ಬಾಲಿವುಡ್ ನಲ್ಲಿ ತಗ್ಗುತ್ತಿದೆಯಾ ಖಾನ್ ಗಳ ಅಬ್ಬರ?? ಮುಗಿಯುತ್ತಿದೆಯಾ ಖಾನ್ ಗಳ ಕಾಲ??

Written by Soma Shekar

Published on:

---Join Our Channel---

ಬಾಲಿವುಡ್ ಎಂದೊಡನೆ ನಮಗೆ ಮೊದಲು ಕೇಳಿ ಬರುವ ಹೆಸರು ಹಿರಿಯ ನಟ ಅಮಿತಾಬ್ ಬಚ್ಚನ್ ಅವರದ್ದು. ಅದು ಬಿಟ್ಟರೆ ದೊಡ್ಡ ಸ್ಟಾರ್ ಗಳು ಎಂದರೆ ಅಲ್ಲಿ ಖಾನ್ ತ್ರಯರು ಪ್ರತ್ಯಕ್ಷ ಆಗುತ್ತಾರೆ. ಹೌದು, ಬಾಲಿವುಡ್ ಎಂದರೆ ಮೂರು ಜನ ಖಾನ್ ಗಳ ಹೆಸರು ಮಂಚೂಣಿಯಲ್ಲಿದೆ. ಬಾಲಿವುಡ್ ನ ಭಾಯಿಜಾನ್ ಸಲ್ಮಾನ್ ಖಾನ್, ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಹಾಗೂ ಕಿಂಗ್ ಖಾನ್ ಎಂದು ಹೆಸರಾದ ಶಾರೂಖ್ ಖಾನ್. ಈ ಮೂವರು ಎಂದರೆ ಬಾಲಿವುಡ್ ಎನ್ನುವಷ್ಟರ ಮಟ್ಟಕ್ಕೆ ಬಾಲಿವುಡ್ ನಲ್ಲಿ ಅವರ ಪ್ರಭಾವ ಹಾಗೂ ಫಾಲೋಯಿಂಗ್ ಇದೆ.

ಅನೇಕ ಸಂದರ್ಭಗಳಲ್ಲಿ ಬಾಲಿವುಡ್ ಇವರ ಹಿಡಿತದಲ್ಲಿಯೇ ಇದೆ , ಇವರನ್ನು ಎದುರಿಸಿ ನಿಲ್ಲುವ, ಬೆಳೆಯುವ ಅವಕಾಶಗಳು ತೀರಾ ಕಡಿಮೆ ಎನ್ನುವ ಮಾತುಗಳು ಸಹಾ ಆಗಾಗ ಕೇಳಿ ಬರುತ್ತಲೇ ಇದೆ. ಅಲ್ಲದೇ ಕೆಲವೊಮ್ಮೆ ಇದು ನಿಜವೂ ಅನಿಸುತ್ತದೆ. ಏಕೆಂದರೆ ನಟನೆ, ನಿರ್ಮಾಣ, ಎಲ್ಲೆಡೆ ಕೆಲವು ಕುಟುಂಬಗಳ ಪ್ರಭಾವ ಸ್ಪಷ್ಟವಾಗಿ ಕಾಣುತ್ತದೆ. ಬಾಲಿವುಡ್ ನಲ್ಲಿ ಈ ಮೂರು ಜನ ಖಾನ್ ಗಳ ಅಭಿಮಾನಿಗಳ ಸಂಖ್ಯೆ ಕೂಡಾ ಕಡಿಮೆಯೇನಿಲ್ಲ ಎನ್ನುವುದು ವಾಸ್ತವ.

ಆದರೆ ಕಾಲ ಬದಲಾಗುತ್ತಿದೆಯಾ ?ಹೌದು ಎನ್ನುತ್ತದೆ ಇತ್ತೀಚಿನ ಬೆಳವಣಿಗೆಗಳು. ಪ್ಯಾನ್ ಇಂಡಿಯಾ ಸಿನಿಮಾಗಳು, ಓಟಿಟಿ ಜನಪ್ರಿಯತೆ, ಸೋಶಿಯಲ್ ಮೀಡಿಯಾ ಅಬ್ಬರಗಳು ಹೆಚ್ಚಿದಂತೆ ಖಾನ್ ಗಳ ಪ್ರಭಾವ ಕಡಿಮೆಯಾದಂತೆ ಕಾಣುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾಗಳ ಫಲ ಎನ್ನುವಂತೆ ದಕ್ಷಿಣ ಸಿನಿಮಾ ರಂಗ, ವಿಶೇಷವಾಗಿ ಟಾಲಿವುಡ್ ಬಾಲಿವುಡ್ ಅನ್ನು ಹಿಂದಿಕ್ಕೆ ಮುಂದೆ ನಡೆದಿದೆ. ಉತ್ತರ ಭಾರತದ ಜನರು ಕೂಡಾ ದಕ್ಷಿಣದ ಡಬ್ಬಿಂಗ್ ಸಿನಿಮಾಗಳ ಕಡೆಗೆ ವಿಶೇಷ ಒಲವನ್ನು ತೋರಿಸುತ್ತಿದ್ದಾರೆ.

ಖಾನ್ ಗಳ ಸಿನಿಮಾಗಳು ಕೂಡಾ ಇತ್ತೀಚಿಗೆ ದೊಡ್ಡ ಮಟ್ಟದ ಯಶಸ್ಸು ಪಡೆದಿಲ್ಲ. ಶಾರೂಖ್ ಖಾನ್ ನಿರಂತರ ಸೋಲುಗಳಿಂದ ಕಂಗೆಟ್ಟಿದ್ದಾರೆ. ಹೊಸ ಸಿನಿಮಾ ಅವರಿಗೆ ಗೆಲುವನ್ನು ತರಬೇಕಿದೆ. ಇನ್ನು ಬಾಲಿವುಡ್ ನಲ್ಲಿ ವಿಕ್ಕಿ ಕೌಶಲ್, ಆಯುಷ್ಮಾನ್ ಖುರಾನಾ, ಸಿದ್ಧಾಂತ್ ರಂತಹ ನಟರು ಪ್ರತಿಭೆಯ ಮೂಲಕ ದೊಡ್ಡ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದಾರೆ. ನಟ ಆಯುಷ್ಮಾನ್ ಖುರಾನಾ ಜಾಹೀರಾತುಗಳಲ್ಲಿ ಯಾವುದೇ ದೊಡ್ಡ ಬಾಲಿವುಡ್ ಸ್ಟಾರ್ ಗಿಂತ ಕಡಿಮೆಯೇನಿಲ್ಲ ಎಂದು ಮಿಂಚುತ್ತಿದ್ದಾರೆ. ಹೊಸ ನಿರ್ದೇಶಕರ, ಯುವ ನಾಯಕರ ಸಿನಿಮಾಗಳು ಮೋಡಿ ಮಾಡುತ್ತಿವೆ.

ಈ ಬೆಳವಣಿಗೆಗಳನ್ನು ಗಮನಿಸಿದಾಗ ಬಾಲಿವುಡ್ ನಲ್ಲಿ ಖಾನ್ ಶಕೆ ಮುಗಿಯಿತಾ? ಎನ್ನುವ ಪ್ರಶ್ನೆ ಸಹಜವಾಗಿಯೇ ಮೂಡಿದೆ. ಆದರೆ ಇದೇ ವೇಳೆ ಈಗ ಸಲ್ಮಾನ್ ಖಾನ್ ರ ಟೈಗರ್ 3, ಶಾರೂಖ್ ಖಾನ್ ಅಭಿನಯದ ಪಠಾಣ್ ಹಾಗೂ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಬಿಡುಗಡೆಗೆ ಸಜ್ಜಾಗುತ್ತಿದ್ದು, ಈ ಸಿನಿಮಾಗಳು ಹೊಸ ದಾಖಲೆ ಬರೆಯಲಿದೆಯಾ?? ಮತ್ತೆ ಖಾನ್ ತ್ರಯರ ಚಾರ್ಮ್ ಅನ್ನು ದುಪ್ಪಟ್ಟು ಮಾಡಲಿದೆಯಾ? ಎನ್ನುವುದನ್ನು ಕಾದು ನೋಡಬೇಕಾಗಿದೆ.

Leave a Comment