150 ರೂ.ಗೆ ದುಡಿಮೆ ಶುರು ಮಾಡಿದ,1.5 ಕೋಟಿ ಬೆಲೆಯ ಕಾರಿನ ಮಾಲೀಕನಾದ: ಶ್ರಮ ನಂಬಿದ ನಿಜವಾದ ಸಾಧಕ

0
210

ಜೀವನದಲ್ಲಿ ಯಾರು ಶ್ರಮ ಪಡುತ್ತಾರೆಯೋ ದೇವರ ಆಶೀರ್ವಾದ ಅವರ ಮೇಲೆ ಇರುತ್ತದೆ ಎಂದು ಹೇಳಲಾಗುತ್ತದೆ. ಯಾರು ಕಠಿಣತೆಯನ್ನು ಎದುರಿಸಿ ಯಶಸ್ಸಿನ ಹಾದಿಯಲ್ಲಿ ಸಾಗುವ ಪ್ರಯತ್ನ ಮಾಡುವರೋ ಅಂತಹವರ ಅದೃಷ್ಟವು ಹೊಳೆಯುತ್ತದೆ ಎಂದು ಹೇಳಬಹುದು. ನಮ್ಮ ಸುತ್ತ ಮುತ್ತ ಇಂತಹ ಸಾಧನೆಯನ್ನು ಮೆರೆದ ಮಂದಿ ಬೆರಳೆಣಿಕೆಯಷ್ಟು ಇದ್ದಾರೆ. ಆದರೆ ಅವರು ಅನೇಕರಿಗೆ ಇಂದು ಸ್ಪೂರ್ತಿ ಆಗಿದ್ದಾರೆ. ಮಧ್ಯಪ್ರದೇಶದ ಕಟಾಲಾ ಎಂಬಲ್ಲಿ ಜನಿಸಿದ ರಾಹುಲ್ ತನೇನಾ ಅವರ ಜೀವನವು ಇಂತಹದೇ ಒಂದು ಸಾಧನೆಗೆ ಅತ್ಯುತ್ತಮ ಉದಾಹರಣೆಯಾಗಿದೆ.

150 ರೂ.‌ಗೆ ಡಾಬಾದಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ಮುಂದೊಂದು ದಿನ 1.5 ಕೋಟಿ ರೂಪಾಯಿ ಬೆಲೆಬಾಳುವ ಕಾರಿನ ಒಡೆಯ ಆಗಬಹುದು ಎಂದು ಊಹೆಯನ್ನೂ ಮಾಡಿರಲಿಲ್ಲ. ಈ ವಿಷಯ ಆಶ್ಚರ್ಯವನ್ನು ಉಂಟು ಮಾಡಿದರೂ ಇದು ವಾಸ್ತವ ಆಗಿದೆ. ಇತ್ತೀಚಿಗಷ್ಟೇ ತಮ್ಮ ದುಬಾರಿ ಕಾರಿಗೆ 16 ಲಕ್ಷ ರೂಪಾಯಿಗಳನ್ನು ಪಾವತಿಸಿ ವಿಐಪಿ ನಂಬರ್ ಪ್ಲೇಟ್ ಪಡೆಯುವ ಮೂಲಕ ರಾಹುಲ್ ದೇಶದಲ್ಲಿ ಅತ್ಯಧಿಕ ಬೆಲೆ ನೀಡಿ ನಂಬರ್ ಖರೀದಿಸಿದ ವ್ಯಕ್ತಿ ಎಂಬುದಾಗಿಯೂ ಸುದ್ದಿಯಾಗಿದ್ದರು.

ಹಾಗಾದರೆ ಬನ್ನಿ, ಬಡತನದಿಂದ ಸಿರಿತನದ ಕಡೆಗೆ ಹೆಜ್ಜೆ ಹಾಕಿದ ಈ ಸಾಧಕನ ಜೀವನದ ಬಗ್ಗೆ ಒಂದಷ್ಟು ವಿಚಾರಗಳನ್ನು ತಿಳಿಯೋಣ. ರಾಹುಲ್ ಅವರಿಗೆ ಯಶಸ್ಸು ಎನ್ನುವುದು ರಾತ್ರೋರಾತ್ರಿ ಸಿಕ್ಕಿದ್ದಲ್ಲ, ಬದಲಿಗೆ ಅದು ಹಲವು ವರ್ಷಗಳ ಕಠಿಣ ಪರಿಶ್ರಮದ ಫಲವಾಗಿದೆ. ರಾಹುಲ್ ಅವರ ಕುಟುಂಬ ಜಯಪುರದಲ್ಲಿ ನೆಲೆಸಿತ್ತು. ಅವರ ತಂದೆ ಪಂಕ್ಚರ್ ಹಾಕುವ ಕೆಲಸವನ್ನು ಮಾಡುತ್ತಿದ್ದರು. ರಾಹುಲ್ ಬಾಲ್ಯದಿಂದಲೇ ತಾನು ದೊಡ್ಡ ವ್ಯಕ್ತಿಯಾಗಬೇಕು ಎಂಬ ಕನಸನ್ನು ಕಂಡಿದ್ದರು. ತನ್ನ ಹನ್ನೊಂದನೇ ವಯಸ್ಸಿನಲ್ಲಿ ತಾನು ಕೆಲಸವನ್ನು ಮಾಡಲು ಪ್ರಾರಂಭ ಮಾಡಿದರು.

ಡಾಬಾ ಒಂದರಲ್ಲಿ 150 ರೂ. ಗೆ ಕೆಲಸವನ್ನು ಮಾಡಲು ಪ್ರಾರಂಭಿಸಿದರು. ಆದರೆ ವಿಶೇಷವೆಂದರೆ ರಾಹುಲ್ ಡಾಬಾದಲ್ಲಿ ಕೆಲಸವನ್ನು ಮಾಡುತ್ತಲೇ ಶಿಕ್ಷಣವನ್ನು ಮುಂದುವರಿಸಿದರು. ಪರಿಸ್ಥಿತಿ ಹೇಗೆ ಇದ್ದರೂ ಕೂಡಾ ಶಿಕ್ಷಣವನ್ನು ತೊರೆಯಲಿಲ್ಲ. ಆದರ್ಶ ವಿದ್ಯಾಮಂದಿರದಲ್ಲಿ ಶಾಲಾ ಶಿಕ್ಷಣ ಮುಂದುವರಿಸುತ್ತಾ, ಪುಸ್ತಕ ನೋಟ್ಸ್ ಗಳು ಇಲ್ಲದೇ ಹೋದಾಗ ಅವುಗಳನ್ನು ಸ್ನೇಹಿತರಿಂದ ಎರವಲು ಪಡೆದು ಓದಿದರ, ಶಿಕ್ಷಣವನ್ನು ಮುಂದುವರಿಸಿದ ಅವರು 12 ತರಗತಿಯಲ್ಲಿ 92% ಅಂಕಗಳನ್ನು ಪಡೆದು ಉತ್ತೀರ್ಣರಾದರು.

ಕನಿಷ್ಠ 2 ವರ್ಷಗಳ ಕಾಲ ಅವರು ಡಾಬಾದಲ್ಲಿ ಕೆಲಸವನ್ನು ಮಾಡಿದ್ದರು. ಬೇರೆ ಮಕ್ಕಳು ಹಬ್ಬ-ಹರಿದಿನಗಳಲ್ಲಿ ಆಟ, ಓಡಾಟಗಳಲ್ಲಿ ಇದ್ದರೆ ರಾಹುಲ್ ಆಗ ಡಾಬಾದಲ್ಲಿ ಪಾತ್ರೆಗಳನ್ನು ತೊಳೆಯುವುದರಲ್ಲಿ ಬ್ಯುಸಿ ಆಗಿರುತ್ತಿದ್ದರು. ಅಲ್ಲದೇ ಅವರು ನ್ಯೂಸ್ ಪೇಪರ್ ಹಾಕುವ ಕೆಲಸವನ್ನು ಮಾಡಿದರು. ಇಷ್ಟೆಲ್ಲಾ ಕೆಲಸದ ಒತ್ತಡವಿದ್ದರೂ ತನ್ನ ಫಿಟ್ನೆಸ್ ಕಡೆಗೆ ಮಾತ್ರ ಅಸಡ್ಡೆ ತೋರಲಿಲ್ಲ. 12 ನೇ ತರಗತಿಯ ನಂತರ ಅವರು ಪದವಿ ಶಿಕ್ಷಣ ಮಾಡುವಾಗ ಅವರ ಫಿಟ್ನೆಸ್ ನೋಡಿ ಅವರ ಸ್ನೇಹಿತರು ಮಾಡೆಲಿಂಗ್ ಮಾಡಲು ಸಲಹೆ ನೀಡಿದರು.

ಸ್ನೇಹಿತರ ಸಲಹೆ ಅವರಿಗೆ ಹಿಡಿಸಿತು. ಮಾಡಲಿಂಗ್ ಕಡೆ ಗಮನವನ್ನು ಹರಿಸಿದರು. 1998 ರಲ್ಲಿ ಜೈಪುರ ಕ್ಲಬ್ ಆಯೋಜನೆ ಮಾಡಿದ ಫ್ಯಾಶನ್ ಶೋದಲ್ಲಿ ಪಾಲ್ಗೊಂಡು ಪ್ರಥಮ ಸ್ಥಾನವನ್ನು ಪಡೆದುಕೊಂಡರು. ಅಲ್ಲಿಂದ ರಾಹುಲ್ ತನೆಜಾ ಅವರ ಜೀವನದ ದಿಕ್ಕು ಬದಲಾವಣೆಯಾಯಿತು. ಮಾಡೆಲಿಂಗ್ ಕ್ಷೇತ್ರದಲ್ಲಿ ಹೊಸ ಹೊಸ ಅವಕಾಶಗಳು ಅವರನ್ನು ಅರಸಿ ಬಂದವು. ಅಲ್ಪ ಕಾಲದಲ್ಲೇ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸಿತು.

ಹೀಗೆ ಒಂದು ಹಂತವನ್ನು ತಲುಪಿದ ನಂತರ ರಾಹುಲ್ ತಾನು ಕೇವಲ ಫ್ಯಾಷನ್ ಶೋ, ಸ್ಟೇಜ್ ಶೋ ಮಾಡಿದರೆ ಸಾಲದು ಎಂದು ನಿರ್ಧರಿಸಿ ತಮ್ಮದೇ ಆದ ಸ್ವಂತ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯನ್ನು ಪ್ರಾರಂಭಿಸಿದರು. ತಮ್ಮ ಪರಿಶ್ರಮದ ಫಲವಾಗಿ ಅವರ ಈ ಕಂಪನಿ ಯಶಸ್ಸನ್ನು ಪಡೆದುಕೊಂಡಿತು. ಹೀಗೆ 150 ರೂ. ನಿಂದ ಕೆಲಸವನ್ನು ಪ್ರಾರಂಭಿಸಿದ ರಾಹುಲ್ ಯಾವ ಮಟ್ಟಕ್ಕೆ ಬೆಳೆದರು ಎಂದರೆ ಇಂದು ಒಂದೂವರೆ ಕೋಟಿ ಬೆಲೆಬಾಳುವ ಕಾರಿನ ಮಾಲೀಕನಾಗಿದ್ದಾರೆ. ಸಾಧನೆ ಎನ್ನುವುದು ಸೋಮಾರಿಯ ಸ್ವತ್ತಲ್ಲ, ಶ್ರಮ ಜೀವಿಯ ಸ್ವತ್ತು ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿ ಸ್ಪೂರ್ತಿಯಾಗಿದ್ದಾರೆ.

LEAVE A REPLY

Please enter your comment!
Please enter your name here