ತನ್ನ ಕನ್ನಡಿಗ ಗುರುವನ್ನು ಭೇಟಿ ಮಾಡಿ, ಅಭಿನಂದಿಸಿದ ಚಿನ್ನದ ಹುಡುಗ ನೀರಜ್ ಚೋಪ್ರಾ

Written by Soma Shekar

Published on:

---Join Our Channel---

ಒಲಂಪಿಕ್ಸ್ ನಲ್ಲಿ ಚಿನ್ನ ಗೆಲ್ಲುವ ಮೂಲಕ ಒಂದು ಐತಿಹಾಸಿಕ ವಿಜಯವನ್ನು ತನ್ನದಾಗಿಸಿಕೊಂಡವರು ಭಾರತೀಯ ಕ್ರೀಡಾಪಟು ನೀರಜ್ ಚೋಪ್ರಾ. ನೀರಜ್ ಟೋಕಿಯೋ ಒಲಂಪಿಕ್ಸ್ ನಲ್ಲಿ ಜಾವೆಲಿನ್ ಥ್ರೋ ನಲ್ಲಿ ಬಂಗಾರದ ಪದಕವನ್ನು ಗೆದ್ದ ನಂತರ ಇಡೀ ದೇಶದಲ್ಲಿ ಅವರದ್ದೇ ಸುದ್ದಿಗಳು ತುಂಬಿ ಹೋಗಿವೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ನೀರಜ್ ಅವರ ವಿವಿಧ ಫೋಟೋಗಳು ಹರಿದಾಡುತ್ತಿವೆ ಹಾಗೂ ಅವರ ಅಭಿಮಾನಿಗಳ‌ ಸಂಖ್ಯೆ ಹೆಚ್ಚಾಗಿದೆ. ಈಗ ಈ ವಿಜಯದ ಬೆನ್ನಲ್ಲೇ ನೀರಜ್ ತಮ್ಮ ಗುರುವನ್ನು ಭೇಟಿ ಮಾಡಿದ್ದು ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. 2015 ರಿಂದ ಮೂರು ವರ್ಷಗಳ ಕಾಲ ತಮಗೆ ತರಬೇತಿ ನೀಡಿದ್ದ ಕಾಶೀನಾಥ್ ನಾಯ್ಕ್ ಅವರ ಮನೆಗೆ ನೀರಜ್ ಭೇಟಿ ನೀಡಿದ್ದು, ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪುಣೆಯ ಕೋರೆಗಾಂವ್ ನಲ್ಲಿ ವಾಸವಾಗಿರುವ ಕಾಶೀನಾಥ್ ನಾಯ್ಕ್ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆ ಗ್ರಾಮದವರಾಗಿದ್ದಾರೆ. ಕಳೆದ 23 ವರ್ಷಗಳಿಂದ ಸೈನ್ಯದಲ್ಲಿದ್ದ ಕಾಶೀನಾಥ್ ಅವರು 2010 ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಜಾವೆಲಿನ್ ಥ್ರೋ ನಲ್ಲಿ ಕಂಚಿನ ಪದಕವನ್ನು ಪಡೆದುಕೊಂಡಿದ್ದರು. 2015 ರಿಂದ 2017 ರವರೆಗೆ ನೀರಜ್ ಚೋಪ್ರಾ ಅವರು ಇವರ ಬಳಿ ತರಬೇತಿಯನ್ನು ಪಡೆದಿದ್ದರು. ಆಗ ನೀರಜ್ ಅವರು ಜೂನಿಯರ್ ವಿಭಾಗದಲ್ಲಿ 86.48 ಮೀ. ವಿಶ್ವ ದಾಖಲೆ ಮಾಡಿದ್ದರು.

ನೀರಜ್ ಅವರು ಕಾಶೀನಾಥ್ ನಾಯ್ಕ್ ಅವರ ಮನೆಗೆ ಭೇಟಿ ನೀಡಿದಾಗ, ಕಾಶೀನಾಥ್ ಅವರ ಪತ್ನಿ ಚೈತ್ರ ಅವರು ಬಂಗಾರದ ಹುಡುಗನಿಗೆ ಆರತಿ ಯನ್ನು ಮಾಡಿ ಮನೆಯೊಳಗೆ ಕರೆದುಕೊಂಡಿದ್ದಾರೆ. ಸುಮಾರು ಒಂದು ಗಂಟೆ ಕಾಲ ಅವರ ಮನೆಯಲ್ಲಿದ್ದ ನೀರಜ್ ಅವರು ತಮ್ಮ ಗುರು ಕಾಶೀನಾಥ್ ಅವರ ಜೊತೆ ಮಾತುಕತೆ ನಡೆಸಿದ್ದು, ಇಬ್ಬರೂ ಒಲಂಪಿಕ್ಸ್ ನ ಕುರಿತಾಗಿ ಹಲವು ವಿಚಾರಗಳನ್ನು ಮಾತನಾಡಿದ್ದಾರೆ. ನೀರಜ್ ಅವರು ಅವರ ಗುರುವನ್ನು ಭೇಟಿಯಾದ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

Leave a Comment