ಹೆಣ್ಣಾನೆಗಳ ಮಾತೃ ಪ್ರೇಮ ಕಂಡು ಬೆರಗಾದ ಜಗತ್ತು: ಮನುಷ್ಯ ಕಲಿಯಬೇಕಾದ್ದು ಬಹಳ ಇದೆ ಎಂದ ನೆಟ್ಟಿಗರು

Written by Soma Shekar

Published on:

---Join Our Channel---

ತಾಯಿ ಪ್ರೇಮ ಕ್ಕಿಂತ ಮಿಗಿಲಾದುದು ಇನ್ನೊಂದು ಇಲ್ಲ ಎಂದು ಹೇಳಲಾಗುತ್ತದೆ. ಇದಕ್ಕೆ ಕಾರಣವೇನು ಎನ್ನುವುದಾದರೆ ಅಂತಹುದೊಂದು ನಿಸ್ವಾರ್ಥ ಪ್ರೇಮವನ್ನು ಜಗತ್ತಿನಲ್ಲಿ ಇನ್ನು ಯಾರಿಂದಲೂ ಸಹಾ ನೀಡಲು ಸಾಧ್ಯವಿಲ್ಲ. ತಾಯಿ ತನ್ನ ಮಕ್ಕಳಿಗಾಗಿ ಯಾವುದೇ ತ್ಯಾಗವನ್ನು ಸಹಾ ಮಾಡಲು ಸಜ್ಜಾಗಿರುತ್ತಾಳೆ. ಮಕ್ಕಳಿಗೆ ಎದುರಾಗುವ ಅಪಾಯ ತನ್ನನ್ನು ದಾಟಿ ಬರಬೇಕು ಎಂದು, ಮಕ್ಕಳ ರಕ್ಷಣಾ ಕವಚವಾಗಿ ನಿಲ್ಲುತ್ತಾಳೆ. ತಾಯಿಯ ಮಮತೆಗೆ ಸರಿ ಸಾಟಿಯಾದ ಇನ್ನೊಂದು ಪ್ರೀತಿ ಈ ಜಗತ್ತಿನಲ್ಲಿ ಇನ್ನೆಲ್ಲೂ ದೊರೆಯುವುದಿಲ್ಲ. ಇಂತಹ ಪ್ರೀತಿ, ಮಮತೆ ಹಾಗೂ ನಿಸ್ವಾರ್ಥ ಪ್ರೇಮ ಕೇವಲ ಮನುಷ್ಯರಲ್ಲಿ ಮಾತ್ರವಲ್ಲ ಪ್ರಾಣಿಗಳಲ್ಲೂ ಇರುತ್ತದೆ.

ಮಾತೃಪ್ರೇಮ ಎನ್ನುವುದು ಪ್ರಾಣಿಗಳಲ್ಲೂ ಸಹಾ ಇದೆ ಎನ್ನುವುದನ್ನು ಸಾಬೀತು ಮಾಡುವ ಅಸಂಖ್ಯಾತ ವೀಡಿಯೋಗಳು ಈಗಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ. ಇಂತಹ ವೀಡಿಯೋಗಳು ಬಂದಾಗಲೆಲ್ಲಾ ಇವು ಜನರಿಗೆ ಅಚ್ಚರಿ ಯನ್ನು ಮೂಡಿಸುತ್ತವೆ, ಜನರ ಮೆಚ್ಚುಗೆಯನ್ನು ಪಡೆಯುತ್ತವೆ ಹಾಗೂ ಜನರಿಂದ ಶ್ಲಾಘನೆ ಪಡೆದು ಭರ್ಜರಿಯಾಗಿ ವೈರಲ್ ಆಗುತ್ತದೆ. ಪ್ರಸ್ತುತ ಅಂತಹುದೇ ಒಂದು ದೃಶ್ಯವನ್ನು ತೋರಿಸುವ ವೀಡಿಯೊ ಒಂದು ವೈರಲ್ ಆಗಿ ಜನರ ಮನಸ್ಸಿಗೆ ಲಗ್ಗೆ ಇಡುತ್ತಿದೆ. ಹಾಗಾದರೆ ಏನೀ ವೀಡಿಯೋದಲ್ಲಿನ ದೃಶ್ಯ ತಿಳಿಯೋಣ ಬನ್ನಿ.

ಸಾಮಾಜಿಕ ಜಾಲತಾಣ ವೇದಿಕೆ ಟ್ವಿಟರ್ ನಲ್ಲಿ ವನ್ಯ ಜೀವಿಗಳ ವಿಶೇಷ ವೀಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಐಎಫ್ಎಸ್ ಅಧಿಕಾರಿ ಸುಶಾಂತ್ ನಂದ ಅವರು ಈ ವೀಡಿಯೋ ಶೇರ್ ಮಾಡಿಕೊಂಡಿದ್ದು, ಇದರಲ್ಲಿ ಹೆಣ್ಣಾನೆಗಳ ಮಾತೃಪ್ರೇಮದ ದೃಶ್ಯ ಮನಸ್ಸಿಗೊಂದು ಖುಷಿಯನ್ನು ನೀಡುತ್ತಿದೆ. ಸುಶಾಂತ್ ನಂದಾ ಅವರು ವೀಡಿಯೋ ಶೀರ್ಷಿಕೆಯಲ್ಲಿ, ಆನೆಗಳು ಎಷ್ಟು ಬಲವಾದ ಬಂಧವನ್ನು ಹೊಂದಿವೆ ಎಂದರೆ ಹಿಂಡಿನಲ್ಲಿರುವ ಪ್ರತಿಯೊಂದು ಹೆಣ್ಣು ಆನೆಯು ಎಲ್ಲಾ ಮರಿಗಳಿಗೆ ತಾಯಿಯಾಗಿರುತ್ತವೆ. ಮರಿಯು ಹೊರಬರಲು ಸಹಾಯ ಮಾಡಲು ತಾಯಿ ಮತ್ತು ಚಿಕ್ಕಮ್ಮ ಒಟ್ಟಿಗೆ ಇದ್ದಾರೆ ಎಂದು ಬರೆದುಕೊಂಡಿದ್ದಾರೆ.

ವೈರಲ್ ವೀಡಿಯೋದಲ್ಲಿನ ದೃಶ್ಯವನ್ನು ನೋಡಿದಾಗ ಒಂದು ಆನೆ ಮರಿಯು ಹಳ್ಳವೊಂದರಲ್ಲಿ ಇಳಿದ ನಂತರ ಅದು ಮೇಲೆ ಹತ್ತಲು ಸಾಕಷ್ಟು ಪ್ರಯತ್ನವನ್ನು ಮಾಡಿದರೂ ಸಹಾ ಅದರಿಂದ ಆಗಿಲ್ಲ. ಆಗ ಅದನ್ನು ನೋಡಿದ ಅದರ ತಾಯಿಯು ತನ್ನ ಮರಿಯನ್ನು ಮೇಲೆ ಎತ್ತಲು ಧಾವಿಸಿದೆ, ಈ ವೇಳೆ ಅಲ್ಲೇ ಇದ್ದ ಮತ್ತೊಂದು ಹೆಣ್ಣಾನೆ ಸಹಾ ಮರಿಯ ರಕ್ಷಣೆಗೆ ಧಾವಿಸಿದೆ. ಎರಡು ಆನೆಗಳು ಹೀಗೆ ಮರಿಯನ್ನು ಎತ್ತುವುದನ್ನು ನೋಡಿದಾಗ, ಹೆಣ್ಣಾನೆಗಳ ಮಾತೃ ಹೃದಯದ ಭಾವನೆಗಳು ನಮ್ಮ ಕಣ್ಮುಂದೆ ಬಂದು ನಮ್ಮನ್ನು ಸಹಾ ಅಚ್ಚರಿ ಪಡಿಸುತ್ತವೆ.

ವೈರಲ್ ಆಗಿರುವ ಈ ವೀಡಿಯೋವನ್ನು 31 ಸಾವಿರಕ್ಕಿಂತಲೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಸಾವಿರಾರು ಜನರು ವೀಡಿಯೋಗೆ ಲೈಕ್ ನೀಡಿದ್ದು, ನೂರಾರು ಜನರು ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಒಂದಷ್ಟು ಜನ ನೆಟ್ಟಿಗರು ಕಾಮೆಂಟ್ ಮಾಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕಾಮೆಂಟ್ ಮಾಡಿದ ನೆಟ್ಟಿಗರೊಬ್ಬರು, ಆನೆಗಳು ನಮ್ಮ ಶಿಕ್ಷಕರಲ್ಲದೇ ಮತ್ತೇನು? ನಾವು ಮನುಷ್ಯರು ಅವುಗಳಿಂದ ಪಾಠ ಕಲಿಯಬೇಕು ಎಂದಿದ್ದಾರೆ. ಅನೇಕರು ಮನುಷ್ಯರು ಪ್ರಾಣಿಗಳಿಂದ ಕಲಿಯುವ ಪಾಠ ಬಹಳಷ್ಟಿದೆ ಎಂದಿದ್ದಾರೆ.

Leave a Comment