ಕೆಲಸ ಮಾಡುವ ತಮ್ಮ ಉದ್ಯೋಗಿಗಳಿಗೆ ಹೆಚ್ಚಿನ ಹುಮ್ಮಸ್ಸು ಹಾಗೂ ಉತ್ಸಾಹವನ್ನು ನೀಡುವ ಸಲುವಾಗಿ, ಅವರಿಗೆ ಇನ್ನಷ್ಟು ಕಂಪನಿಯ ಬಗ್ಗೆ ಒಲವನ್ನು ಮೂಡಿಸುವ ಸಲುವಾಗಿ ಕಂಪನಿಗಳು ಸಂಬಳ ಹೆಚ್ಚಿಸುವುದು, ಬೋನಸ್ ಗಳನ್ನು ಪ್ರಕಟಣೆ ಮಾಡುವಂತಹ ಕಾರ್ಯಗಳನ್ನು ಮಾಡುತ್ತದೆ. ಕಂಪನಿಗಳು ತಮ್ಮ ಲಾಭವನ್ನು ದೃಷ್ಟಿಯಲ್ಲಿಟ್ಟುಕೊಂಡು, ಕೆಲವೊಂದು ನಿಬಂಧನೆಗಳನ್ನು ಪಾಲಿಸುತ್ತಾ ತಮ್ಮ ಉದ್ಯೋಗಿಗಳ ಆರ್ಥಿಕ ಅವಶ್ಯಕತೆಗಳನ್ನು ಪೂರೈಕೆ ಮಾಡುತ್ತವೆ. ಇದು ಸಾಮಾನ್ಯವಾಗಿ ಎಲ್ಲಾ ಕಂಪನಿಗಳಲ್ಲೂ ಕಂಡುಬರುವಂತಹ ವಿಚಾರಗಳಾಗಿವೆ.
ಆದರೆ ಈಗ ಇವೆಲ್ಲವುಗಳಿಗಿಂತ ಭಿನ್ನವಾಗಿ ಚೀನಾದಲ್ಲಿ ಕಂಪನಿಯೊಂದು ಎರಡನೇ ಬಾರಿ ಮತ್ತು ಮೂರನೇ ಬಾರಿ ಮಕ್ಕಳಿಗೆ ಜನ್ಮ ನೀಡುವ ತಮ್ಮ ಉದ್ಯೋಗಿಗಳಿಗೆ ಬಂಪರ್ ಆಫರ್ ಪ್ರಕಟಣೆ ಮಾಡಿದ್ದು ಈ ಸುದ್ದಿ ಈಗ ವೈರಲ್ ಆಗಿದೆ. ಚೀನಾದ ರಾಜಧಾನಿ ಬೀಜಿಂಗಿನಲ್ಲಿ ನ ಗಲ ದಬಿನಾಂಗ್ ಟೆಕ್ನಾಲಜಿ ಗ್ರೂಪ್ ಎನ್ನುವ ಕಂಪನಿಯೊಂದು ಇಂತಹ ವಿಶೇಷವಾದ ಸೌಲಭ್ಯವನ್ನು ತನ್ನ ಉದ್ಯೋಗಿಗಳಿಗೆ ನೀಡಲು ಮುಂದಾಗಿರುವ ವಿಷಯ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ ಎಲ್ಲರ ಗಮನವನ್ನು ಸೆಳೆಯುತ್ತಿದೆ.
ಕಂಪನಿ ತನ್ನ ಉದ್ಯೋಗಿಗಳಲ್ಲಿ ಮೂರನೇ ಮಗುವಿಗೆ ಜನ್ಮ ನೀಡಿದ ಅವರಿಗೆ 90000 ಯುವಾನ್ ನಗದು ಬಹುಮಾನವನ್ನು ಘೋಷಣೆ ಮಾಡಿದೆ. ಅಂದರೆ ಭಾರತೀಯ ಕರೆನ್ಸಿಯ ಪ್ರಕಾರ ಸುಮಾರು ಹನ್ನೊಂದೂವರೆ ಲಕ್ಷ ರೂಪಾಯಿಗಳನ್ನು ನೀಡುತ್ತದೆ. ಮಗುವಿಗೆ ಜನ್ಮ ನೀಡಿದ ಮಹಿಳಾ ಉದ್ಯೋಗಿಗೆ 1 ವರ್ಷದ ಸಂಬಳ ಸಹಿತ ರಜೆಯನ್ನು, ಒಂದು ವೇಳೆ ಪತ್ನಿಗೆ ಮಗುವಾದರೆ ಅಂತಹ ಪುರುಷ ಉದ್ಯೋಗಿಗೆ 9 ತಿಂಗಳ ಸಂಬಳ ಸಹಿತ ರಜೆಯನ್ನು ಕಂಪನಿ ನೀಡುತ್ತದೆ ಎಂದು ತಾನು ನೀಡಿರುವ ಆಫರ್ ನಲ್ಲಿ ವಿವರಿಸಿದೆ.
ಇನ್ನು ಎರಡನೇ ಮಗುವಿಗೆ ಜನ್ಮ ನೀಡಿದವರಿಗೆ ಏಳು ಲಕ್ಷ ರೂಪಾಯಿಗಳ ನಗದು ಬಹುಮಾನ, ಮೊದಲನೇ ಮಗುವಿಗೆ ಜನ್ಮ ನೀಡಿದವರಿಗೆ ಮೂರುವರೆ ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು ಘೋಷಣೆ ಮಾಡಲಾಗಿದೆ. ಈ ಮೂಲಕ ದೇಶದಲ್ಲಿ ಜನನ ಪ್ರಮಾಣವನ್ನು ಹೆಚ್ಚಿಸುವುದಕ್ಕಾಗಿ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸುತ್ತಿರುವುದಾಗಿ ಕಂಪನಿಯು ಹೇಳಿಕೊಂಡಿದೆ.