ಪ್ರೇಮಿಗಳ ದಿನದಂದೇ ಸಂಪ್ರದಾಯಬದ್ಧವಾಗಿ ವಿವಾಹವಾದ ತೃತೀಯ ಲಿಂಗಿ ಜೋಡಿ

Written by Soma Shekar

Published on:

---Join Our Channel---

ಫೆಬ್ರವರಿ 14 ಎಂದರೆ ಪ್ರೇಮಿಗಳ ದಿನ, ( ವ್ಯಾಲಂಟೈನ್ಸ್ ಡೇ ), ಈ ದಿನ ಬಂತೆಂದರೆ ಅನೇಕ ಯುವಕ, ಯುವತಿಯರು ಹಾಗೂ ಒಬ್ಬರನ್ನೊಬ್ಬರು ಇಷ್ಟ ಪಡುವವರು ತಮ್ಮ ಪ್ರೇಮ ನಿವೇದನೆ ಯನ್ನು ಮಾಡಿಕೊಳ್ಳಲು ಬಯಸುತ್ತಾರೆ. ಪ್ರೇಮಿಗಳ ಪಾಲಿಗೆ ಇದೊಂದು ವಿಶೇಷ ದಿನ. ಈ ದಿನ ಅನೇಕ ಪ್ರೇಮ ಕಥೆಗಳು ಆರಂಭವೂ ಆಗುತ್ತದೆ, ಇನ್ನೂ ಕೆಲವು ಮುಕ್ತಾಯವೂ ಸಹಾ ಆಗುತ್ತದೆ. ಆದರೆ ಪ್ರೇಮಿಗಳು ಈ ದಿನಕ್ಕಾಗಿ ಕಾಯುವುದು ಮಾತ್ರ ಸತ್ಯ. ಇನ್ನೂ ಕೆಲವು ಪ್ರೇಮಿಗಳಾದರೆ ತಮ್ಮ ದಾಂಪತ್ಯ ಜೀವನದ ಶುಭಾರಂಭವನ್ನು ಸಹಾ ಇದೇ ದಿನದಂದು ಮಾಡುತ್ತಾರೆ.

ಕೇರಳದಲ್ಲಿ ಇಂತಹುದೇ ಒಂದು ಘಟನೆ ನಡೆದಿದೆ, ಆದರೆ ಇಲ್ಲಿ ನಡೆದಿರುವ ವಿವಾಹಕ್ಕೆ ಒಂದು ವಿಶೇಷತೆ ಖಂಡಿತ ಇದೆ. ಹೌದು ಏಕೆಂದರೆ ಇಲ್ಲಿ ಮದುವೆಯಾಗಿರುವ ಜೋಡಿ ತೃತೀಯ ಲಿಂಗಿಗಳಾಗಿದ್ದಾರೆ. ತೃತೀಯ ಲಿಂಗಿ ಮನು ಮತ್ತು ಶ್ಯಾಮಾ ಎನ್ನುವ ಜೋಡಿ ಫೆಬ್ರವರಿ ಹದಿನಾಲ್ಕರಂದು ಪ್ರೇಮಿಗಳ ದಿನದಂದು ತಮ್ಮ‌ ಕುಟುಂಬ ವರ್ಗದವರ ಸಮ್ಮತಿ ಪಡೆದು ಸಂಪ್ರದಾಯ ಬದ್ಧವಾಗಿ ವಿವಾಹವನ್ನು ಮಾಡಿಕೊಂಡು, ಹೊಸ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಇವರ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮನು ತ್ರಿಶೂರ್ ನವರಾಗಿದ್ದು ಇವರು ಟ್ರಾನ್ಸ್ ಮ್ಯಾನ್ ಆಗಿದ್ದು ಐಟಿ ಕಂಪನಿಯೊಂದರಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ, ಶ್ಯಾಮಾ ಟ್ರಾನ್ಸ್ ವುಮೆನ್ ಆಗಿದ್ದು ಇವರು ಕೇರಳದ ಸಾಮಾಜಿಕ ನ್ಯಾಯ ಇಲಾಖೆಯ ಅಡಿಯಲ್ಲಿ ಟ್ರಾನ್ಸ್ ಜೆಂಡರ್ ಸೆಲ್ ನಲ್ಲಿ ಉದ್ಯೋಗಿಯಾಗಿದ್ದಾರೆ. ಆಕೆ ತಿರುವನಂತಪುರಂ ಮೂಲದವರಾಗಿದ್ದಾರೆ. ಇನ್ನು ಮದುವೆಯ ನಂತರ ಎಲ್ಲಾ ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ಕೋರ್ಟ್ ನಿಂದ ತಮ್ಮ ಮದುವೆಗೆ ಅಧಿಕೃತ ಸಮ್ಮತಿಗಾಗಿ ಮನವಿ ಮಾಡುತ್ತೇವೆ ಎಂದಿದ್ದಾರೆ.

ವಿಶೇಷ ಕಾನೂನಿನ ಅಡಿಯಲ್ಲಿ ತೃತೀಯ ಲಿಂಗಿಗಳ ಗುರುತು ಪತ್ರದಲ್ಲಿ ಪುರುಷ, ಮಹಿಳೆ ಎಂದು ನಮೂದಿಸಲ್ಪಟ್ಟಿದ್ದರೆ ಅಂತಹವರ ಮದುವೆಯನ್ನು ಕಾನೂನಿನ ಮೂಲಕ‌ ರಿಜಿಸ್ಟ್ರೇಷನ್ ಮಾಡಲು ಅವಕಾಶವಿದೆ ಎನ್ನುವ ಮನು, ತಮ್ಮ ಗುರುತು ಪತ್ರಗಳಲ್ಲಿ ಕೇವಲ ತೃತೀಯ ಲಿಂಗಿ ಎಂದು ಮಾತ್ರವೇ ಇರುವುದರಿಂದ ತಾವು ಕೋರ್ಟ್ ಮುಖಾಂತರ ಮದುವೆ ನೋಂದಣಿಗೆ ಮುಂದಾಗಲಿದ್ದೇವೆ ಎಂದು ಮಾದ್ಯಮವೊಂದಕ್ಕೆ ತಿಳಿಸಿದ್ದಾರೆ.‌

Leave a Comment