೆ ತಿಳಿಯುವ ಆಸಕ್ತಿ ಇದೆ. ಡೈನೋಸಾರ್ ಗಳ ಜೀವನ ಕಾಲದ ಬಗ್ಗೆ ಇರುವ ರೋಚಕತೆಯೇ ಅಂತಹದ್ದು. ಡೈನೋಸಾರ್ ಗಳ ಕುರಿತಾಗಿ ಹಾಲಿವುಡ್ ನಲ್ಲಿ ಮೂಡಿ ಬಂದ ಸಿನಿಮಾಗಳು ಕೂಡಾ ಭರ್ಜರಿ ಯಶಸ್ಸನ್ನು ಪಡೆದಿರುವುದು ಸಹಾ ಜನರ ಆಸಕ್ತಿಗೆ ಒಂದು ಉದಾಹರಣೆ ಎಂದೇ ಹೇಳಬಹುದು. ಈ ದೈತ್ಯ ಜೀವಿಗಳ ಕುರಿತಾಗಿ ಸಂಶೋಧನೆ ಗಳು ನಡೆಯುತ್ತಲೇ ಇವೆ.
ವಿಜ್ಞಾನಿಗಳು ಈ ದೈತ್ಯ ಜೀವಿ ಪ್ರಬೇಧವು ಭೂಮಿಯ ಮೇಲಿಂದ ಕಣ್ಮರೆಯಾದ, ಅವುಗಳ ಅವಸಾನದ ಚರಿತ್ರೆಯನ್ನು ಅಧ್ಯಯನ ಮಾಡಲು ದಶಕಗಳಿಂದ ಅನೇಕ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಇದಕ್ಕೆ ಪೂರಕವಾಗಿರುವುದು ಅವುಗಳ ಪಳಯುಳಿಕೆಗಳು ಹಾಗೂ ನಿರ್ಜೀವವಾದ ಮೊಟ್ಟೆಗಳು. ಈಗ ಇವೆಲ್ಲವುಗಳ ನಡುವೆ ಚೀನಾದ ಗಂಜೌ ಪ್ರಾಂತ್ಯದಲ್ಲಿ ಒಂದು ಡೈನೋಸಾರ್ ಮೊಟ್ಟೆ ಪತ್ತೆಯಾಗಿದ್ದು, ಮೊಟ್ಟೆಯೊಳಗೆ ಅತ್ಯುತ್ತಮ ಸ್ಥಿತಿಯಲ್ಲಿ ಇರುವ ಭ್ರೂಣವನ್ನು ಕಂಡು ವಿಜ್ಞಾನಿಗಳು ಅಚ್ಚರಿ ಪಟ್ಟಿದ್ದಾರೆ.
ಈ ಭ್ರೂಣಕ್ಕೆ ಬೇಬಿ ಇಂಗ್ಲಿಯಾಂಗ್ ಎನ್ನುವ ಹೆಸರನ್ನು ಇಡಲಾಗಿದೆ. ಒವಿರಾಪ್ಟಾರೋಸಾರಸ್ ಎಂದು ಕರೆಯಲಾಗುವ ಹಲ್ಲು ರಹಿತ ಥೆರೋಪಾಡ್ ಡೈನೋಸಾರ್ ಪ್ರಬೇಧಕ್ಕೆ ಇದು ಸೇರಿದೆ ಎನ್ನಲಾಗಿದೆ. ಇವು ಏಷ್ಯಾ ಮತ್ತು ಉತ್ತರ ಅಮೇರಿಕಾದಲ್ಲಿ ಕ್ರಿಟೇಷಿಯಸ್ ಯುಗದಲ್ಲಿ ಅಂದರೆ ಸುಮಾರು 145-66 ಮಿಲಿಯನ್ ವರ್ಷಗಳ ಹಿಂದೆ ಜೀವಿಸಿದ್ದವು ಎನ್ನಲಾಗಿದೆ. ಈಗ ಸಿಕ್ಕಿರುವ ಮೊಟ್ಟೆಯಲ್ಲಿನ ಭ್ರೂಣದ ಸ್ಥಿತಿ ಕಂಡು ವಿಜ್ಞಾನಿಗಳು ಸಹಾ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ಭ್ರೂಣದ ಸ್ಥಿತಿ ಆಧುನಿಕ ಕಾಲದಲ್ಲಿ ಪಕ್ಷಿಯ ಭ್ರೂಣದಂತೆ ಇದೆ ಎನ್ನಲಾಗಿದೆ. ಎಡಿನ್ ಬರ್ಗ್ ವಿಶ್ವವಿದ್ಯಾಲಯದ ಪ್ರೊ.ಸ್ಟೀವ್ ಬ್ರುಸೆಟ್ ಅವರು “ನಾನು ಕಂಡ ಅತ್ಯಂತ ಸುಂದರ ಪಳಯುಳಿಕೆ ಇದು, ಈ ಪುಟಾಣಿ ಪ್ರಸವ ಪೂರ್ವ ಡೈನೋಸಾರ್ ಮೊಟ್ಟೆಯೊಳಗೆ ಸುರುಳಿ ಸುತ್ತಿಕೊಂಡಿರುವ ಹಕ್ಕಿಯಂತಿದೆ. ಇಂದಿನ ಹಕ್ಕಿಗಳು ತಮ್ಮ ಪೂರ್ವಜ ಡೈನೋಸಾರ್ ಗಳ ಗುಣಗಳನ್ನು ಹೊಂದಿವೆ ಎನ್ನುವುದಕ್ಕೆ ಪುರಾವೆಗಳು ಸಿಕ್ಕಿವೆ” ಎಂದು ಹೇಳಿದ್ದಾರೆ.
ಐಸೈನ್ಸ್ ಪತ್ರಿಕೆಯಲ್ಲಿ ಈ ಕುರಿತಾಗಿ ಸಂಶೋಧಕರು ಕಂಡ ಹೆಚ್ಚಿನ ವಿಚಾರಗಳನ್ನು ಪ್ರಕಟ ಮಾಡಲಾಗಿದೆ. ಪ್ರಸ್ತುತ ಈ ಮೊಟ್ಟೆಯನ್ನು ಚೀನಾದ ಯಿಂಗ್ಲಿಯಾಂಗ್ ಸ್ಟೋನ್ ನೇಚರ್ ಹಿಸ್ಟರಿ ಮ್ಯೂಸಿಯಂ ನಲ್ಲಿ ಭದ್ರವಾಗಿ ಇಡಲಾಗಿದೆ. ಡೈನೋಸಾರ್ ಗಳ ಕುರಿತಾಗಿ ಇನ್ನಷ್ಟು ಅಧ್ಯಯನ ಗಳನ್ನು ನಡೆಸಲು ಈ ಮೊಟ್ಟೆ ದೊಡ್ಡ ಮಟ್ಟದಲ್ಲಿ ನೆರವನ್ನು ನೀಡಲಿದೆ ಎನ್ನುವುದು ವಿಜ್ಞಾನಿಗಳ ಮಾತಾಗಿದೆ. ಇದೊಂದು ಅತಿ ಅಪರೂಪವಾದ ಡೈನೋಸಾರ್ ಭ್ರೂಣ ಎಂದು ಹೇಳಲಾಗುತ್ತಿದೆ.