HomeEntertainmentಹೊಸ ದಾಖಲೆಗಳನ್ನು ಬರೆದ ನಟ ಅನಿರುದ್ಧ್: ಹರಿದು ಬರುತ್ತಿದೆ ಅಪಾರವಾದ ಮೆಚ್ಚುಗೆಗಳು

ಹೊಸ ದಾಖಲೆಗಳನ್ನು ಬರೆದ ನಟ ಅನಿರುದ್ಧ್: ಹರಿದು ಬರುತ್ತಿದೆ ಅಪಾರವಾದ ಮೆಚ್ಚುಗೆಗಳು

ಕನ್ನಡ ಕಿರುತೆರೆಯ ಸೂಪರ್ ಹಿಟ್ ಧಾರಾವಾಹಿ ಜೊತೆ ಜೊತೆಯಲಿ ಯಲ್ಲಿ ಆರ್ಯವರ್ಧನ್ ಪಾತ್ರದ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟ ಅನಿರುದ್ಧ್ ಜತ್ಕರ್ ಅವರು ಇಂದು ಮನೆ ಮನೆ ಮಾತಾಗಿದ್ದಾರೆ. ಇದೀಗ ನಟ ಅನಿರುದ್ಧ್ ಅವರು ಒಂದು ಹೊಸ ಹಾಗೂ ಸಂತೋಷದ ವಿಷಯವೊಂದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ನಟ ಅನಿರುದ್ದ್ ಅವರು ತಮ್ಮ ಬಾಳೇ ಬಂಗಾರ ಡಾಕ್ಯುಮೆಂಟರಿ ಮೂಲಕ ಮಾಡಿರುವ ದಾಖಲೆಗಳ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಅನಿರುದ್ಧ್ ಅವರು ತಮ್ಮ ಪೋಸ್ಟ್ ನಲ್ಲಿ, ನಮಸ್ತೆ,
ನನ್ನ ಸಾಕ್ಷ್ಯಚಿತ್ರ ‘ಬಾಳೇ ಬಂಗಾರ’ದ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಕಲಾಂ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ದಾಖಲೆಗಳನ್ನು ಸ್ಥಾಪಿಸಿರುವೆನೆಂಬ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಅತ್ಯಂತ ಸಂತೋಷ ಮತ್ತು ಹೆಮ್ಮೆಯಾಗುತ್ತಿದೆ. ದಾಖಲೆ ಶೀರ್ಷಿಕೆ ಮತ್ತು ವರ್ಣನೆ , ಬದುಕಿರುವ ಮೇರು ನಟಿಯೊಬ್ಬರ ಕುರಿತಾದ ಅತ್ಯಂತ ದೀರ್ಘ ಕಾಲಾವಧಿಯ ಸಾಕ್ಷ್ಯಚಿತ್ರ.

ಭಾರತದ ಕರ್ನಾಟಕದಲ್ಲಿರುವ ಅನಿರುದ್ಧ ಹರ್ಷವರ್ಧನ ಜತ್ಕರರವರು (ಫೆಬ್ರವರಿ ೧೬,೧೯೭೪ ರಂದು ಜನನ) ಬದುಕಿರುವ ಭಾರತದ ಮೇರು ನಟಿಯ ಕುರಿತಾದ ಅತ್ಯಂತ ದೀರ್ಘ ಕಾಲಾವಧಿಯ ಸಾಕ್ಷ್ಯಚಿತ್ರ ‘ಬಾಳೇ ಬಂಗಾರ’ದ ಪರಿಕಲ್ಪನೆ, ಸಂಶೋಧನೆ, ಲೇಖನ, ನಿರೂಪಣೆ ಹಾಗೂ ನಿರ್ದೇಶನದ ದಾಖಲೆ ಸ್ಥಾಪಿಸಿದ್ದಾರೆ. ಕೀರ್ತಿ ಇನ್ನೋವೇಷನ್ಸ್ ನಿರ್ಮಾಣದ ಕನ್ನಡ ಭಾಷೆಯ ಆಂಗ್ಲ ಅಡಿಬರಹಗಳನ್ನು ಹೊಂದಿದ (೧೪೧.೪೯ ನಿಮಿಷಗಳ ಕಾಲದ) ಸಾಕ್ಷ್ಯಚಿತ್ರ ‘ಬಾಳೇ ಬಂಗಾರ’ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ‘ಡಾ. ಭಾರತಿ ವಿಷ್ಣುವರ್ಧನ್’ರವರ ಜೀವನವನ್ನು ಕಟ್ಟಿಕೊಡುತ್ತದೆ.

ಈ ಸಾಕ್ಷ್ಯಚಿತ್ರವನ್ನು ನೋಡಲು ನೀವು ಕಾತುರರಾಗಿದ್ದೀರಿ ಎಂದು ನನಗೆ ಗೊತ್ತು. ಅತಿ ಶೀಘ್ರದಲ್ಲೇ ನಿಮ್ಮ ನೆಚ್ಚಿನ ವೇದಿಕೆಗಳಲ್ಲಿ ಇದನ್ನು ತಾವು ನೋಡಬಹುದು… (ಈ ದಾಖಲೆಗಳೂ ಸೇರಿದಂತೆ, ಇದುವರೆಗೂ ನಾನು ಇಪ್ಪತ್ತು ದಾಖಲೆಗಳನ್ನು ಸ್ಥಾಪಿಸಿದ್ದೇನೆ) ಎನ್ನುವ ಮಾಹಿತಿಯನ್ನು ತಮ್ಮ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ. ಅವರ ಪೋಸ್ಟ್ ಗೆ ಅಭಿಮಾನಿಗಳು ಮೆಚ್ಚುಗೆಗಳನ್ನು ನೀಡುತ್ತಾ ಶುಭ ಹಾರೈಸುತ್ತಿದ್ದಾರೆ.

- Advertisment -