ಸಕ್ಸಸ್ ಗೆ ಇನ್ನೊಂದು ಹೆಸರು ಈ ಅಜ್ಜಿ: 79 ನೇ ವಯಸ್ಸಿನಲ್ಲಿ ಲಾಕ್ ಡೌನ್ ವೇಳೆ ಇವರು ಮಾಡಿದ್ದು ಅದ್ಭುತ!!

Written by Soma Shekar

Published on:

---Join Our Channel---

ತಮ್ಮ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಬಯಸುವ ಜನರು, ತಮಗಾಗಿ ಒಂದು ಗುರುತು ಬೇಕು ಎಂದು ಬಯಸುವ ಜನರು, ವಯಸ್ಸು ಮತ್ತು ಶಿಕ್ಷಣವನ್ನು ಲೆಕ್ಕಿಸದೆ ತಾವು ಮಾಡುವ ಪ್ರಯತ್ನದಿಂದ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ಅವರು ತಾವು ಕಂಡ ಕನಸುಗಳನ್ನು ನನಸು ಮಾಡಿಕೊಳ್ಳುತ್ತಾರೆ. ಇಳಿ ವಯಸ್ಸಿನಲ್ಲಿ ಕೆ ಎಫ್ ಸಿ ಉದ್ಯಮ ಆರಂಭಿಸಿದ ಸ್ಯಾಂಡರ್ಸನ ಅವರು ತಮ್ಮ ವ್ಯಾಪಾರ ಸಾಮ್ರಾಜ್ಯವನ್ನು ಜಗತ್ತಿನಾದ್ಯಂತ ವಿಸ್ತರಿಸಿ, ತನ್ನದೇ ಆದ ಹೆಸರು ಮತ್ತು ಛಾಪನ್ನು ಮೂಡಿಸಿದ್ದು ಇಂತಹ ಸಾಧನೆಗೆ ಒಂದು ಅತ್ಯುತ್ತಮ ಉದಾಹರಣೆಯಾಗಿದೆ.

ಕರೋನಾ ವೈರಸ್ ಬೆಳಕಿಗೆ ಬಂದ ನಂತರ ವಿಶ್ವದಲ್ಲಿ ಬಹಳಷ್ಟು ಬದಲಾವಣೆಗಳು ಆದವು. ಅದರ ಭಾಗವಾಗಿ ಅದೆಷ್ಟೋ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇನ್ನೂ ಅನೇಕರು ನಿರುದ್ಯೋಗಿಯಾಗಿಯೇ ಉಳಿದಿದ್ದಾರೆ. ಆದರೆ ಅದೇ ಸಮಯದಲ್ಲಿ ಇನ್ನೂ ಕೆಲವರು, ಲಾಕ್ ಡೌನ್ ಸಮಯದಲ್ಲಿ ಕೆಲವರ ಅಗತ್ಯಗಳನ್ನು ಗುರುತಿಸಿ, ತಮ್ಮ ಬುದ್ದಿವಂತಿಕೆಯನ್ನು ಚುರುಕುಗೊಳಿಸಿ, ವ್ಯಾಪಾರ ಆರಂಭಿಸಿ, ಅದನ್ನು ಇಂದಿಗೂ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ.

ಈ ಮೂಲಕ ಅವರು ವಯಸ್ಸಿಗೂ, ಸನ್ನಿವೇಶಕ್ಕೂ ಸಂಬಂಧವಿಲ್ಲ ಎಂಬುದನ್ನು ಸಾಬೀತುಪಡಿಸಿ ತಮ್ಮ ಕನಸನ್ನು ಸಾಕಾರ ಮಾಡಿಕೊಂಡಿದ್ದಾರೆ. ಮುಂಬೈ ಮೂಲದ ಕೋಕಿಲಾ ಪಾರೇಖ್ ಅವರಿಗೆ ಈಗ 79 ವಯಸ್ಸು. ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಅವರು ಚಹಾ ಮಸಾಲಾ ವ್ಯಾಪಾರವನ್ನು ಪ್ರಾರಂಭಿಸಿದರು. ಕೋಕಿಲಾ ಅವರ ಮನೆಯಲ್ಲಿ ತಯಾರಿಸಿದ ರುಚಿಕರವಾದ ಚಹಾವನ್ನು ಸ್ನೇಹಿತರು ಮತ್ತು ಸಂಬಂಧಿಕರು ಪ್ರಶಂಸಿಸಿದ್ದು ಮಾತ್ರವೇ ಅಲ್ಲದೇ ಅವರನ್ನು ಪ್ರೋತ್ಸಾಹಿಸಿದರು.

ಕೋಕಿಲಾ ಅವರು ಈ ಮಸಾಲೆ ಟೀ ರೆಸಿಪಿಯನ್ನು ತಮ್ಮ ತಾಯಿಯಿಂದ ಕಲಿತುಕೊಂಡಿದ್ದರು. 2020 ರ ಲಾಕ್ ಡೌನ್ ಅವಧಿಯಲ್ಲಿ ಕೋಕಿಲಾ ಅವರು ತಮ್ಮ ಕುಟುಂಬದ ಈ ವಿಶೇಷ ರೆಸಿಪಿಯೊಂದಿಗೆ ವ್ಯಾಪಾರ ರಂಗಕ್ಕೆ ಅಡಿಯಿಡಲು ಸಜ್ಜಾದರು. ತಮ್ಮ‌ ತಾಯಿಯ ಆಲೋಚನೆಗೆ ಕೋಕಿಲಾ ಅವರ ಮಕ್ಕಳು ಬೆಂಬಲಕ್ಕೆ ನಿಂತರು. ಕೋಕಿಲಾ ಅವರ ಪುತ್ರ ತುಷಾರ್ ಅವರು ಟೀ ತಯಾರು ಮಾಡಲು ಬೇಕಾದ ಪದಾರ್ಥಗಳನ್ನು ಖರೀದಿಸಲು ಸಹಾಯ ಮಾಡಿದರು. ವ್ಯಾಪಾರಕ್ಕೆ ಕೆಟಿ (ಕೋಕಿಲಾ ತುಷಾರ್) ಚಾಯ್ ಮಸಾಲಾ ಎಂದು ಹೆಸರಿಸಲಾಗಿದೆ.

ಕೆಟಿ (ಕೋಕಿಲಾ ತುಷಾರ್) ಚಾಯ್ ಮಸಾಲಾ.. ತಾಜಾ ಮಸಾಲೆಗಳೊಂದಿಗೆ ಸಿದ್ಧವಾಗುತ್ತದೆ. ಈ ಮಸಾಲಾದಲ್ಲಿ ಯಾವುದೇ ರೀತಿಯ ಕೃತಕ ಬಣ್ಣಗಳು ಅಥವಾ ಕೃತಕ ಸುವಾಸನೆ ಇರುವುದಿಲ್ಲ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾ ಸಹಾಯ ಮಾಡುತ್ತದೆ ಎನ್ನಲಾಗಿದೆ. ಈ ಕೆಟಿ ಚಾಯ್ ಮಸಾಲಾ ಟೀ ಪೌಡರ್ ಅನ್ನು ಭಾರತದಾದ್ಯಂತ ಸರಬರಾಜು ಮಾಡಲಾಗುತ್ತಿದೆ. ಗ್ರಾಹಕರಿಂದ ಆರ್ಡರ್ ಪಡೆದು ಅವರಿಗೆ ಟೀ ಪುಡಿಯನ್ನು ರವಾನಿಸಲಾಗುತ್ತದೆ. ಕೋಕಿಲಾ ಅವರು ಹೇಳುವಂತೆ ಈಗ ದಿನಕ್ಕೆ 500 ಆರ್ಡರ್‌ಗಳನ್ನು ಸ್ವೀಕರಿಸುತ್ತಿದ್ದಾರೆ.

ಮಹಿಳೆಯರು ಕೇವಲ ಗೃಹಿಣಿಯಾಗಿ ಮಾತ್ರ ಬಾಳಬೇಕು ಎಂಬ ಚಿಂತನೆಯಲ್ಲಿ ತಾನು ಬೆಳೆದಿದ್ದೇನೆ ಎನ್ನುವ ಕೋಕಿಲಾ ಅವರು ತನಗೆ 21ನೇ ವಯಸ್ಸಿಗೆ ಮದುವೆಯಾಯಿತು, ಅಂದಿನಿಂದ ಕುಟುಂಬ ಹಾಗೂ ಅದರ ಸದಸ್ಯರ ಬಗ್ಗೆಯೇ ಯೋಚಿಸುತ್ತಿದ್ದೇನೆ ಎನ್ನುತ್ತಾರೆ. ಆದರೆ ಈಗ ತಮಗೆ ಇಷ್ಟದಂತೆ ಬದುಕನ್ನು ಸಾಗಿಸುತ್ತಿದ್ದೇನೆ. ಈಗ 79ರ ಹರೆಯದಲ್ಲಿ ಕೋಕಿಲಾ ಅವರು ತಮ್ಮ ಇಷ್ಟದ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಅನೇಕರಿಗೆ ಅವರೀಗ ಸ್ಪೂರ್ತಿಯಾಗಿದ್ದಾರೆ.

Leave a Comment