4ನೇ ವಯಸ್ಸಿನಲ್ಲೇ ಎರಡು ಕೈ ಕಳ್ಕೊಂಡ, ಆದರೆ ಕಾಲಿನಿಂದಲೇ ತನ್ನ ಅದೃಷ್ಟ ಬದಲಿಸಿಕೊಂಡ: ಸ್ಪೂರ್ತಿಯ ಕಥೆ

Written by Soma Shekar

Published on:

---Join Our Channel---

ಜೀವನದಲ್ಲಿ ನಾವು ನಮ್ಮ ಸಮಸ್ಯೆಗಳು, ತೊಂದರೆಗಳು ಹಾಗೂ ಪರಿಸ್ಥಿತಿಗಳ ಜೊತೆಗೆ ಹೋರಾಟ ನಡೆಸುತ್ತೇವೆ ಆದರೆ ನಮ್ಮ ಅದೃಷ್ಟವನ್ನು ನಾವು ಬದಲಿಸುವುದು ಸಾಧ್ಯವಿಲ್ಲ. ಬಹಳಷ್ಟು ಜನರು ತಮ್ಮ ದುರದೃಷ್ಟವನ್ನು ನೆನೆದು ಗೋಗರೆಯುವುದುಂಟು. ತಮ್ಮ ದುರಾದೃಷ್ಟವನ್ನು ಶಪಿಸುತ್ತಾ ಕೂರುವ ಇಂತಹವರು ಜನರ ಸಹಾನುಭೂತಿಯ ವಸ್ತುವಾಗಿ ಬಿಡುತ್ತಾರೆ. ಆದರೆ ನಾವು ಇಂದು ನಮಗೆ ಹೇಳಲು ಹೊರಟಿರುವ ವ್ಯಕ್ತಿಯು ಇಂತಹವರಿಗಿಂತ ಭಿನ್ನವಾಗಿದ್ದು, ಅವರು ತಮ್ಮ ಶ್ರಮದಿಂದ ತಮ್ಮ ಜೀವನವನ್ನೇ ಬದಲಾಯಿಸಿಕೊಂಡಿದ್ದಾರೆ.

ತಂದೆ ತಾಯಿ ಪ್ರೀತಿಯನ್ನು ಪಡೆಯದೇ, ಎರಡೂ ಕೈಗಳು ಇಲ್ಲದೇ ಹೋದರೂ ಜಗತ್ತನ್ನು ತನ್ನ ಬಣ್ಣಗಳಿಂದ ತುಂಬುತ್ತಿರುವ ಒಬ್ಬ ಪ್ರತಿಭಾವಂತ ಚಿತ್ರ ಕಲಾಕಾರನ ಬಗ್ಗೆ ನಾವು ಇಂದು ಹೇಳಲು ಹೊರಟಿದ್ದೇವೆ. ಈ ಕಲಾವಿದನ ಹೆಸರು ಸುನೀಲ್ ಕುಮಾರ್. ಬಾಲ್ಯದಲ್ಲಿ ಅವರು ಹರಿಯಾಣದಲ್ಲಿ ಇದ್ದವರು‌. ನಾಲ್ಕು ವರ್ಷ ವಯಸ್ಸಿನ ಪುಟ್ಟ ಬಾಲಕನಾಗಿದ್ದಾಗ ವಿದ್ಯುತ್ ಶಾ ಕ್ ನಿಂದ ಬಾಲಕ ತೀವ್ರವಾಗಿ ಜರ್ಜರಿತನಾದ. ಆಗ ಸುನೀಲ್ ನನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು.

ಆದರೆ ದುರಾದೃಷ್ಟವಶಾತ್ ಆ ಬಾಲಕ ಎರಡೂ ಕೈಗಳನ್ನು ಕಳೆದುಕೊಂಡ. ಆ ಪುಟ್ಟ ಬಾಲಕನ ತಂದೆ ತಾಯಿ ಮಗನನ್ನು ಅಂತಹ ಅಸಹಾಯಕ ಪರಿಸ್ಥಿತಿಯಲ್ಲೇ ಬಿಟ್ಟು ಹೊರಟು ಹೋದರು. ಅವರು ಮುಂದೆ ಬಾಲಕನಿಗೆ ಎದುರಾಗಲಿರುವ ಪರಿಸ್ಥಿತಿಗೆ ಹೆದರಿ, ಮಗನಿಗೆ ಅವರ ಅಗತ್ಯ ಹೆಚ್ಚಾಗಿದ್ದಾಗಲೇ ಆ ಮಗನನ್ನು ಒಂಟಿಯಾಗಿ ಬಿಟ್ಟು ಪಲಾಯನ ಮಾಡಿಬಿಟ್ಟರು. ಆಗ ಒಬ್ಬ ದಯಾಳು ಮಹಿಳೆ ಆ ಬಾಲಕನನ್ನು ಆಸ್ಪತ್ರೆಯಿಂದ ಕರೆದುಕೊಂಡು ಮದರ್ ತೆರೆಸಾ ಹರಿಯಾಣ ಸಾಕೇತ್ ಕೌನ್ಸಿಲ್ ಪರಿಷತ್ ಆಶ್ರಮದಲ್ಲಿ ದಾಖಲು ಮಾಡಿದರು.

ಆ ಆಶ್ರಮದಲ್ಲಿ ವಿಶೇಷ ಚೇತನ ಮಕ್ಕಳಿಗೆ ಆಶ್ರಯವನ್ನು ನೀಡಲಾಗಿತ್ತು. ಇಲ್ಲಿ ವಿಶೇಷ ಚೇತನ ಮಕ್ಕಳಿಗೆ ತಮ್ಮ ಸಾಮಾರ್ಥ್ಯದ ಆಧಾರದಲ್ಲಿ ತಮ್ಮ ಜೀವನವನ್ನು ತಾವು ರೂಪಿಸಿಕೊಳ್ಳಲು ತರಬೇತಿಯನ್ನು ನೀಡಲಾಗುತ್ತದೆ. ಅಲ್ಲಿ ಸುನೀಲ್ ತನ್ನೆಲ್ಲಾ ಕೆಲಸವನ್ನು ತನ್ನ ಕಾಲುಗಳಲ್ಲೇ ಮಾಡುವುದನ್ನು ಕಲಿತುಕೊಂಡರು. ಆಗಲೇ ಅವರು ತಮ್ಮ ಕಾಲಿನಿಂದಲೇ ಬ್ರಷ್ ಹಿಡಿದು ಚಿತ್ರಗಳನ್ನು ಬರೆಯುವುದನ್ನು ಅಭ್ಯಾಸ ಮಾಡಿಕೊಂಡರು. ಹಾಗೆ ಅದರಲ್ಲಿ ಕೌಶಲ್ಯವನ್ನು ಬೆಳೆಸಿಕೊಂಡರು.

ಸುನೀಲ್ ತಮ್ಮ ಕಾಲಿನಿಂದಲೇ ಸುಂದರವಾದ ಚಿತ್ರಗಳನ್ನು ಬಿಡಿಸುವಷ್ಟು ಕುಶಲಮತಿಯಾದರು. ಅವರು ಬರೆವಂತಹ ಚಿತ್ರಗಳನ್ನು ಒಬ್ಬ ಸಾಮಾನ್ಯ ವ್ಯಕ್ತಿ ಕೂಡಾ ಬರೆಯುವುದು ಬಹಳ ಕಷ್ಟ ಎಂದೇ ಹೇಳಬಹುದಾಗಿದೆ. ಸುನೀಲ್ ತಮ್ಮ ಅದೃಷ್ಟವನ್ನು ತಮ್ಮ ಪರಿಶ್ರಮದಿಂದ ತಾವೇ ಬದಲಾಯಿಸಿಕೊಂಡಿದ್ದಾರೆ. ಸುನೀಲ್ ಅವರು ಅನೇಕರಿಗೆ ಅವರ ಜೀವನದಲ್ಲಿ ಮುನ್ನಡೆಯಲು ಇಂದು ಸ್ಪೂರ್ತಿಯಾಗಿದ್ದಾರೆ. ಜೀವನದಲ್ಲಿ ಸೋತು ತಪ್ಪು ನಿರ್ಧಾರ ಮಾಡುವ ಮುನ್ನ ಇಂತಹವರ ಜೀವನದ ಬಗ್ಗೆ ತಿಳಿದರೆ ಖಂಡಿತ ಒಂದು ಸಕಾರಾತ್ಮಕ ಆಲೋಚನೆ ಮೂಡುತ್ತದೆ‌.

ಸುನೀಲ್ ಆಶ್ರಮದಲ್ಲಿ ಇರುವಾಗ ಶಿಕ್ಷಕರ ಸಹಾಯದಿಂದ ಕಾಲು ಬೆರಳುಗಳಲ್ಲಿ ಪೆನ್ನು, ಪೆನ್ಸಿಲ್ ಹಿಡಿಯುವುದು ಮಾತ್ರವೇ ಅಲ್ಲದೇ ಕಂಪ್ಯೂಟರ್ ಕೀ ಬೋರ್ಡ್ ಸಹಾ ಚಾಲನೆ ಮಾಡುವುದನ್ನು ಕಲಿತರು. ಅಲ್ಲದೇ ಕಂಪ್ಯೂಟರ್ ಶಿಕ್ಷಣದಲ್ಲಿ ಡಿಪ್ಲೊಮೊ ಪಡೆದುಕೊಂಡರು. ಆದರೆ ಚಿತ್ರ ಬಿಡಿಸುವ ಆಸಕ್ತಿ ಮಾತ್ರ ಅವರಿಂದ ದೂರಾಗಲಿಲ್ಲ. ದಿನಕಳೆದಂತೆ ಸುನೀಲ್ ಅವರ ಚಿತ್ರ ಬರೆಯುವ ಸಾಮರ್ಥ್ಯ ಇನ್ನಷ್ಟು, ಮತ್ತಷ್ಟು ಅರಳಿತು, ಅದ್ಭುತ ಕಲಾಕೃತಿಗಳು ಅವರ ಕಾಲುಗಳಿಂದ ಅರಳಿದವು.

ಸೇವ್ ಪಾಂಡ ಎನ್ನುವ ಥೀಮ್ ನಲ್ಲಿ ಸುನೀಲ್ ಬರೆದ ಚಿತ್ರಕ್ಕೆ ರಾಷ್ಟ್ರಪತಿ ಪ್ರತಿಭಾ ದೇವಿ ಸಿನ್ಹಾ ಪಾಟೀಲ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಗೌರವದ ನಂತರ ಸುನೀಲ್ ಇದನ್ನೇ ತಮ್ಮ ವೃತ್ತಿ ಜೀವನವನ್ನಾಗಿ ಮಾಡಿಕೊಂಡರು. ಅಲ್ಲದೇ ಸುನೀಲ್ ಅವರ ಪೈಂಟಿಂಗ್ ಗಳು ದೊಡ್ಡ ಬೆಲೆಗೆ ಮಾರಾಟವಾಗುತ್ತದೆ, ಶ್ರೀಮಂತರ ಮನೆಗಳಲ್ಲಿ ಸುನಿಲ್ ಅವರ ಪೈಂಟಿಂಗ್ ಗಳು ಗೋಡೆಗಳನ್ನು ಅಲಂಕರಿಸಿವೆ. ಸುನೀಲ್ ಇಡೀ ಜಗತ್ತಿಗೆ ನಾವು ಜೀವನವನ್ನು ಅದೃಷ್ಟದಿಂದಲ್ಲ ನಮ್ಮ ಪರಿಶ್ರಮದಿಂದ ಬದಲಿಸಬಹುದು ಎಂದು ಸಾಬೀತು ಮಾಡಿದ್ದಾರೆ.

ಸುನೀಲ್ ಅವರ ಕೌಶಲ್ಯ ಇಂದು ಇಡೀ ಜಗತ್ತಿಗೆ ಗೊತ್ತಾಗಿದೆ ಎಂದರೆ ಅದಕ್ಕೆ ಪ್ರಮುಖ ಕಾರಣ ಕೆಪಾಸಿಟಿ ಫೌಂಡೇಶನ್‌. ಈ ಸಂಸ್ಥೆ ವಿಶೇಷ ಚೇತನರನ್ನು ಸಾಮಾನ್ಯರಂತೆ ಜೀವನ ನಡೆಸುವಂತೆ ಸಜ್ಜುಗೊಳಿಸುತ್ತದೆ. ಈ ಸಂಸ್ಥೆಯು ಸುನೀಲ್ ಅವರ ಕಲಾಕೃತಿಗಳನ್ನು ವಿವಿಧ ಪ್ಲಾಟ್ ಫಾರ್ಮ್ ಗಳಲ್ಲಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿ ಅವರ ಪ್ರತಿಭೆಯನ್ನು ಜಗತ್ತಿನ ಮುಂದೆ ಬರುವಂತೆ ಮಾಡಿದೆ. ಈ ಸಂಸ್ಥೆ ಸುನೀಲ್ ರಂತಹ ಅನೇಕ ವಿಶೇಷ ಚೇತನರ ಪ್ರತಿಭೆಗೆ ವೇದಿಕೆಯನ್ನು ಸೃಷ್ಟಿಸಿದೆ.

Leave a Comment