ಸಾಕಿನ್ನು ವಿರಾಟ್ ಕೊಹ್ಲಿಗೆ ವಿಶ್ರಾಂತಿಯನ್ನು ನೀಡಿ: ಮಾಜಿ ಆಟಗಾರರು ಕೊಟ್ಟ ಸಲಹೆ

Written by Soma Shekar

Published on:

---Join Our Channel---

ವಿರಾಟ್ ಕೊಹ್ಲಿ ಶತಕ ಬಾರಿಸುವುದು ಯಾವಾಗ?? ಖಂಡಿತ ಇಂತಹುದೊಂದು ಪ್ರಶ್ನೆಯನ್ನು ಸೋಶಿಯಲ್ ಮೀಡಿಯಾಗಳಲ್ಲಿ ಆರ್ ಸಿ ಬಿ ಅಭಿಮಾನಿಗಳು ಕೇಳುತ್ತಿದ್ದಾರೆ ಹಾಗೂ ವಿರಾಟ್ ಕೊಹ್ಲಿ ಅವರ ಭರ್ಜರಿ ಬ್ಯಾಟಿಂಗ್ ಅನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ವಿರಾಟ್ ಕೊಹ್ಲಿ ಅವರು ಟೀಂ ಇಂಡಿಯಾ ಮತ್ತು ಐಪಿಎಲ್ ನಲ್ಲೂ ಸಹಾ ಆರ್ ಸಿ ಬಿ ಯ ನಾಯಕತ್ವ ತೊರೆದಿದ್ದಾರೆ. ಆದರೆ ಅನಂತರ ಅವರು ಬ್ಯಾಟ್ಸ್ ಮ್ಯಾನ್ ಆಗಿ ಕಾಣಿಸಿಕೊಂಡಿದ್ದರೂ ಅಭಿಮಾನಿಗಳ ಮನಸ್ಸಿಗೆ ಮುದ ನೀಡುವಂತಹ ಭರ್ಜರಿ ಪ್ರದರ್ಶನ ಇನ್ನೂ ನೀಡಿಲ್ಲ.

ನಿನ್ನೆಯಷ್ಟೇ ಲಕ್ನೋ ಸೂಪರ್ ಜೈಂಟ್ಸ್ ತಂಡದ ಎದುರು ನಡೆದ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ ಗೋಲ್ಡನ್ ಡೆಕ್ ಪಡೆದು ಪಂದ್ಯದಿಂದ ಹೊರ ನಡೆದರು. ಅಂದರೆ ಅವರು ಮೊದಲ ಎಸೆತದಲ್ಲಿಯೇ ಔಟ್ ಆಗಿ, ಯಾವುದೇ ಖಾತೆಯನ್ನು ತೆರೆಯದೇ ಪಂದ್ಯದಿಂದ ಹೊರ ಬರಬೇಕಾಯಿತು. ಈ ರೀತಿಯ ಕಳಪೆ ಪ್ರದರ್ಶನದ ಬಗ್ಗೆ ಟೀಂ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ಅವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಇದೇ ವೇಳೆ ಅವರು ವಿರಾಟ್ ಕೊಹ್ಲಿಗೆ ಕ್ರಿಕೆಟ್ ನಿಂದ ವಿಶ್ರಾಂತಿ ಪಡೆಯುವ ಸಲಹೆಯೊಂದನ್ನು ಸಹಾ ನೀಡಿದ್ದಾರೆ.

ಬಯೋ ಬಬಲ್ ನ ಕುರಿತಾದ ನಿರ್ಬಂಧಗಳ ನಡುವೆ ಆಟಗಾರರನ್ನು ನೋಡಿಕೊಳ್ಳುವುದರ ಜೊತೆಗೆ ಅವರ ಮನಸ್ಥಿತಿಯನ್ನು ಸಹಾ ಅರ್ಥ ಮಾಡಿಕೊಳ್ಳಬೇಕಿದೆ. ಸದ್ಯ ವಿರಾಟ್ ಕೊಹ್ಲಿ ಅವರಿಗೆ ಇನ್ನೂ ಕ್ರಿಕೆಟ್ ನಲ್ಲಿ ಆರು ಏಳು ವರ್ಷಗಳು ಉಳಿದಿದ್ದು, ಕ್ರಿಕೆಟ್ ಆಡಲು ಟೀಂ ಇಂಡಿಯಾ ಕೊಹ್ಲಿಗೆ ಹೆಚ್ಚು ಒತ್ತಡ ನೀಡಬಾರದು ಎಂದು ರವಿಶಾಸ್ತ್ರಿ ಅವರು ಹೇಳಿದ್ದಾರೆ.
ಅದರಲ್ಲೂ ವಿಶೇಷವಾಗಿ ಬಯೋ ಬಬಲ್ ನ ಆಯಾಸ ಉಂಟು ಮಾಡುವಂತಹ ಸಂದರ್ಭಗಳಲ್ಲಿ ಮತ್ತಷ್ಟು ಕಾಳಜಿಯನ್ನು ವಹಿಸಬೇಕಾಗುತ್ತದೆ ಎನ್ನುವ ಮಾತನ್ನು ಅವರು ಹೇಳಿದ್ದಾರೆ.

ಅವರು ಮಾತನಾಡುತ್ತಾ, ತಾನು ಕೋಚ್ ಆಗಿದ್ದಾಗ ಮೊದಲ ಬಾರಿಗೆ ಬಯೋಬಬಲ್ ಆರಂಭವಾಯಿತು.
ಆಗಲೇ ತಾನು ಆಟಗಾರರ ಬಗ್ಗೆ ಸಹಾನುಭೂತಿ ತೋರಬೇಕೆಂದು ಹೇಳಿದ್ದೆ. ಒಂದು ವೇಳೆ ಒತ್ತಾಯಿಸಿದರೆ ಆಟಗಾರನು ಉತ್ತಮವಾಗಿ ಕಾರ್ಯ ನಿರ್ವಹಿಸುವುದಕ್ಕೂ ಹಾಗೂ ಬಿಟ್ಟು ಕೊಡುವುದಕ್ಕೂ ನಡುವೆ ಬಹಳ ಸಣ್ಣ ವ್ಯತ್ಯಾಸವಿರುತ್ತದೆ. ಆದ್ದರಿಂದಲೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಿಳುವಳಿಕೆಯನ್ನು ತೋರಿಸಬೇಕು ಎನ್ನುವ ಮಾತನ್ನು ಅವರು ಹೇಳಿದ್ದಾರೆ.

ಇನ್ನು ತಾನು ವಿರಾಟ್ ಕೊಹ್ಲಿ ಬಗ್ಗೆ ನೇರವಾಗಿಯೇ ಹೇಳುತ್ತೇನೆ, ಅವರು ಈಗ ಕೆಟ್ಟ ಫಾರ್ಮ್ ನಲ್ಲಿ ಇದ್ದು, ಈ ಸಂದರ್ಭದಲ್ಲಿ ಯಾರಿಗಾದರೂ ವಿಶ್ರಾಂತಿ ಬೇಕು ಎನ್ನುವುದಾದರೆ ಅದು ವಿರಾಟ್ ಕೊಹ್ಲಿ ಆಗಿದ್ದಾರೆ. ಎರಡು ತಿಂಗಳಾಗಲೀ ಅಥವಾ ಒಂದು ತಿಂಗಳಾಗಲೀ ಇಂಗ್ಲೆಂಡ್ ಪ್ರವಾಸಕ್ಕೂ ಮೊದಲು ಅವರಿಗೆ ವಿಶ್ರಾಂತಿಯನ್ನು ನೀಡಬೇಕಾಗಿದೆ. ರವಿಶಾಸ್ತ್ರಿ ಅವರ ಮಾತಿಗೆ ಇಂಗ್ಲೆಂಡ್ ನ‌ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಅವರು ಸಹಾ ಸಹಮತವನ್ನು ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿ ಸೋಶಿಯಲ್ ಮೀಡಿಯಾದಿಂದ ಅಂತರ ಕಾಯ್ದುಕೊಂಡು ತಮ್ಮ ಬ್ಯಾಟಿಂಗ್ ಸುಧಾರಿಸಿಕೊಳ್ಳುವ ಅವಶ್ಯಕತೆ ಇದೆ ಎಂದಿರುವ ಅವರು ಆರು ತಿಂಗಳ ನಂತರ ನಾನು ಕ್ರಿಕೆಟ್ ಗೆ ಮರಳುತ್ತೇನೆ ಎಂದು ವಿರಾಟ್ ಕೊಹ್ಲಿ ಈಗ ಹೇಳಬೇಕಾಗಿದೆ ಎನ್ನುವ ಮಾತನ್ನು ಸಹಾ ಕೆವಿನ್ ಪೀಟರ್ಸನ್ ಅವರು ಹೇಳಿದ್ದಾರೆ. ಐಪಿಎಲ್ 2022 ಕ್ಕೂ ಮೊದಲು ಕೊಹ್ಲಿ ಆರ್ ಸಿ ಬಿ ನಾಯಕತ್ವವನ್ನು ತೊರೆದಿದ್ದರು.

Leave a Comment