ರುದ್ರಾಕ್ಷಿ ಧರಿಸುವವರಿಗೆ ಸಿಗುವ ಶುಭ ಫಲಗಳೇನು? ಯಾವ ನಿಯಮಗಳನ್ನು ಪಾಲಿಸಬೇಕು?

Written by Soma Shekar

Published on:

---Join Our Channel---

ರುದ್ರಾಕ್ಷಿಯನ್ನು ಪರಮೇಶ್ವರನ ರೂಪವೆಂದು ಹಿಂದೂಗಳು ನಂಬುತ್ತಾರೆ. ಪುರಾಣ ಕಾಲದಿಂದಲೂ ರುದ್ರಾಕ್ಷಿಗಳನ್ನು ಬಳಸಿಕೊಂಡು ಬರಲಾಗುತ್ತಿದ್ದು, ರುದ್ರಾಕ್ಷಿಗೆ ದೈವಿಕ ಸ್ಥಾನಮಾನವನ್ನು ನೀಡಲಾಗಿದೆ. ‌ ಪುರಾಣಗಳ ಪ್ರಕಾರ, ಋಷಿಗಳು, ಮುನಿಗಳು, ದೇವತೆಗಳು ಮತ್ತು ರಾಕ್ಷಸರು ರುದ್ರಾಕ್ಷಿಗಳನ್ನು ಧರಿಸುತ್ತಿದ್ದರು. ಇಂದಿಗೂ ವೇದಾಂತಿಗಳು, ಗುರುಗಳು ಮತ್ತು ಪೂಜಾರರು ಈ ರುದ್ರಾಕ್ಷಿ ಮಾಲೆಗಳನ್ನು ಧರಿಸುತ್ತಾರೆ. ಇಂತಹ ವಿಶೇಷವಾದ ಈ ರುದ್ರಾಕ್ಷಿಯು ಶಕ್ತಿಯುತವಾಗಿರುವುದು ಮಾತ್ರವಲ್ಲದೇ ಇದರಲ್ಲಿ ಬಹಳ ಉತ್ತಮವೆನಿಸುವ ಒಂದಷ್ಟು ಔಷಧೀಯ ಗುಣಗಳು ಸಹಾ ಇವೆ.

ರುದ್ರಾಕ್ಷಿಯನ್ನು ಧರಿಸುವವರು ಅಕ್ಷರಶಃ ರುದ್ರನಿಗೆ ಸಮಾನರು ಎನ್ನುವುದಾಗಿ ಪುರಾಣಗಳಲ್ಲಿ ಹೇಳಲಾಗಿದೆ. ಹಿಂದೆ ಋಷಿಗಳೂ ಸಹಾ ಈ ರುದ್ರಾಕ್ಷವನ್ನು ಧರಿಸಿ ಸಾವಿರಾರು ವರ್ಷಗಳ ಕಾಲ ತಪಸ್ಸು ಮಾಡಿ ಸಿದ್ಧಿಗಳನ್ನು ಗಳಿಸಿ ಕೊಂಡಿದ್ದರು. ಇದಲ್ಲದೇ ರುದ್ರಾಕ್ಷಿಯನ್ನು ಧರಿಸಿದ ವ್ಯಕ್ತಿಯು ಎಲ್ಲಾ ಪಾಪಗಳಿಂದ ಮುಕ್ತನಾಗುವನು ಹಾಗೂ ಆತನಿಗೆ ಮೋಕ್ಷವನ್ನು ಪ್ರಾಪ್ತವಾಗುತ್ತದೆ ಎನ್ನುವುದು ಸಹಾ ಅಂದಿನ ಪ್ರಾಚೀನ ಋಷಿ ಮುನಿಗಳ ಪ್ರತಿಪಾದನೆಯಾಗಿತ್ತು. ಆದ್ದರಿಂದಲೇ ರುದ್ರಾಕ್ಷಿಗೆ ವಿಶೇಷ ಮಹತ್ವ ನೀಡಲಾಗಿತ್ತು.

ಇಂತಹ ಮಹತ್ವ ಪಡೆದಿರುವಂತಹ ರುದ್ರಾಕ್ಷಿ ಮಾಲೆ ಧರಿಸುವಾಗ ತುಂಬಾ ನಿಷ್ಠೆಯಿಂದ ಇರಬೇಕು. ಹಾಗಾದರೆ ರುದ್ರಾಕ್ಷಿ ಮಾಲೆ ಧರಿಸುವಾಗ ಅನುಸರಿಸಬೇಕಾದ ನಿಯಮಗಳೇನು? ತಿಳಿಯೋಣ ಬನ್ನಿ. ರುದ್ರಾಕ್ಷಿ ಧರಿಸುವವರು ಯಾವುದೇ ದುಷ್ಟ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಾರದು ಅಥವಾ ಅಂತಹ ಕಾರ್ಯಗಳನ್ನು ಮಾಡುವವರ ಜೊತೆಗೆ ತನ್ನನ್ನು ತಾನು ತೊಡಗಿಸಿಕೊಳ್ಳಬಾರದು. ಉತ್ತಮ ಅಥವಾ ಸನ್ನಡತೆಯ ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಲಾಗುತ್ತದೆ.

ಪುರಾಣಗಳ ಪ್ರಕಾರ ಶಿವನು ಒಂದು ದಿನ ಪ್ರತ್ಯಕ್ಷನಾಗಿ ಒಬ್ಬ ವ್ಯಕ್ತಿ ಎಷ್ಟೇ ದುಷ್ಟನಾಗಿದ್ದರೂ ಸಹಾ ಆತನು ಸಾಯುವ ಸಮಯದಲ್ಲಿ ಆತನ ಕೊರಳಿನಲ್ಲಿ ರುದ್ರಾಕ್ಷ ಮಾಲೆಗಳನ್ನು ಧರಿಸಿದ್ದರೆ, ಆಗ ಅವನಿಗೆ ಶಿವನ ಕೃಪೆಯು ಖಂಡಿತ ದೊರೆಯುತ್ತದೆ ಎಂದು ಹೇಳಿದನು. ಈ ಒಂದು ಮಾತಿನಿಂದಲೇ ನಿಮಗೆ ಈ ಶಿವಮಾಲೆ ಅಥವಾ ರುದ್ರಾಕ್ಷಿಯ ಮಾಲೆಗೆ ಎಷ್ಟು ಶಕ್ತಿಯಿದೆ ಎನ್ನುವುದು ಅರ್ಥವಾಗುತ್ತದೆ. ರುದ್ರಾಕ್ಷಿ ಎಂದರೆ ರುದ್ರನ ಕಣ್ಣೀರು ಅಂದರೆ ಶಿವನ ಕಣ್ಣೀರು ಎಂದು ಹೇಳಲಾಗುತ್ತದೆ.

Leave a Comment