ಕೈ ಇಲ್ಲವೆಂದು ಹೆತ್ತ ಮಗನನ್ನು ಭಿಕ್ಷುಕರಿಗೆ ಮಾರಿದ ತಂದೆ-ತಾಯಿ: ಚಿಕ್ಕಮ್ಮನ ಆರೈಕೆಯಲ್ಲಿ ಬೆಳೆದು ಆದ ಚಿಕನ್ ಟಿಕ್ಕಾ ಕಿಂಗ್

Written by Soma Shekar

Published on:

---Join Our Channel---

ಧೈರ್ಯ ಮತ್ತು ವಿಶ್ವಾಸದಿಂದ ಕೆಲಸ ಮಾಡುವವರಿಗೆ ಜೀವನದಲ್ಲಿ ಯಾವುದೇ ಸಮಸ್ಯೆ ಎದುರಾದರೂ ಸಹಾ ಅವರು ಅದನ್ನು ಎದುರಿಸಿ ಮುಂದೆ ಹೆಜ್ಜೆಗಳನ್ನು ಇಟ್ಟು ಸಾಗುತ್ತಾರೆ.‌ ಅವರು ತಮ್ಮ ಪ್ರತಿ ಕಷ್ಟಗಳ ನಡುವೆಯೂ ಸಹಾ ಗೆಲುವನ್ನು ಸಾಧಿಸುತ್ತಾರೆ. ಹಾಗೆ ಜೀವನದಲ್ಲಿ ಎದುರಾದ ಎಲ್ಲಾ ಕಠಿಣತೆಗಳನ್ನು ಎದುರಿಸಿ ತನ್ನ ಜೀವನದಲ್ಲಿ ಒಂದು ಅದ್ವಿತೀಯ ಸಾಧನೆಯನ್ನು ಮಾಡಿದವರು, ಅನೇಕರಿಗೆ ಇಂದು ಸ್ಪೂರ್ತಿಯಾಗಿರುವವರು ಎಂದರೆ ಅವರು ತೇಜಿಂದರ್ ಮೆಹ್ರಾ. ಹುಟ್ಟಿನಿಂದಲೇ ಒಂದು ಕೈಯಿಲ್ಲದೇ ಇರುವ ತೇಜಿಂದರ್ ಇಂದು ತಮ್ಮ ಜೀವನವನ್ನು ತನ್ನ ಸ್ವಂತ ಶ್ರಮದಿಂದ ಸಂತೋಷವಾಗಿ ನಡೆಸುವ ಮೂಲಕ ಅದೆಷ್ಟೋ ಜನರಿಗೆ ಪ್ರೇರಣೆಯಾಗಿದ್ದಾರೆ. ಜೀವನದಲ್ಲಿ ಗುರಿ ಸಾಧಿಸುವ ಹಾದಿಯಲ್ಲಿ ಎದುರಾಗುವ ತೊಂದರೆಗಳಿಂದ ಹತಾಶರಾದವರಿಗೆ ತೇಜಿಂದರ್ ಅವರು ಸ್ಪೂರ್ತಿಯ ಸೆಲೆಯಾಗಿದ್ದಾರೆ.

ದೆಹಲಿಯಲ್ಲಿ ಜನಿಸಿದ ತೇಜಿಂದರ್ ಅವರ ವಯಸ್ಸು ಕೇವಲ 26 ವರ್ಷಗಳು ಮಾತ್ರ. ತೇಜಿಂದರ್ ಅವರು ಜನಿಸಿದಾಗ ಸಾಮಾನ್ಯ ಮಕ್ಕಳ ಹಾಗೆ ಎರಡು ಕೈಗಳ ಬದಲಾಗಿ ಅವರಿಗೆ ಒಂದು ಕೈ ಮಾತ್ರವೇ ಇತ್ತು. ಮಗು ಹೀಗೆ ಹುಟ್ಟಿದ್ದರಿಂದ ಚಿಂತಿತರಾದ ಅವರ ತಂದೆ ತಾಯಿ ಮಮತೆ ಯನ್ನು ಮರೆತು ಆ ಮಗುವನ್ನು 20 ಸಾವಿರ ರೂ.ಗಳ ಆಸೆಗೆ ಭಿಕ್ಷಕುರ ತಂಡವೊಂದಕ್ಕೆ ಮಾರಿ ಬಿಟ್ಟರು. ಅಲ್ಲಿಂದಲೇ ತೇಜಿಂದರ್ ಅವರ ಜೀವನದಲ್ಲಿ ನಿಜವಾದ ಒಂದು ಸಂ ಘ ರ್ಷ ಆರಂಭವಾಗಿ ಹೋಯಿತು. ಆದರೆ ತೇಜಿಂದರ್ ಅವರ ಚಿಕ್ಕಮ್ಮನಿಂದ ಇದೆಲ್ಲವನ್ನು ನೋಡಲು ಆಗಲಿಲ್ಲ. ಮಗುವಿನ ಮೇಲೆ ಅವರಿಗೆ ಅತೀವವಾದ ಪ್ರೀತಿ ಹಾಗೂ ಕಾಳಜಿ ಇತ್ತು.

ತೇಜಿಂದರ್ ಅವರ ಚಿಕ್ಕಮ್ಮನ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲವಾದರೂ ಆಕೆ ತೇಜಿಂದರ್ ನನ್ನು ತನ್ನ ಜೊತೆಯಲ್ಲಿ ಇರಿಸಿಕೊಳ್ಳಲು ನಿರ್ಧಾರ ಮಾಡಿದರು. ಆಕೆ ಭಿಕ್ಷುಕರ ತಂಡದಿಂದ ತೇಜಿಂದರ್ ನನ್ನು ರಕ್ಷಿಸಿ ಮನೆಗೆ ಕರೆ ತಂದರು, ತಾನೇ ಆ ಮಗುವಿಗೆ ತಾಯಾದರು. ತನ್ನ ಬಳಿ ಇರುವ ಅಲ್ಪ ಸ್ವಲ್ಪ ಹಣದಿಂದಲೇ ತೇಜಿಂದರ್ ಅವರನ್ನು ಶಾಲೆಗೆ ಕಳುಹಿಸಿದರು. ಜೊತೆಗೆ ಮಗನ ಆರೈಕೆ ಮಾಡಿದರು. ತೇಜಿಂದರ್ ಬೆಳೆದಂತೆ ಮನೆಯ ಪರಿಸ್ಥಿತಿ ಅರ್ಥ ಮಾಡಿಕೊಂಡು, ತಮ್ಮ ಶಿಕ್ಷಣವನ್ನು ಬಿಟ್ಟು, ಮನೆಯ ಖರ್ಚು ವೆಚ್ಚಗಳಿಗಾಗಿ ತಾನು ಒಂದು ಉದ್ಯೋಗ ಹುಡುಕಲು ಆರಂಭಿಸಿದರು.

ಕೆಲಸ ಹುಡುಕುವಾಗಲೇ ವರ್ಕೌಟ್ ಕಡೆ ಗಮನ ಹರಿಸಿದ ತೇಜಿಂದರ್ ಮೊದಲು ಸರ್ಕಾರಿ ಜಿಮ್ ಗೆ ಸೇರಿದರು. ಅನಂತರ ಅಲ್ಲಿಂದ ಅವರು ಒಂದು ಖಾಸಗಿ ಜಿಮ್ ಸೇರಿ ವರ್ಕೌಟ್ ಮಾಡಿದ ದೇಹ ಹುರಿಗೊಳಿಸಿದರು. ಆಗ ಅವರ ಕೋಚ್ ದಿನೇಶ್ 2016 ರಲ್ಲಿ ತೇಜಿಂದರ್ ಗೆ ಮಿಸ್ಟರ್ ದೆಹಲಿ ಸ್ಪರ್ಧೆಗೆ ಹೆಸರು ನೊಂದಾಯಿಸುವಂತೆ ಹೇಳಿದರು. ಅವರ ಮಾತಿನಂತೆ ಹೆಸರು ನೀಡಿದ ತೇಜಿಂದರ್ ಮಿಸ್ಟರ್ ದೆಹಲಿ ಟೈಟಲ್ ಗೆದ್ದರು, ಅದಾದ ನಂತರ 2018 ರಲ್ಲಿ ಸಹಾ ತೇಜಿಂದರ್ ಅವರು ಈ ಟೈಟಲ್ ಗೆದ್ದುಕೊಂಡರು ಎಲ್ಲರ ಗಮನವನ್ನು ಸೆಳೆದರು.

ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಲು ತೇಜಿಂದರ್ ಜಿಮ್ ಕೋಚ್ ಆಗಿ ಕೆಲಸ ಆರಂಭಿಸಿದರು. ಆದರೆ ದುರಾದೃಷ್ಟವಶಾತ್ ಕೊರೊನಾ ಲಾಕ್ ಡೌನ್ ನಿಂದ ಜಿಮ್ ಗಳು ಬಂದ್ ಆದವು. ಅದಾದ ಮೇಲೆ ಬಹಳ ಕಠಿಣ ಪರಿಸ್ಥಿತಿ ಎದುರಾಯಿತು. ಲಾಕ್ ಡೌನ್ ಮುಗಿಯುತ್ತಾ ಬಂದಾಗ ತೇಜಿಂದರ್ ತಮ್ಮ ಕೋಚ್ ನಿಂದ ಮೂವತ್ತು ಸಾವಿರ ಸಾಲ ಪಡೆದು, ಚಿಕಪ್ ಪಾಯಿಂಟ್ ಎನ್ನುವ ಚಿಕನ್ ಖಾದ್ಯಗಳನ್ನು ಮಾಡುವ ಅಂಗಡಿ ತೆರೆದರು. ತೇಜಿಂದರ್ ಅವರ ಚಿಕನ್ ವೆರೈಟಿಗಳು ಜನರಿಗೆ ಬಹಳ ಇಷ್ಟವಾಗಿದೆ. ತೇಜಿಂದರ್ ಈಗ ತಮ್ಮ ಸ್ವಂತ ಜೀವನ ಕಟ್ಟಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

Leave a Comment