ಪ್ಯಾನ್ ಇಂಡಿಯಾ ಸ್ಟಾರ್ ಆಗಲು ಸಜ್ಜಾದ ಜೊತೆ ಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ: ಪರಭಾಷೆಗೆ ನಟಿಯ ಎಂಟ್ರಿ

Written by Soma Shekar

Published on:

---Join Our Channel---

ಜೊತೆ ಜೊತೆಯಲಿ ಜನಪ್ರಿಯ ಧಾರಾವಾಹಿ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಯವಾದ ನಟಿ ಮೇಘಾ ಶೆಟ್ಡಿ ಪಡೆದಿರುವ ಜನಪ್ರಿಯತೆ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಖಂಡಿತ ಇಲ್ಲ. ಅನು ಸಿರಿಮನೆ ಪಾತ್ರದ ಮೂಲಕ ನಟಿ ಮನೆ ಮಾತಾಗಿದ್ದಾರೆ. ನಟಿ ಮೇಘಾ ಶೆಟ್ಟಿ ಅವರು ಕಿರುತೆರೆಯಲ್ಲಿ ಮಾತ್ರವೇ ಅಲ್ಲದೇ ಸ್ಯಾಂಡಲ್ವುಡ್ ಸಿನಿಮಾಗಳು ಮತ್ತು ಜಾಹೀರಾತುಗಳಲ್ಲಿ ಕೂಡಾ ಕಾಣಿಸಿಕೊಂಡು ಯಶಸ್ಸನ್ನು ಪಡೆದುಕೊಂಡು ಮುಂದೆ ಸಾಗಿದ್ದಾರೆ. ನಟಿ ಅಭಿನಯಿಸಿರುವ ಎರಡು ಸಿನಿಮಾಗಳು ಅದಾಗಲೇ ಬಿಡುಗಡೆ ಆಗಿವೆ. ನಟಿಯು ನಾಯಕಿಯಾಗಿರುವ ದಿಲ್ ಪಸಂದ್ ಮತ್ತು ತ್ರಿಬಲ್ ರೈಡಿಂಗ್ ಸಿನಿಮಾಗಳ ಮೂಲಕ ಸಿನಿ ಪ್ರೇಮಿಗಳ ಗಮನವನ್ನು ಸೆಳೆದಿದ್ದಾರೆ.

ಒಂದು ಸೀರಿಯಲ್ ನಿಂದಲೇ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡು ಸಿನಿಮಾ ರಂಗದಲ್ಲಿ ಬಂದ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು, ಸಿನಿಮಾ, ಸೀರಿಯಲ್ ಎರಡನ್ನೂ ಸಹಾ ಸರಿದೂಗಿಸಿಕೊಂಡು ಬರುತ್ತಿರುವ ನಟಿಯು ಇದೀಗ ಕನ್ನಡದಿಂದ ಬೇರೆ ಬೇರೆ ಭಾಷೆಯ ಚಿತ್ರರಂಗಕ್ಕೆ ಅಡಿಯಿಡಲು ಸಜ್ಜಾಗಿದ್ದು, ಅಲ್ಲಿನ ಸಿನಿ ಪ್ರೇಮಿಗಳ ಮನಸ್ಸಿಗೆ ಮೋಡಿ ಮಾಡುವ ತಯಾರಿಯನ್ನು ನಡೆಸಿದ್ದಾರೆ. ಹೌದು, ಮೇಘಾ ಶೆಟ್ಟಿ ಅಭಿನಯದ ಆಪರೇಷನ್ ಲಂಡನ್ ಕೆಫೆ ಹೆಸರಿನ ಸಿನಿಮಾ ಬೇರೆ ಬೇರೆ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಈ ಸಿನಿಮಾ ಮೂಲಕ ನಟಿ ಬೇರೆ ಬೇರೆ ಭಾಷೆಗೆ ಪರಿಚಯ ಆಗಲಿದ್ದಾರೆ.

ಮೇಘಾ ಶೆಟ್ಟಿ ಅಭಿನಯದ ಆಪರೇಶನ್ ಲಂಡನ್ ಕೆಫೆ ಕನ್ನಡ ಮಾತ್ರವೇ ಅಲ್ಲದೇ ಮರಾಠಿ, ಹಿಂದಿ, ತೆಲುಗು, ತಮಿಳು ಮತ್ತು ಮಲೆಯಾಳಂ ಅಂದರೆ ಒಟ್ಟು ಆರು ಭಾಷೆಯಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಈ ಮೂಲಕ ಮೇಘಾ ಶೆಟ್ಟಿ ಕನ್ನಡದಿಂದ ಅನ್ಯ ಭಾಷೆಗಳಿಗೂ ಎಂಟ್ರಿ ನೀಡಲು ಸಜ್ಜಾಗಿದ್ದಾರೆ. ಈ ಸಿನಿಮಾದಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ಮೇಘಾ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ.‌ ಯುವ ನಟ ಕವೀಶ್ ಶೆಟ್ಟಿ ಈ ಸಿನಿಮಾದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದು, ಮರಾಠಿ ಸಿನಿಮಾ ನಟ ವಿರಾಟ್ ಮಡಕೆ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಆಪರೇಷನ್ ಲಂಡನ್ ಕೆಫೆ 2023 ರಲ್ಲಿ ತೆರೆಗೆ ಬರಲಿದೆ. ಇನ್ನು ಕನ್ನಡ ಕಿರುತೆರೆ ಮತ್ತು ಸಿನಿಮಾಗಳಲ್ಲಿ ಹೆಸರನ್ನು ಮಾಡುತ್ತಿರುವ ನಟಿ ಮೇಘಾ ಶೆಟ್ಟಿ ಅವರು ಈಗ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಸಹಾ ಆಗಿ ಸಕ್ಸಸ್ ಪಡೆಯಲಿದ್ದಾರಾ? ಎನ್ನುವುದನ್ನು ಕಾದು ನೋಡಬೇಕಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ನಟಿ ಮೇಘಾ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸಂಖ್ಯೆಯ ಹಿಂಬಾಲಕರನ್ನು ಪಡೆದುಕೊಂಡಿದ್ದಾರೆ. ಕಿರುತೆರೆಯಿಂದ ಪರಿಚಯವಾಗಿ ಹತ್ತು ಲಕ್ಷ ಹಿಂಬಾಲಕರನ್ನು ಪಡೆದುಕೊಂಡ ಕೆಲವೇ ನಟಿಯರಲ್ಲಿ ಮೇಘಾ ಕೂಡಾ ಒಬ್ಬರಾಗಿದ್ದಾರೆ.

Leave a Comment