ತೆಲುಗಿನ ಹಿರಿಯ ನಟ ಕೃಷ್ಣ ನಿಧನ: ಒಂದೂವರೆ ತಿಂಗಳಲ್ಲೇ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡ ಮಹೇಶ್ ಬಾಬು

Written by Soma Shekar

Published on:

---Join Our Channel---

ತೆಲುಗು ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಎನ್ನುವ ಹೆಗ್ಗಳಿಕೆಯನ್ನು ಪಡೆದವರು ನಟ ಮಹೇಶ್ ಬಾಬು ಹಾಗೂ ಅವರ ತಂದೆ ತೆಲುಗು ಸಿನಿಮಾ ರಂಗದ ಹಿರಿಯ ನಟ ಸೂಪರ್ ಸ್ಟಾರ್ ಕೃಷ್ಣ ಅವರು. ಆದರೆ ಇದೀಗ ನಟ ಮಹೇಶ್ ಬಾಬು ಅವರ ಮನೆಯಲ್ಲಿ ಸೂತಕದ ಛಾಯೆ ಮೂಡಿದೆ. ತೆಲುಗು ಸಿನಿಮಾ ರಂಗ ಶೋಕ ಸಾಗರದಲ್ಲಿ ಮುಳುಗಿದೆ. ಹೌದು, ಕೇವಲ ಒಂದೂವರೆ ತಿಂಗಳ ಅಂತರದಲ್ಲಿ ನಟ ಮಹೇಶ್ ಬಾಬು ಅವರು ತಮ್ಮ ತಾಯಿ ಮತ್ತು ತಂದೆ ಇಬ್ಬರನ್ನೂ ಸಹಾ ಕಳೆದುಕೊಂಡಿದ್ದಾರೆ. ಒಂದೂವರೆ ತಿಂಗಳ ಹಿಂದೆ ನಟ ಮಹೇಶ್ ಬಾಬು ತಮ್ಮ ತಾಯಿ ಇಂದಿರಾ ದೇವಿಯನ್ನು ಕಳೆದುಕೊಂಡು,ಆ ದುಃಖದಿಂದ ಹೊರ ಬರುವ ಮೊದಲೇ ಈಗ ತಮ್ಮ ತಂದೆಯನ್ನು ಸಹಾ ಕಳೆದುಕೊಂಡಿದ್ದಾರೆ.

ನಟ ಕೃಷ್ಣ ಅವರು ತೆಲುಗು ಸಿನಿಮಾ ರಂಗದ ಲೆಜೆಂಡರಿ ನಟರಲ್ಲಿ ಒಬ್ಬರಾಗಿದ್ದಾರೆ. ಎನ್ ಟಿ ಆರ್, ಎ ಎನ್ ಆರ್ ಮತ್ತು ಕೃಷ್ಣ ಅವರೆಲ್ಲಾ ಸಹಾ ತೆಲುಗು ಸಿನಿಮಾ ರಂಗದಲ್ಲಿ ಮಹೋನ್ನತ ಸಾಧನೆಯನ್ನು ಮಾಡಿದ ಅಂದಿನ ಸ್ಟಾರ್ ಕಲಾವಿದರು. ಸೂಪರ್ ಸ್ಟಾರ್ ಕೃಷ್ಣ ಅವರ ಮೊದಲ ಪತ್ನಿ ಇಂದಿರಾ ದೇವಿ ಅವರಾಗಿದ್ದು, ಅವರ ಮಕ್ಕಳಲ್ಲಿ ಮಹೇಶ್ ಬಾಬು ಕೂಡಾ ತಂದೆಯ ಹಾದಿಯಲ್ಲೇ ನಡೆದು ಸಿನಿಮಾ ರಂಗದಲ್ಲಿ ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದಾರೆ. ನಟ ಕೃಷ್ಣ ಅವರು ಟಾಲಿವುಡ್ ನ ಅಂದಿನ ಸ್ಟಾರ್ ನಟಿ, ನಿರ್ಮಾಪಕಿ ಮತ್ತು ನಿರ್ದೇಶಕಿ ವಿಜಯ ನಿರ್ಮಲ ಅವರನ್ನು ಪ್ರೀತಿಸಿ ಎರಡನೇ ಮದುವೆ ಆಗಿದ್ದರು.

ಸಿನಿಮಾ ರಂಗದಲ್ಲಿ ವೈವಿದ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದ ಕೃಷ್ಣ ಅವರು ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ್ದರು. ಅವರ ಡೈಲಾಗ್ ಗಳು ಇಂದಿಗೂ ಸಹಾ ಜನಪ್ರಿಯತೆ ಪಡೆದಿದೆ. ಹಿರಿಯ ನಟನ ಅಗಲಿಕೆಯ ವಾರ್ತೆ ತಿಳಿದು ಸಿನಿಮಾ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪವನ್ನು ಸೂಚಿಸುತ್ತಿದ್ದಾರೆ. 80 ವರ್ಷ ವಯಸ್ಸಿನ ನಟ ಕೃಷ್ಣ ಅವರಿಗೆ ನಿನ್ನೆ ಹೃದಯಾಘಾತವಾಗಿತ್ತು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದಾಗಲೇ ವೈದ್ಯರು ಪರಿಸ್ಥಿತಿ ತೀ ವ್ರ ವಾಗಿ ಎನ್ನುವ ಸೂಚನೆಯನ್ನು ನೀಡಿದ್ದರು. ನಟ ಮಹೇಶ್ ಬಾಬು ತಂದೆಯನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಿಲ್ಲ.

Leave a Comment