ರಸ್ತೆ ಬದಿ ವ್ಯಾಪಾರಿಯ ಹೃದಯ ಶ್ರೀಮಂತಿಕೆಗೆ ತಲೆ ಬಾಗಿದ ನಟಿ ಅಮೂಲ್ಯ ಅವರ ಪತಿ ಜಗದೀಶ್!! ಮನ ಮಿಡಿಯುವ ಪೋಸ್ಟ್

Written by Soma Shekar

Published on:

---Join Our Channel---

ನಟಿ ಅಮೂಲ್ಯ ಜಗದೀಶ್ ಅವರು ಅವಳಿ ಮಕ್ಕಳ ತಾಯಿಯಾಗಿರುವ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದಿದೆ. ನಟಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಅನೇಕ ಮಂದಿ ಅಭಿನಂದನೆಗಳನ್ನು ಸಹಾ ತಿಳಿಸಿದ್ದಾರೆ. ಈ ವೇಳೆ ಅಮೂಲ್ಯ ಅವರ ಪತಿ ಜಗದೀಶ್ ಅವರು ತಮಗೆ ದೊರೆತ ಒಂದು ವಿಶೇಷ ಶುಭ ಹಾರೈಕೆಯ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ದೀರ್ಘವಾದ ಪೋಸ್ಟ್ ಹಾಕಿ, ಕೆಲವು ಅರ್ಥಪೂರ್ಣ ಫೋಟೋಗಳನ್ನು ಹಂಚಿಕೊಂಡು ಎಲ್ಲರಿಗೂ ವಿಷಯ ತಿಳಿಸುವ ಜೊತೆಗೆ, ಒಂದು ಮನೋಜ್ಞವಾದ ಸಂದೇಶವನ್ನು ಅವರು ನೀಡಿದ್ದಾರೆ.

ಜಗದೀಶ್ ಅವರು ತಮ್ಮ ಪೋಸ್ಟ್ ನಲ್ಲಿ, ಇತ್ತೀಚಿಗೆ ನಡೆದ ಘಟನೆಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ. ಸುಸಜ್ಜಿತ ಶಾಪ್‌ಗೂ ಫುಟ್‌ಫಾತ್‌ನಲ್ಲಿ ಮಾರುವ ಪುಟ್ಟ ಅಂಗಡಿಗೂ ಎಷ್ಟೊಂದು ವ್ಯತ್ಯಾಸವಿದೆ ಎಂದು ಮನಸ್ಸಿಗೆ ಅನ್ನಿಸಿತು. ಕೆಲವೊಮ್ಮೆ ದುಬಾರಿ ಬೆಲೆ ತೆತ್ತು ಕೊಂಡುಕೊಳ್ಳುವ ಶಾಪ್‌ನಲ್ಲಿ ಹೃದಯ ಶ್ರೀಮಂತಿಕೆಯೇ ಬಹಳ ಕಡಿಮೆ ಎಂದೆನಿಸಬಹುದು, ಆದರೆ ಕಡಿಮೆ ಬೆಲೆ ಕೊಟ್ಟು ಸಣ್ಣ ಅಂಗಡಿ ಅಥವಾ ಫುಟ್‌ಫಾತ್‌ನಲ್ಲಿ ಏನನ್ನಾದರೂ ತೆಗೆದುಕೊಂಡರೆ ಅವರಲ್ಲಿ ಹೆಚ್ಚಿನ ಪ್ರೀತಿ ವಿಶ್ವಾಸ ಗಮನಕ್ಕೆ ಬರುತ್ತದೆ.

ಶಿವರಾತ್ರಿಯ ದಿನದಂದು ಜಯನಗರದ ಆಸ್ಪತ್ರೆಯ ಬಲಭಾಗದ ಫುಟ್‌ಫಾತ್‌ನಲ್ಲಿ ಬಲೂನ್‌ ಮತ್ತು ಆಟಿಕೆಗಳನ್ನು ಮಾರುತ್ತಿದ್ದ ಕಾಲುಗಳಿಲ್ಲದ ವ್ಯಕ್ತಿ ರವಿ ಎನ್ನುವವರು ʼಅಮೂಲ್ಯ ಮೇಡಂಗೆ ಅವಳಿ ಮಕ್ಕಳಾಗಿದ್ದು ಕೇಳಿ ತುಂಬಾ ಸಂತೋಷವಾಯ್ತು ಸರ್, ಎಲ್ಲರೂ ಚೆನ್ನಾಗಿದಾರಲ್ವಾ ? ನೀವು ಯಾವಾಗ ಹೊರಗೆ ಬರುತ್ತೀರಾ ಎಂದು ಕಾಯುತ್ತಿದ್ದೆʼ ಎಂದು ಆತ್ಮೀಯವಾಗಿ ಮಾತನಾಡಿಸಿದ್ದನ್ನು ಕೇಳಿ ನನಗೆ ನಿಜಕ್ಕೂ ಆಶ್ಚರ್ಯ ಮತ್ತು ಸಂತೋಷ ಎರಡೂ ಆಯಿತು.

ಶ್ರೀಮಂತರಲ್ಲದಿದ್ದರೂ ಅವರ ಹೃದಯ ಶ್ರೀಮಂತಿಕೆ ಎಷ್ಟು ದೊಡ್ಡದಲ್ವಾ ? ಹೀಗಾಗಿ ಡಿಸ್ಚಾರ್ಜ್‌ ಆಗುವಾಗ ದಿನದಂದು ಕಾಲುಗಳಿಲ್ಲದಿದ್ದರೂ ಸ್ವಾಭಿಮಾನದಿಂದ ನಿತ್ಯ ತನ್ನ ಕೆಲಸ ಮಾಡಿಕೊಂಡು ಶ್ರಮವಹಿಸಿ ತನ್ನ ಜೀವನ ನಡೆಸುತ್ತಿರುವ ಆ ವ್ಯಕ್ತಿಯಿಂದ ಮಕ್ಕಳಿಗಾಗಿ ಮೊದಲ ಆಟಿಕೆಗಳ ರೂಪದಲ್ಲಿ ಎರಡು ಬಲೂನ್‌ ಅನ್ನು ಕೊಂಡೆವು. ಎಲ್ಲವೂ ಕಮರ್ಷಿಯಲ್ ಮತ್ತು ದುಬಾರಿ ಆಗಿರುವ ಈಗಿನ ಕಾಲದಲ್ಲಿ ಈ ರೀತಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ಹೃದಯವಂತರ ಬಳಿ ನಾವು ವಸ್ತುಗಳನ್ನು ಕೊಂಡುಕೊಳ್ಳುವುದರಲ್ಲಿ ತಪ್ಪೇನಿಲ್ಲ ಅಲ್ವಾ ?

ಈ ರೀತಿ ಮಾಡುವುದರಿಂದ ಅವರಿಗೂ ಸಹಾಯವಾಗುತ್ತದೆ. ಅವರು ಇನ್ನಷ್ಟು ಆತ್ಮನಿರ್ಭರವಾಗಿ ಜೀವನ ನಡೆಸಲು ಅನುಕೂಲವಾಗುತ್ತದೆ. ನಿಮಗೇನಾದರೂ ಈ ರೀತಿ ಬೀದಿ ಬೀದಿಗಳಲ್ಲಿ ವ್ಯಾಪಾರ ಮಾಡುವವರು ಕಂಡರೆ ನೀವೂ ಅವರ ಬಳಿ ವಸ್ತುಗಳನ್ನು ಖರೀದಿಸಿ ಅವರನ್ನು ಪ್ರೋತ್ಸಾಹಿಸಿ ಎಂದು ಬರೆದುಕೊಳ್ಳುವ ಮೂಲಕ ರಸ್ತೆ ಬದಿಯ ವ್ಯಾಪಾರಿಯು ತೋರಿದ ಹೃದಯ ಶ್ರೀಮಂತಿಕೆಗೆ ಅಪಾರವಾದ ಮೆಚ್ಚುಗೆಯನ್ನು ಅವರು ತೋರಿಸಿದ್ದಾರೆ.

Leave a Comment