1ರೂ.ಗೆ ಹೊಟ್ಟೆ ತುಂಬ ಊಟ: ಬಡವರ ಹಸಿವು ನೀಗಿಸಲು ಈ ವ್ಯಕ್ತಿ ಮಾಡುತ್ತಿರುವ ಕಾರ್ಯ ರಿಯಲಿ ಗ್ರೇಟ್

Written by Soma Shekar

Updated on:

---Join Our Channel---

ಮನುಷ್ಯನ ಮೂಲಭೂತ ಅಗತ್ಯಗಳಲ್ಲಿ ಒಂದು ಆಹಾರ ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ ದುರಾದೃಷ್ಟವಶಾತ್ ನಮ್ಮ ದೇಶದಲ್ಲಿ ಅದೆಷ್ಟೋ ಜನರಿಗೆ ಒಪ್ಪತ್ತಿನ ಊಟವೂ ಸಿಗದೇ ಹಸಿದ ಹೊಟ್ಟೆಯಲ್ಲೇ ಮಲಗುತ್ತಾರೆ. ಹಸಿವಿನಿಂದ ಸಾಯುವವರು ಕೂಡಾ ನಮ್ಮ ದೇಶದಲ್ಲಿ ಇದ್ದಾರೆ. ಅಸಂಖ್ಯಾತ ಮಕ್ಕಳು ಪೌಷ್ಟಿಕ ಆಹಾರವು ದೊರೆಯದೆ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಬಡತನದಲ್ಲಿ ಬಳಲುವ ಅಸಂಖ್ಯಾತ ಜನರು ಒಳ್ಳೆಯ ಆಹಾರದ ಮುಖ ನೋಡುವುದು ಸಹಾ ಅಪರೂಪಕ್ಕೊಮ್ಮೆ ಎಂದರೆ ಪರಿಸ್ಥಿತಿ ಹೇಗಿದೆ ಎನ್ನುವುದು ನಮ್ಮ ಕಣ್ಮುಂದೆ ಬರುತ್ತದೆ.

ಇಂತಹ ದುಸ್ಥಿತಿಯ ನಡುವೆಯೇ ನಮ್ಮ ದೇಶದಲ್ಲಿ ಕೆಲವು ಉದಾತ್ತ ಹೃದಯದ ವ್ಯಕ್ತಿಗಳು, ಹಸಿವಿನಿಂದ ಬಡವರು ನಿದ್ರಿಸಬಾರದೆಂದು ಅವರಿಗೆ ಆಹಾರ ಕೈಗೆಟುಕವಂತೆ ಮಾಡುವ ಮಾನವೀಯ ಕಾರ್ಯಗಳನ್ನು ಮಾಡುತ್ತಿದ್ದಾರೆ. ಹೌದು, ಇಂತಹುದೊಂದು ಮಾನವೀಯ ಕಾರ್ಯವನ್ನು ಮಾಡುತ್ತಿರುವ ವ್ಯಕ್ತಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದ್ದಾರೆ. ಅವರು ಬಡವರು, ನಿರ್ಗತಿಕರಿಗೆ ಕೇವಲ ಒಂದು ರೂಪಾಯಿ ಬೆಲೆಯಲ್ಲಿ ಹೊಟ್ಟೆ ತುಂಬಾ ಊಟ ಸಿಗುವ ವ್ಯವಸ್ಥೆಯನ್ನು ಮಾಡುವ ಮೂಲಕ ಪ್ರತಿದಿನ ಅನೇಕರ ಹಸಿದ ಹೊಟ್ಟೆಗಳಿಗೆ ಆಹಾರವನ್ನು ಒದಗಿಸುತ್ತಿದ್ದಾರೆ.

ದೆಹಲಿಯಲ್ಲಿ ನೆಲೆಸಿರುವ 51 ವರ್ಷ ವಯಸ್ಸಿನ ಪರ್ವೀನ್ ಕುಮಾರ್ ಗೋಯಲ್ ಅವರು ಇಂತಹ ಒಂದು ಮಾನವೀಯ ಕಾರ್ಯವನ್ನು ಮಾಡುತ್ತಿದ್ದು, ಇವರು ಶ್ಯಾಮ್ ರಸೋಯಿ ಎನ್ನುವ ಹೆಸರಿನಲ್ಲಿ ಇವರು ಜನರಿಗೆ ಆಹಾರವನ್ನು ಪೂರೈಸುತ್ತಿದ್ದಾರೆ. ದೆಹಲಿಯ ಭುಟ್ಟೋ ಗಲ್ಲಿಯಲ್ಲಿ ಶ್ಯಾಮ್ ರಸೋಯಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಕಾರ್ಯ ನಿರ್ವಹಿಸುತ್ತದೆ.‌ ಕುಮಾರ್ ಅವರ ಈ ಶ್ಯಾಮ್ ರಸೋಯಿಯಲ್ಲಿ ಬಡವರಿಗೆ ಕೇವಲ ಒಂದು ರೂಪಾಯಿಗೆ ಊಟವನ್ನು ನೀಡಲಾಗುತ್ತದೆ.

ಒಂದು ರೂಪಾಯಿಗೆ ಇಲ್ಲಿ ಚಪಾತಿ, ಸೋಯಾ ಪಲಾವ್, ಪನೀರ್ ಸೋಯಾಬೀನ್, ಪನೀರ್ ಮತ್ತು ಹಲ್ವಾ ನೀಡಲಾಗುತ್ತದೆ. ಅಷ್ಟೇ ಅಲ್ಲದೇ ಪ್ರತಿದಿನ ಊಟದ ಮೆನು ಸಹಾ ಬದಲಾಗುತ್ತದೆ. ಮಧ್ಯಾಹ್ನದ ಊಟ ಮಾತ್ರವೇ ಅಲ್ಲದೇ ಇಲ್ಲಿ ಕಾಫಿ ಮತ್ತು ಟೀ ಬೆಲೆ ಸಹಾ ಒಂದು ರೂಪಾಯಿ ಆಗಿದೆ. ಎಎನ್ಐ ಮಾದ್ಯಮದ ಮುಂದೆ ಕುಮಾರ್ ಗೋಯಲ್ ಅವರು ಮಾತನಾಡುತ್ತಾ, ಇಲ್ಲಿ ಪ್ರತಿದಿನ ಸುಮಾರು 1000 ದಿಂದ 1,100 ಜನರಿಗೆ ಮಧ್ಯಾಹ್ನದ ಊಟ ನೀಡುವುದಾಗಿ ಹೇಳಿದ್ದಾರೆ.

ಅಲ್ಲದೇ ಮೂರು ಇ ರಿಕ್ಷಾಗಳ ನೆರವಿನೊಂದಿಗೆ ಹತ್ತಿರದ ಇಂದ್ರ ಲೋಕ, ಸಾಯಿ ಮಂದಿರದಂತಹ ಅಕ್ಕ ಪಕ್ಕದ ಸ್ಥಳಗಳಿಗೆ ಸಹಾ ಪಾರ್ಸೆಲ್ ಮೂಲಕ ಅಲ್ಲಿನ ಬಡವರಿಗೆ ಆಹಾರ ಪೂರೈಸುತ್ತೇವೆ. ಇನ್ನು ಸಂಜೆಯ ವೇಳೆ ಸುಮಾರು 2000 ಜನ ದೆಹಲಿ ನಿವಾಸಿಗಳು ಇಲ್ಲಿಂದ ಆಹಾರವನ್ನು ಸೇವನೆ ಮಾಡುತ್ತಾರೆ ಎಂದು ಹೇಳಿದ್ದಾರೆ. ಇನ್ನು ಒಂದು ರೂಪಾಯಿಗೆ ಹೀಗೆ ಆಹಾರ ಪೂರೈಕೆಗೆ ಕುಮಾರ್ ಗೋಯಲ್ ಅವರಿಗೆ ನಷ್ಟ ಎದುರಾಗುತ್ತಿಲ್ಲವೇ ಎನ್ನುವುದಕ್ಕೆ ಅವರು ಉತ್ತರ ನೀಡಿದ್ದಾರೆ.

ಅವರ ಈ ಒಂದು ರೂಪಾಯಿ ಊಟದ ಬಗ್ಗೆ ತಿಳಿದ ಮೇಲೆ ಕೆಲವರು ಅವರಿಗೆ ಅಕ್ಕಿ, ಗೋಧಿ ಇತರೆ ವಸ್ತಗಳನ್ನು ನೀಡುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ತಮ್ಮ ನೆರವಿಗೆ ಧಾವಿಸಿದ್ದಾರೆ. ಮೊದಲು ಊಟದ ಬೆಲೆ ಹತ್ತು ರೂಪಾಯಿ ಇತ್ತು. ಅನಂತರ ಅದನ್ನು ಒಂದು ರೂಪಾಯಿಗೆ ಇಳಿಸಲಾಯಿತು ಎಂದಿದ್ದಾರೆ. ಕುಮಾರ್ ಗೋಯಲ್ ಅವರ ಈ ಮಾನವೀಯ ಕಾರ್ಯವನ್ನು ಮೆಚ್ಚಿ ವ್ಯಾಪಾರಿಯಾಗಿರುವ ರಂಜಿತ್ ಸಿಂಗ್ ಅವರು ಶ್ಯಾಮ್ ರಸೋಯಿ ಗಾಗಿ ಅಂಗಡಿಯನ್ನು ನೀಡಿದ್ದಾರೆ. ಕುಮಾರ್ ಗೋಯಲ್ ಅವರು ಈ ಕಾರ್ಯಕ್ಕೆ ಸಾಕಷ್ಟು ಮೆಚ್ಚುಗೆಗಳು ಹರಿದು ಬಂದಿದೆ.

Leave a Comment