17 ವರ್ಷಗಳಿಂದ ದಟ್ಟ ಕಾಡಲ್ಲಿ ಈತನ ಒಂಟಿ ಜೀವನ: ಕಾರೇ ಸೂರು, ವನ್ಯ ಜೀವಿಗಳೇ ನೆರೆ ಹೊರೆ
ಪ್ರಕೃತಿ ಒಂದು ರಮಣೀಯ ತಾಣ. ಪ್ರಕೃತಿಯ ಸೌಂದರ್ಯಕ್ಕೆ ಮನ ಸೋಲದವರೇ ಇಲ್ಲ. ಹಾಗೆಂದು ಪ್ರಕೃತಿಯ ರಮಣೀಯತೆಯಲ್ಲಿ ಕಳೆದು ಹೋಗಿ ಹಸಿರು ವನಸಿರಿಯ ನಡುವೆ ಜೀವನವನ್ನು ಕಟ್ಟಿಕೊಳ್ಳುವುದು ಸುಲಭವಾದ ಕೆಲಸ ಖಂಡಿತ ಅಲ್ಲ. ಆದರೆ ಇಲ್ಲೊಬ್ಬ ವ್ಯಕ್ತಿ ಕಳೆದ 17 ವರ್ಷಗಳಿಂದಲೂ ಕಾಡಿನ ಮಧ್ಯೆ ಒಂಟಿಯಾಗಿ ಜೀವನವನ್ನು ನಡೆಸುತ್ತಿದ್ದಾರೆ. ಕಾಡು ಹಾಗೂ ಆ ಕಾಡಿನ ಪ್ರಾಣಿಗಳು ಅವರ ಸ್ನೇಹಿತರು ಹಾಗೂ ಬಂಧುಗಳಾಗಿದ್ದು, ಪ್ರಕೃತಿಯ ಮಡಿಲು ಅವರ ನಿವಾಸ ಸ್ಥಾನವಾಗಿದೆ. ಹಾಗಿದ್ದರೆ ಯಾರು ಈ ವ್ಯಕ್ತಿ?? ಏಕೆ ಅವರು ಅರಣ್ಯ ವಾಸ ಮಾಡುತ್ತಿದ್ದಾರೆ?? ಎನ್ನುವ ವಿಚಾರವನ್ನು ತಿಳಿಯೋಣ ಬನ್ನಿ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಿಂದ ಸ್ವಲ್ಪ ದೂರದಲ್ಲಿರುವ ಅರಂತೋಡು ಗ್ರಾಮದ ಅರ್ಥವೇ ಅಡ್ತೆಲೆ ನೆಕ್ಕರೆಯ ದುರ್ಗಮ ಅರಣ್ಯದ ಹಾದಿಯಲ್ಲಿ ನಡೆದುಕೊಂಡು ಹೋದರೆ, ಆ ಹಾದಿಯಲ್ಲಿ ಪ್ಲಾಸ್ಟಿಕ್ ಹೊದಿಕೆಯನ್ನು ಹಾಕಿದ ಒಂದು ಸಣ್ಣ ಗುಡಿಸಲು ಕಾಣುತ್ತದೆ. ಆ ಗುಡಿಸಲಿನ ಒಳಗೆ ಹೋದರೆ ಅಲ್ಲೊಂದು ಹಳೆಯ ಅಂಬಾಸಿಡರ್ ಕಾರು ಅದರ ಮೇಲೆ ಇರುವ ಹಳೆಯ ರೇಡಿಯೋದಿಂದ ಹೊರ ಬರುತ್ತಿರುವ ಹಿಂದಿ ಹಾಡುಗಳು ಜನರಿಗೆ ಸ್ವಾಗತವನ್ನು ನೀಡುತ್ತದೆ.
ಇಂತಹ ದುರ್ಗಮವಾದ ಅರಣ್ಯದ ನಡುವೆ ಒಂಟಿಯಾಗಿ ಬದುಕುತ್ತಿರುವ ಈ ವ್ಯಕ್ತಿಯ ಹೆಸರು ಚಂದ್ರಶೇಖರ್. ಇವರು ಮೂಲತಃ ಸುಳ್ಯ ತಾಲೂಕಿನ ನೆಕ್ರಾಲ್ ಕೆಮ್ರಾಜೆ ಎನ್ನುವ ಗ್ರಾಮದವರು. 2013 ರವರೆಗೆ ಇವರು ಕೂಡಾ ಸಾಮಾನ್ಯರಂತೆ ಬದುಕುತ್ತಿದ್ದವರು. ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಅಡಿಕೆ ಕೃಷಿಯನ್ನು ಮಾಡುತ್ತಿದ್ದರು. ಈ ವೇಳೆ ಅವರು ಎಲಿಮಲೆ ಸಹಕಾರಿ ಬ್ಯಾಂಕಿನಿಂದ 40,000 ರೂಪಾಯಿಗಳ ಸಾಲವನ್ನು ಪಡೆದುಕೊಂಡಿದ್ದರು.
ಆದರೆ ಸಾಲವನ್ನು ತೀರಿಸಲು ಸಾಧ್ಯವಾಗದೇ ಅವರು ಇಕ್ಕಟ್ಟಿಗೆ ಸಿಲುಕಿದಾಗ, ಬ್ಯಾಂಕ್ ಅವರ ಜಮೀನನ್ನು ಹರಾಜು ಮಾಡಿ ಸಾಲವನ್ನು ಹಿಂಪಡೆಯಿತು. ಆದರೆ ತನ್ನ ಕೃಷಿ ಜಮೀನನ್ನು ಸಣ್ಣ ಮೊತ್ತಕ್ಕೆ ಬ್ಯಾಂಕ್ ಮಾರಾಟವನ್ನು ಮಾಡಿ, ನನಗೆ ಮೋಸ ಮಾಡಿದೆ ಎಂದು ಚಂದ್ರಶೇಖರ್ ಅವರು ತಮ್ಮ ಅಂಬಾಸಿಡರ್ ಕಾರಿನೊಡನೆ ಗ್ರಾಮವನ್ನು ತೊರೆದು, ಅರಂತೆಲೆ ಗ್ರಾಮದ ಅಡ್ತೆಲೆಯಲ್ಲಿನ ಅವರ ಅಕ್ಕನ ಮನೆಗೆ ಬಂದು ಸೇರಿದರು. ಆದರೆ ಅಲ್ಲೂ ಸ್ವಲ್ಪ ಕಾಲದ ನಂತರ ಮನಸ್ತಾಪ ಉಂಟಾಗಿ ಅವರು ಒಂಟಿಯಾಗಿ ಇರಲು ನಿರ್ಧರಿಸಿದರು.
ಇದಾದ ಮೇಲೆ ಅವರು ಕಾಡಿನೊಳಕ್ಕೆ ಪ್ರವೇಶ ಮಾಡಿದರು. ತಮ್ಮ ಕಾರಿನ ಮೇಲೆ ಪ್ಲಾಸ್ಟಿಕ್ ಹೊದಿಕೆಯನ್ನು ಹಾಕಿ, ಒಂಟಿಯಾಗಿ ಜೀವನ ನಡೆಸಲು ಆರಂಭಿಸಿ 17 ವರ್ಷಗಳೇ ಕಳೆದಿವೆ. ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲದ ಅರಣ್ಯದಲ್ಲಿ ಯಾರ ಸಹಾಯವನ್ನು ಕೇಳದೇ ಅವರು ಸ್ವಾವಲಂಬಿ ಬದುಕನ್ನು ನಡೆಸುತ್ತಿದ್ದಾರೆ. ಕಾಡಿನಲ್ಲಿ ಸಿಗುವ ಬಳ್ಳಿಗಳಿಂದ ಬುಟ್ಟಿಯನ್ನು ತಯಾರಿಸುತ್ತಾರೆ. ಅಡ್ತೆಲೆ ಗ್ರಾಮದ ಅಂಗಡಿಯೊಂದಕ್ಕೆ ಬುಟ್ಟಿ ಮಾರಾಟ ಮಾಡಿ, ಅಕ್ಕಿ ಹಾಗೂ ಸಕ್ಕರೆಯಂತಹ ಆಹಾರ ಸಾಮಗ್ರಿಗಳನ್ನು ಪಡೆದುಕೊಳ್ಳುತ್ತಾರೆ.
ಈ ಹಿಂದೆ ಒಮ್ಮೆ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಎ.ಬಿ. ಅಬ್ರಹಾಂ ಅವರು ಚಂದ್ರಶೇಖರ್ ಅವರು ಇದ್ದ ಸ್ಥಳಕ್ಕೆ ತಲುಪಿ, ಅವರಿಗೆ ಮನೆ ನಿರ್ಮಾಣ ಮಾಡಿ ಕೊಡಿಸುವ ಭರವಸೆಯನ್ನು ನೀಡಿದರು. ಜಿಲ್ಲಾಧಿಕಾರಿಗಳು ಅವರ ಮಾತಿನಂತೆ ನಡೆದುಕೊಂಡರು. ಆದರೆ ಅಧಿಕಾರಿಗಳು ಅವರಿಗೆ ನೀಡಿದ ಜಾಗ ಒಂದು ರಬ್ಬರ್ ಕಾಡಾಗಿತ್ತು. ಆ ಸ್ಥಳ ಹಿಡಿಸದ ಚಂದ್ರಶೇಖರ್ ಅವರು ಮತ್ತೆ ತಾನು ವಾಸವಾಗಿದ್ದ ಕಾಡಿಗೆ ಮರಳಿದ್ದಾರೆ.
ಚಂದ್ರಶೇಖರ ಅವರು ಇರುವ ಜಾಗದಲ್ಲಿ ವನ್ಯಮೃಗಗಳು ಆಗಾಗ ಅವರ ಕಾರಿನ ವರೆಗೂ ಬರುವುದುಂಟು. ರಾತ್ರಿ ವೇಳೆ ಹಾವುಗಳು ಅವರ ಕಾರಿನೊಳಗೆ ನುಸುಳುವುದುಂಟು. ಆದರೆ ಅವುಗಳಿಂದ ಅವರಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಪ್ರಕೃತಿಯ ನಡುವೆ ಇದ್ದರೂ ಪ್ರಕೃತಿಗೆ ಅವರು ಎಂದು ಅಪಚಾರ ಎಸಗಿಲ್ಲ. ಮರಗಿಡಗಳಿಗೆ ಹಾನಿ ಉಂಟು ಮಾಡಿಲ್ಲ. ಕೇವಲ ಬುಟ್ಟಿಗಳ ತಯಾರಿಕೆಗಾಗಿ ಬಳ್ಳಿಯನ್ನು ಬಳಸಿಕೊಳ್ಳುತ್ತಾರೆ.
ಅರಣ್ಯ ಸಂಪತ್ತಿಗೆ ಆಸೆ ಪಡದೆ ಬದುಕುತ್ತಿರುವ ಅವರಿಗೆ ಅರಣ್ಯ ಇಲಾಖೆಯೇ ವಾಸಿಸಲು ಅನುಮತಿ ಯನ್ನು ನೀಡಿದೆ. ಹೀಗೆ ಅರಣ್ಯ ಇಲಾಖೆ ತನ್ನ ಮೇಲೆ ಇಟ್ಟಿರುವ ನಂಬಿಕೆಗೆ ನಾನು ಮೋಸ ಮಾಡಲು ಇಷ್ಟಪಡುವುದಿಲ್ಲ ಎಂದು ಚಂದ್ರಶೇಖರ್ ಅವರು ಪ್ರಾಮಾಣಿಕತೆಯನ್ನು ಮೆರೆಯುತ್ತಾರೆ. ಪ್ರಕೃತಿಯ ನಡುವೆ ಪ್ರಕೃತಿಯ ಮಾತೆಯ ಮಗನಂತೆ ಇರುವ ಅವರ ಜೀವನ ಬಹಳ ವಿಶಿಷ್ಟವಾಗಿದೆ.
ಆದರೆ ಚಂದ್ರಶೇಖರ್ ಅವರು ಎಂದಾದರೂ ತಮ್ಮ ಜಮೀನು ಮರಳಿ ಸಿಗುವುದು ಎಂದು ಕಾಗದ ಪತ್ರಗಳನ್ನು ಭದ್ರವಾಗಿ ಇರಿಸಿಕೊಂಡಿದ್ದು, ಮುಂದೊಂದು ದಿನ ಜಮೀನು ಹಾಗೂ ವಾಸವಿರಲು ಒಂದು ಉತ್ತಮವಾದ ಸೂರು ಸಿಗುವುದು ಎಂದು ನಂಬಿ ಜೀವನವನ್ನು ನಡೆಸಿದ್ದಾರೆ.