6 ವರ್ಷ ಅಲೆದರೂ ಬೆಂಗಳೂರಲ್ಲಿ ಸಮಾಧಿಗೆ ಜಾಗ ಸಿಗಲಿಲ್ಲ, ಯಾರೂ ಬೆಂಬಲ ನೀಡಲಿಲ್ಲ: ಅನಿರುದ್ದ್

Written by Soma Shekar

Published on:

---Join Our Channel---

ಕನ್ನಡ ಚಿತ್ರರಂಗದ ಮೇರು ನಟ, ಚಿತ್ರರಂಗ ಕಂಡಂತಹ ದಿಗ್ಗಜ ನಟ ಸಾಹಸ ಸಿಂಹ ವಿಷ್ಣುವರ್ಧನ್ ಅವರು ನಾಡಿನ ಸಿನಿ ಪ್ರೇಮಿಗಳನ್ನು ಹಾಗೂ ಅಭಿಮಾನಿಗಳನ್ನು ಅಗಲಿ ಮುಂದಿನ ಡಿಸೆಂಬರ್ ಬಂದರೆ ಬರೋಬ್ಬರಿ 12 ವರ್ಷಗಳಾಗುತ್ತಿದೆ. ನಾಡಿನ ಹಲವೆಡೆ ವಿಷ್ಣುವರ್ಧನ್ ಅವರ ಪ್ರತಿಮೆಗಳಿದ್ದು ಅವುಗಳಿಗೆ ಅಭಿಮಾನಿಗಳು ಪೂಜೆ ಸಲ್ಲಿಸುತ್ತಾರೆ. ಅವರ ಅಭಿಮಾನಿ ಸಂಘಗಳು ಅನೇಕ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೆ ಇವೆಲ್ಲವುಗಳ ನಡುವೆ ಬೇಸರ ಮೂಡಿಸುವ ವಿಚಾರವೂ ಸಹಾ ಒಂದು ಇದೆ. ದಶಕಕ್ಕೂ ಅಧಿಕ ಸಮಯ ಕಳೆದರೂ ವಿಷ್ಣುವರ್ಧನ್ ಅವರ ಸಮಾಧಿ ನಿರ್ಮಾಣ ಆಗಿಲ್ಲ.

ವಿಷ್ಣುವರ್ಧನ್ ಅವರ ಸಮಾಧಿ ನಿರ್ಮಾಣಕ್ಕಾಗಿ ಅವರ ಕುಟುಂಬದವರು ಆರು ವರ್ಷಗಳ ಕಾಲ ಸತತ ಪ್ರಯತ್ನ ಮಾಡಿದ, ಈ ಹಾದಿಯಲ್ಲಿ ಎದುರಾದ ಅಡ್ಡಿ ಆತಂಕಗಳ ಬಗ್ಗೆ ನಟ ಅನಿರುದ್ಧ್ ಮಾದ್ಯಮವೊಂದರ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಬೆಂಗಳೂರಿನಲ್ಲಿ ಅಪ್ಪಾಜಿ ಸಮಾಧಿ ಮಾಡಬೇಕೆಂಬ ಆಸೆ ನಮ್ಮೆಲ್ಲಗಿತ್ತು ಆದರೆ ಅದು ಹೇಗೆ ಸಾಧ್ಯ ?ಇಷ್ಟು ವರ್ಷಗಳಲ್ಲಿ ಗೊತ್ತಿಲ್ಲದ ಜಾಗ, ನೋಡಿರದ ಸರ್ಕಾರಿ ಕಛೇರಿ ಗಳು, ವಿಧಾನ ಸೌಧ ಹೀಗೆ ಎಲ್ಲಾ ಕಡೆ ಅಲೆದಿದ್ದೇವೆ.

ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಸಂಬಂಧ ಪಟ್ಟ ಎಲ್ಲರ ಬಳಿ ಬೇಡಿ ಕೊಂಡಿದ್ದೇವೆ. ಆರು ವರ್ಷಗಳ ಕಾಲ ಬೆಂಗಳೂರಿನಲ್ಲಿ ಸಮಾಧಿ ಸ್ಥಳಕ್ಕಾಗಿ ಅಲೆದಾಡಿದ್ದೇವೆ. ಯಾರೂ ಬೆಂಬಲ ನೀಡಲಿಲ್ಲ. ಸರ್ಕಾರ ಜಾಗ ಕೊಟ್ಟರೂ ಅಲ್ಲಿಗೆ ಹೋಗಲು ಕೂಡಾ ಆಗುತ್ತಿರಲಿಲ್ಲ, 2009 ರಿಂದ ಎಲ್ಲಾ ಸಿಎಂ ಗಳ ಬಳಿ ಹೋಗಿದ್ದೇವೆ. ಯಾವ ಜಾಗ ಸಿಕ್ಕರೂ ಸಹಾ ಅಡೆ ತಡೆ ಎದುರಾಗುತ್ತಿತ್ತು. ಕೋರ್ಟ್ ಕೇಸ್ ಗಳನ್ನು ಎದುರಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಅಭಿಮಾನ್ ಸ್ಟುಡಿಯೋ ಪಕ್ಕ ಜಾಗ ದೊರೆಯಿತು ಆದರೆ ಯಾರೋ ಬಂದು ತಕರಾರು ಮಾಡಿದರು.

ಅನಂತರ ಬಿಜಿಎಸ್ ಕಾಲೇಜು ಮುಂಭಾಗದಲ್ಲಿ ಜಾಗ ನಿಗಧಿ ಮಾಡಿದರು ಆದರೆ ಸಮಾಧಿ ಶಂಕುಸ್ಥಾಪನೆ ದಿನವೇ ಸ್ಟೇ ಆರ್ಡರ್ ತಂದರು. ಅದು ಫಾರೆಸ್ಟ್‌ ಬಫೆರ್ ಝೋನ್ ಎಂದರು. ಹೀಗೆ ಸತತ ಆರು ವರ್ಷಗಳು ಬೆಂಗಳೂರಿನಲ್ಲಿ ಸಮಾಧಿ ಸ್ಥಳಕ್ಕೆ ಅಲೆದಾಡಿದ್ದೇವೆ ಆದರೂ ಸಾಧ್ಯವೇ ಆಗಲಿಲ್ಲ ಎಂದು ಅನಿರುದ್ದ್ ಅವರು ತಮ್ಮ‌ ಅಸಮಾಧಾನವನ್ನು ಈ ವೇಳೆ ಹೊರ ಹಾಕಿದ್ದಾರೆ. ನಾನು, ಭಾರತಿ ಅಮ್ಮ, ಬಾಲಣ್ಣ ಅವರ ಕುಟುಂಬ, ಅಂಬರೀಶ್ ಅವರು ಎಲ್ಲರೂ ಪ್ರಯತ್ನ ಮಾಡಿದೆವು.

ನಾನು ಅಭಿಮಾನಿಗಳನ್ನು ಕರೆಸಿ ಸಭೆ ನಡೆಸಿದೆ. ಬೆಂಗಳೂರಿನಲ್ಲಿ ಸಮಾಧಿ ಸಾಧ್ಹವಾಗುತ್ತಿಲ್ಲ, ಮೈಸೂರಿನಲ್ಲಿ ಮಾಡೋಣ ಎಂದು. ಬೆಂಗಳೂರಿನಲ್ಲಿ ಮಾಡುವುದು ಯಾರಿಂದಲೂ ಸಾಧ್ಯವಾಗಲಿಲ್ಲ. ಅಪ್ಪಾಜಿ ಅವರು 224 ಸಿನಿಮಾಗಳನ್ನು ಮಾಡಿದ್ದಾರೆ. ಅಂತಹ ದೊಡ್ಡ ನಟನ ಸಮಾಧಿ ನಿರ್ಮಾಣಕ್ಕೆ ಯಾರೊಬ್ಬರೂ ಸಹಾಯ ಮಾಡಲಿಲ್ಲ. ಅಂಬರೀಶ್ ಅವರಿದ್ದಾಗ ಪ್ರಾಮಾಣಿಕ ಪ್ರಯತ್ನ ನಡೆಯಿತು. ಮಾದ್ಯಮದ ಮುಂದೆ ಮಾತನಾಡುತ್ತಾರೆ,‌ಅದು ಅಷ್ಟಕ್ಕೇ ಸೀಮಿತ. ಆಮೇಲೆ ಮಾತನಾಡುವುದಿಲ್ಲ.

ಮುಂದೆ ಸಿಕ್ಕಾಗ ಮಾತನಾಡಿ ಸುಮ್ಮನಾಗುತ್ತಾರೆ. ಈವರೆಗೆ ನನ್ನ ಅಥವಾ ಭಾರತಿ ಅಮ್ಮನವರ ಬಳಿ ಬಂದು ಯಾರೂ ಮಾತನಾಡಿಲ್ಲ. ಅಪ್ಪಾಜಿ ಇದ್ದಾಗ ಎಲ್ಲರೂ ಅವರ ಹಿಂದೆ ಮುಂದೆ ಇದ್ದರು, ಈಗ ಯಾರೂ ಇಲ್ಲ ಎಂದಷ್ಟೇ ಹೇಳುತ್ತೇನೆ. ಡಾ.ರಾಜ್‍ಕುಮಾರ್, ‌ಅಂಬರೀಶ್, ಪುನೀತ್ ರಾಜ್‍ಕುಮಾರ್ ಎಲ್ಲರೂ ಸಹಾ ಮೇರು ನಟರು. ಅವರಿಗೆ ಸಲ್ಲಬೇಕಾದ ಗೌರವ ಸಂದಿದೆ.‌ ಈ ಬಗ್ಗೆ ಖುಷಿ ಇದೆ.

ಆದರೆ ಅಪ್ಪಾಜಿ ಅವರು ಏನು ಅನ್ಯಾಯ ಮಾಡಿದ್ದಾರೆ?? ಅವರು ಜನರನ್ನು ರಂಜಿಸಿದ್ದೇ ತಪ್ಪಾಯ್ತಾ? ಅಪ್ಪಾಜಿಗೂ ಗೌರವ ನೀಡಿ. ಅವರೂ ಚಿತ್ರರಂಗಕ್ಕಾಗಿ ದುಡಿದಿದ್ದು, ಕೊನೆಯುಸಿರು ಇರುವವರೆಗೂ ಅವರು ಕಲೆಗಾಗಿಯೇ ಜೀವನ ಮುಡಿಪಿಟ್ಟಿದ್ದು, ಈ ರೀತಿ ಮೋಸ, ತಾರತಮ್ಯ ಆಗುತ್ತಿರೋದನ್ನು ಹೇಗೆ ಸಹಿಸೋದಕ್ಕೆ ಸಾಧ್ಯ ಹೇಳಿ?’ ಎಂದು ಅನಿರುದ್ಧ್ ಅವರು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

Leave a Comment