37 ವರ್ಷಕ್ಕೂ ಮೊದಲು ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ಸಾಧಕ:ಇಂದು ಅಜ್ಞಾತದಲ್ಲಿ ನಡೆಸಿದ್ದಾರೆ ಜೀವನ

0 0

ಟೋಕಿಯೋ ಒಲಂಪಿಕ್ಸ್ ನಲ್ಲಿ ನೀರಜ್ ಚೋಪ್ರಾ ಬಂಗಾರದ ಪದಕವನ್ನು ಗೆದ್ದ ನಂತರ ಎಲ್ಲೆಲ್ಲೂ ಅವರದ್ದೇ ಸುದ್ದಿಗಳು ರಾರಾಜಿಸುತ್ತಿವೆ. ನೀರಜ್ ಒಂದು ಹೊಸ ಇತಿಹಾಸವನ್ನು ರಚಿಸಿದ್ದಾರೆ. ಆದರೆ ಇದೇ ರೀತಿ ದೇಶಕ್ಕಾಗಿ ಬಂಗಾರದ ಪದಕವನ್ನು ಗೆದ್ದ ಕ್ರೀಡಾಪಟುವೊಬ್ಬರು ನಮ್ಮ ದೇಶದಲ್ಲಿದ್ದು, ಅವರಿಂದು ಅಜ್ಞಾತ ವಾಗಿ ಜೀವನವನ್ನು ನಡೆಸುತ್ತಿದ್ದಾರೆ ಎಂದರೆ ನಂಬುತ್ತೀರಾ?? ಇಲ್ಲ ಎನ್ನುವುದಾದರೆ ಇಂದು ನಾವು ನಿಮಗೆ ಅವರ ಪರಿಚಯವನ್ನು ಮಾಡಿಕೊಡಲಿದ್ದೇವೆ. ಉತ್ತರ ಪ್ರದೇಶದ ಆಗ್ರಾದ ಫತೇಹ್ ಬಾದ್ ಬ್ಲಾಕ್ ನಲ್ಲಿ ಆಯಿ ಎನ್ನುವ ಹೆಸರಿನ ಗ್ರಾಮವೊಂದಿದೆ. ಇಲ್ಲಿ ಸರ್ನಾಮ್ ಸಿಂಗ್ ವಾಸಿಸುತ್ತಿದ್ದಾರೆ. ಇವರ ಹೆಸರು ಅಜ್ಞಾತ ಅಥವಾ ಅಪರಿಚಿತ ಎನ್ನಬಹುದು. ಆದರೆ ಇವರು ದೇಶಕ್ಕಾಗಿ ಬಂಗಾರದ ಪದಕವನ್ನು ಗೆಲ್ಲುವ ಸಾಧನೆಯನ್ನು ಮೆರೆದಿದ್ದಾರೆ.

ಸುಮಾರು 37 ವರ್ಷಗಳ ಹಿಂದೆ ನೇಪಾಳದಲ್ಲಿ ದಕ್ಷಿಣ ಏಷ್ಯಾ ಕ್ರೀಡಾಕೂಟವು ( SAIF ) ನಡೆದಾಗ ಸರ್ನಾಮ್ ಸಿಂಗ್ ಅದರಲ್ಲಿ ಭಾಗವಹಿಸಿ ಜಾವೆಲಿನ್ ಥ್ರೋ ನಲ್ಲಿ ಬಂಗಾರದ ಪದಕವನ್ನು ಗೆದ್ದರು. ಆದರೆ ಇಂದಿನ ಹಾಗೆ ಮಾದ್ಯಮಗಳು ಹೆಚ್ಚು ಸಕ್ರಿಯವಾಗಿರದ ಕಾರಣ ಇಂದಿಗೂ ಅವರ ಸಾಧನೆ ತೆರೆ ಮರೆಯಲ್ಲಿ ಉಳಿದಿವೆ. ಸರ್ನಾಮ್ ಸಿಂಗ್ ತಮ್ಮ 20 ನೇ ವಯಸ್ಸಿನಲ್ಲಿಯೇ ಸೈನ್ಯಕ್ಕೆ ಸೇರಿದ್ದರು. ಆಗ ಅವರ ತಮ್ಮ ಎತ್ತರದಿಂದಾಗಿ ನಾಲ್ಕು ವರ್ಷಗಳ ಕಾಲ ಸೈನ್ಯದಲ್ಲಿ ಬ್ಯಾಸ್ಕೆಟ್ ಬಾಲ್ ಟೀಂ ನ ಆಟಗಾರ ಆಗಿದ್ದರು. ಆಗಲೇ ಅವರ ಜೊತೆಗಾರರು ಅವರಿಗೆ ಅಥ್ಲೀಟ್ ಆಗುವಂತೆ ಸಲಹೆಯನ್ನು ನೀಡಿದರು.

ಸ್ನೇಹಿತರ ಸಲಹೆ ಮೇರೆಗೆ ಅವರು ಬ್ಯಾಸ್ಕೆಟ್ ಬಾಲ್ ಬಿಟ್ಟು ಜಾವೆಲಿನ್ ಎಸೆತದ ಅಭ್ಯಾಸವನ್ನು ಆರಂಭಿಸಿದರು. 1982 ರಲ್ಲಿ ಏಷ್ಯಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಸ್ಪರ್ಧಿಗಳ ಆಯ್ಕೆಯಲ್ಲಿ ಸರ್ನಾಮ್ ಸಿಂಗ್ ನಾಲ್ಕನೇ ಸ್ಥಾನ ಪಡೆದರು. ಆದರೆ ತರಬೇತಿ ಅವಧಿಯಲ್ಲಿ ಆದ ಪೆಟ್ಟಿನಿಂದ ಆರು ತಿಂಗಳು ವಿಶ್ರಾಂತಿ ಪಡೆಯಬೇಕಾಯಿತು. ನಂತರ 1984 ರಲ್ಲಿ ನೇಪಾಳದಲ್ಲಿ ಆಯೋಜಿಸಲಾದ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ,ಜಾವೆಲಿನ್ ಥ್ರೋ ನಲ್ಲಿ ಬಂಗಾರದ ಪದಕ ಗೆದ್ದರು. ಅವರ ಸಾಧನೆ ಅಲ್ಲಿಗೇ ಮುಗಿಯಲಿಲ್ಲ. ನಂತರ 1985 ರಲ್ಲಿ ಅವರು 78.38 ಮೀಟರ್ ಜಾವೆಲಿನ್ ಎಸೆದು, ಗುರುತೇಜ್ ಸಿಂಗ್ ಅವರ 76.74 ಮೀ. ರಾಷ್ಟ್ರೀಯ ದಾಖಲೆ ಮುರಿದು ಹೊಸ ದಾಖಲೆ ಬರೆದರು.

ಅವರು ಮುಂಬೈನಲ್ಲಿ ನಡೆದ ಓಪನ್ ನ್ಯಾಷನಲ್ ಗೇಮ್ಸ್ ನಲ್ಲಿ ಜಾವೆಲಿನ್ ಥ್ರೋನಲ್ಲಿ ಎರಡನೇ ಸ್ಥಾನ ತನ್ನದಾಗಿಸಿಕೊಂಡರು. ನಂತರ 1985 ರಲ್ಲಿ, ಅವರು ಜಕಾರ್ತದಲ್ಲಿ ನಡೆದ ಏಷ್ಯನ್ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಯಲ್ಲಿ ಐದನೇ ಸ್ಥಾನ ಪಡೆದರು, 1989 ರಲ್ಲಿ ಅವರು ದೆಹಲಿಯಲ್ಲಿ ನಡೆದ ಏಷ್ಯನ್ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದರು. ಹೀಗೆ ಸಾಕಷ್ಟು ಸಾಧನೆಗಳನ್ನು ಮೆರೆದ ಸರ್ನಾಮ್ ಸಿಂಗ್ ಅವರ ಈ ಸಾಧನೆಗೆ ಒಂದೇ ಒಂದು ಸಾವಿರ ಬಹುಮಾನ ಕೂಡಾ ಇದುವರೆಗೂ ಸಿಕ್ಕಿಲ್ಲ ಎನ್ನುವುದು ವಿಷಾದನೀಯ. 1985 ರಲ್ಲಿ ಅವರ ದಾಖಲೆ ಬರೆದಾಗ ಒಂದು ಸಾವಿರ ಬಹುಮಾನ ನೀಡುವ ವಿಚಾರ ಮಾತನಾಡಿದರಾದರೂ ಅದು ಅವರ ಕೈ ಸೇರಲಿಲ್ಲ.

ಸರ್ನಾಮ್ ಸಿಂಗ್ ಅವರು ಸರ್ಕಾರವನ್ನು ಎಂದಿಗೂ ದೂರಿಲ್ಲ. ಅವರು ಸೇನೆಯಿಂದ ನಿವೃತ್ತಿ ಪಡೆದಿದ್ದಾರೆ. ತಾವಿರುವ ಗ್ರಾಮದಲ್ಲಿ ಜಾವೆಲಿನ್ ಥ್ರೋ ನಲ್ಲಿ ಆಸಕ್ತಿಯಿರುವ ಮಕ್ಕಳಿಗೆ ತರಬೇತಿಯನ್ನು ನೀಡುತ್ತಿದ್ದಾರೆ. ಸರ್ನಾಮ್ ಸಿಂಗ್ ಅವರು ಭಾರತದ ಗ್ರಾಮಗಳಲ್ಲಿ ಬಹಳಷ್ಟು ಜನ ಪ್ರತಿಭಾವಂತರಿದ್ದು ಅವರಿಗೆ ಸರಿಯಾದ ಮಾರ್ಗದರ್ಶನ ಹಾಗೂ ತರಬೇತಿಯ ಅವಶ್ಯಕತೆ ಇದೆ ಎಂದು ಹೇಳುತ್ತಾರೆ. ಅಲ್ಲದೇ ಗ್ರಾಮಗಳ ಮಕ್ಕಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಅವಕಾಶಗಳ ಅಗತ್ಯವಿದೆ ಎಂದಿದ್ದಾರೆ.

Leave A Reply

Your email address will not be published.