ಸಲ್ಮಾನ ಖಾನ್ ಇಲ್ಲದೇ ಹಿಂದಿ ಬಿಗ್ ಬಾಸ್! ಸಲ್ಮಾನ್ ಬದಲಿಗೆ ನಿರೂಪಣೆಗೆ ಬರೋ ಸ್ಟಾರ್ ಯಾರು??

Written by Soma Shekar

Published on:

---Join Our Channel---

ಬಿಗ್ ಬಾಸ್ ಕಿರುತೆರೆಯ ಅತ್ಯಂತ ದೊಡ್ಡ ರಿಯಾಲಿಟಿ ಶೋ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಕನ್ನಡ ಮಾತ್ರವೇ ಅಲ್ಲದೇ ಬೇರೆ ಬೇರೆ ಭಾಷೆಗಳಲ್ಲಿಯೂ ಬಿಗ್ ಬಾಸ್ ಜನಪ್ರಿಯತೆ ಪಡೆದಿದೆ. ಹಿಂದಿಯಲ್ಲಂತೂ ಈ ಬಾರಿ ಬಿಗ್ ಬಾಸ್ ನ ಹದಿನಾರನೇ ಸೀಸನ್ ಭರ್ಜರಿ ನಾಲ್ಕನೇ ವಾರಾಂತ್ಯಕ್ಕೆ ಅಡಿಯಿಟ್ಟಿದೆ. ಈ ಬಾರಿ ಕನ್ನಡ ಮತ್ತು ಹಿಂದಿ ಬಿಗ್ ಬಾಸ್ ಎರಡೂ ಸಹಾ ಏಕಕಾಲದಲ್ಲಿ ಆರಂಭವಾಗಿದೆ. ಹಿಂದಿಯಲ್ಲಿ ಬಿಗ್ ಬಾಸ್ ಸೀಸನ್ 4 ರಿಂದ ಹಿಡಿದು ಈಗ ಪ್ರಸಾರ ಆಗುತ್ತಿರುವ ಹದಿನಾರನೇ ಸೀಸನ್ ವರೆಗೂ ಬಾಲಿವುಡ್ ನಟ ಸಲ್ಮಾನ್ ಖಾನ್ ನಿರೂಪಣೆ ಮಾಡಿಕೊಂಡು ಬರುತ್ತಿದ್ದಾರೆ. ಸಲ್ಮಾನ್ ಖಾನ್ ನಿರೂಪಣೆಯಲ್ಲಿ ಬಿಗ್ ಬಾಸ್ ಮೊದಲ ಮೂರು ಸೀಸನ್ ಗಳಲ್ಲಿ ಕಾಣದ ಯಶಸ್ಸನ್ನು ಪಡೆದಿದ್ದರಿಂದ ಪ್ರತಿ ಸೀಸನ್ ನಲ್ಲೂ ಅವರಿಗೆ ದೊಡ್ಡ ಮೊತ್ತದ ಸಂಭಾವನೆ ನೀಡಿ ಕರೆತರಲಾಗುತ್ತಿದೆ.

ನಟ ಸಲ್ಮಾನ್ ಖಾನ್ ಬಿಗ್ ಬಾಸ್ ನ ವಾರಾಂತ್ಯದ ಎಪಿಸೋಡ್ ಗಳನ್ನು ತಮ್ಮದೇ ಆದ ಖಡಕ್ ಶೈಲಿಯಲ್ಲಿ ನಡೆಸುಕೊಡುತ್ತಾರೆ. ತಪ್ಪು ಮಾಡಿದ ಮನೆಯ ಸದಸ್ಯರಿಗೆ ನೇರವಾಗಿಯೇ ಎಚ್ಚರಿಕೆ ನೀಡುತ್ತಾರೆ. ಇನ್ನು ಸಲ್ಮಾನ್ ಖಾನ್ ಬಿಗ್ ಬಾಸ್ ನ ವಾರಾಂತ್ಯದ ಎಪಿಸೋಡ್ ಗಳಿಗೆ ಗೈರು ಹಾಜರಾದ ಉದಾಹರಣೆಗಳು ಕಡಿಮೆ. ಆದರೆ ಕೆಲವು ಸೀಸನ್ ಗಳಲ್ಲಿ ಆರೋಗ್ಯ ಸಮಸ್ಯೆ ಮತ್ತು ಸಿನಿಮಾ ಕೆಲಸಗಳಿಂದ ಅವರು ಬ್ರೇಕ್ ತೆಗೆದುಕೊಂಡಾಗ ಕೆಲವೊಂದು ಎಪಿಸೋಡ್ ಗಳನ್ನು ನಿರ್ದೇಶಕಿ ಫರಾ ಖಾನ್ ನಡೆಸಿಕೊಟ್ಟ ಉದಾಹರಣೆಗಳಿವೆ. ಆದರೆ ಈಗ ಈ ಬಾರಿ ಸಲ್ಮಾನ್ ಈ ವಾರಾಂತ್ಯದ ಎಪಿಸೋಡ್ ಗಳಲ್ಲಿ ಕಾಣಿಸುವುದಿಲ್ಲ ಎನ್ನಲಾಗಿದೆ.

ಹೌದು, ಈ ವಾರ ಕನ್ನಡ ಬಿಗ್ ಬಾಸ್ ನಲ್ಲೂ ಸಹಾ ವಾರಾಂತ್ಯದ ಸಂಚಿಕೆಗಳಲ್ಲಿ ನಟ ಸುದೀಪ್ ಅವರು ಇರುವುದಿಲ್ಲ ಎನ್ನುವ ಸುದ್ದಿಯ ಬೆನ್ನಲ್ಲೇ ಈಗ ಹಿಂದಿಯಲ್ಲೂ ಈ ವಾರಾಂತ್ಯದಲ್ಲಿ ಸಲ್ಮಾನ್ ಖಾನ್ ಅವರು ಚಿತ್ರೀಕರಣದಿಂದ ಬ್ರೇಕ್ ಪಡೆದಿದ್ದಾರೆ ಎನ್ನಲಾಗಿದೆ. ಸುದ್ದಿಗಳ ಪ್ರಕಾರ ನಟ ಸಲ್ಮಾನ್ ಖಾನ್ ಗೆ ಡೆಂಗ್ಯೂ ಜ್ವರ ಬಂದಿದ್ದು, ಅವರು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇದೇ ಕಾರಣದಿಂದ ಅವರು ಸಿನಿಮಾಗಳ ಚಿತ್ರೀಕರಣ ಮತ್ತು ಬಿಗ್ ಬಾಸ್ ಶೋ ನಿರೂಪಣೆ ಎರಡಕ್ಕೂ ಕೆಲವು ವಾರಗಳ ಬ್ರೇಕ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಸಲ್ಮಾನ್ ಖಾನ್ ಗೈರು ಹಾಜರಿ ಹಿನ್ನೆಲೆಯಲ್ಲಿ ವಾಹಿನಿಯು ಸಲ್ಮಾನ್ ಅವರ ಜಾಗಕ್ಕೆ ಅವರು ಮರಳಿ ಬರುವವರೆಗೆ ಹೊಸ ನಿರೂಪಕರನ್ನು ಕರೆ ತರಲು ಸಿದ್ಧತೆಗಳನ್ನು ನಡೆಸಿದ್ದಾರೆನ್ನಲಾಗಿದೆ. ಸಲ್ಮಾನ್ ಜಾಗಕ್ಕೆ ಮತ್ತೆ ಫರಾ ಖಾನ್ ಬರುತ್ತಾರಾ? ಅಥವಾ ಈ ಬಾರಿ ಬೇರೊಬ್ಬ ಸ್ಟಾರ್ ನಟ ಅಥವಾ ನಟಿಯನ್ನು ಬಿಗ್ ಬಾಸ್ ನಿರೂಪಣೆ ಮಾಡಲು ಬರುತ್ತಾರಾ? ಎನ್ನುವುದು ಬಿಗ್ ಬಾಸ್ ಪ್ರೇಕ್ಷಕರ ನಿರೀಕ್ಷೆಯಾಗಿದೆ. ಸಲ್ಮಾನ್ ಅಭಿಮಾನಿಗಳು ನಟ ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

Leave a Comment