ಹೂವಿನ ಪಲ್ಲಕ್ಕಿಯಲ್ಲಿ ಅನು ಸಿರಿಮನೆಯನ್ನು ಕಲ್ಯಾಣ ಮಂಟಪಕ್ಕೆ ಹೊತ್ತು ನಡೆದ ನಿರ್ದೇಶಕ: ಅಭಿಮಾನಿಗಳಿಂದ ಹರಿದು ಬರುತ್ತಿದೆ ಮೆಚ್ಚುಗೆ
ಕನ್ನಡ ಕಿರುತೆರೆಯ ಲೋಕದಲ್ಲಿ ಜನಪ್ರಿಯ ಧಾರಾವಾಹಿಗಳ ಸಾಲಿನಲ್ಲಿ ತನ್ನದೇ ಆದ ಪ್ರತ್ಯೇಕತೆಯನ್ನು ಪಡೆದು, ಆರಂಭದಿಂದಲೇ ಕಿರುತೆರೆಯಲ್ಲಿ ಒಂದು ಸಂಚಲನವನ್ನು ಸೃಷ್ಟಿಸಿರುವ ಧಾರಾವಾಹಿ ಎಂದರೆ ಅದು ಜೊತೆ ಜೊತೆಯಲಿ. ಈ ಧಾರವಾಹಿ ಕಿರುತೆರೆಗೆ ಅಡಿಯಿಟ್ಟ ಕೂಡಲೇ ಟಿ ಆರ್ ಪಿ ಗಳಿಕೆಯಲ್ಲಿ ಒಂದು ಹೊಸ ಇತಿಹಾಸವನ್ನು ಬರೆಯಿತು. ಕಿರುತೆರೆಯ ಲೋಕದಲ್ಲಿ ಇದೊಂದ ಹೊಸ ಮೈಲಿಗಲ್ಲು ಎನಿಸಿತು. ಹೀಗೆ ಸಾಗಿದ ಧಾರಾವಾಹಿ ವರ್ಷಕ್ಕಿಂತಲೂ ಅಧಿಕ ಕಾಲ ನಂಬರ್ ಒನ್ ಸೀರಿಯಲ್ ಎನ್ನುವ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿತ್ತು. ಇನ್ನು ಇದೀಗ ಕಳೆದ ಎರಡು ವಾರಗಳಿಂದ ಆರ್ಯವರ್ಧನ್ ಹಾಗೂ ಅನು ಸಿರಿಮನೆ ಮದುವೆಯ ಸಂಭ್ರಮ ಮನೆ ಮಾಡಿದೆ. ಅದ್ದೂರಿ ಮದುವೆಯ ಸಂಭ್ರಮ ಕಿರುತೆರೆಯಲ್ಲಿ ಹಿಂದೆಂದೂ ನೋಡದ ದೃಶ್ಯ ವೈಭವಕ್ಕೆ ಇದು ಸಾಕ್ಷಿಯಾಗಿದೆ. ಕಿರುತೆರೆಯ ಪ್ರೇಕ್ಷಕರು ಹಾಗೂ ಸೀರಿಯಲ್ ಅಭಿಮಾನಿಗಳು ಈ ಅದ್ದೂರಿ ಮದುವೆಯ ದೃಶ್ಯಗಳನ್ನು ನೋಡಿ ಸೋಶಿಯಲ್ ಮೀಡಿಯಾಗಳಲ್ಲಿ ಅಪಾರ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಈ ವೇಳೆಯಲ್ಲಿ ಸೀರಿಯಲ್ ನಲ್ಲಿ ನಾಯಕಿಯಾಗಿ ಅನು ಸಿರಿಮನೆ ಪಾತ್ರದ ಮೂಲಕ ಮನೆ ಮಾತಾಗಿರುವ ನಟಿ ಮೇಘಾ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಶೇಷ ವೀಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅನು ಸಿರಿಮನೆ ಯನ್ನು ಹೂವಿನ ಪಲ್ಲಕ್ಕಿಯಲ್ಲಿ ಮದುವೆ ಮಂಟಪಕ್ಕೆ ಹೊತ್ತು ತರುವ ವಿಶೇಷ ದೃಶ್ಯದ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ವೀಡಿಯೋದಲ್ಲಿ ಸೀರಿಯಲ್ ನ ನಿರ್ದೇಶಕರಾದ ಆರೂರು ಜಗದೀಶ್ ಅವರು ತಮ್ಮ ಅಸಿಸ್ಟೆಂಟ್ ಗಳ ಜೊತೆಗೆ ಮೇಘಾ ಶೆಟ್ಟಿ ಅವರನ್ನು ಹೂವಿನ ಪಲ್ಲಕ್ಕಿ ಯಲ್ಲಿ ಹೊತ್ತು ತರುತ್ತಾ ದೃಶ್ಯದ ಬಗ್ಗೆ ನಿರ್ದೇಶನಗಳನ್ನು ನೀಡುತ್ತಿರುವುದನ್ನು ನಾವು ಗಮನಿಸಬಹುದಾಗಿದೆ. ಮೇಘಾ ಶೆಟ್ಟಿ ಅವರು ಶೇರ್ ಮಾಡಿದ ಈ ವೀಡಿಯೋ ನೋಡಿದ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಮೆಚ್ಚುಗೆ ಸೂಚಿಸುತ್ತಾ, ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.
ನೆಟ್ಟಿಗರು ಆರೂರು ಜಗದೀಶ್ ಅವರಿಗೆ, “ನಿಮ್ಮ ಸಾಧನೆ ನಮಗೆ ಹೆಮ್ಮೆ ಮೂಡಿಸಿದೆ. ವಧುವನ್ನು ನೀವೇ ಹೊತ್ತು ತರುವ ದೃಶ್ಯ ನೋಡಿದಾಗ ನಿಮ್ಮ ಸರಳತೆ ಎಂತಹದ್ದು ಎಂದು ನಮಗೆ ತಿಳಿಯುತ್ತಿದೆ” ಎಂದು ಹೇಳಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ “ಸೂಪರ್ ಅನು ಮದುಮಗಳಾಗಿ ಹೂವಿನ ಪಲ್ಲಕ್ಕಿಯಲ್ಲಿ ಸಂಭ್ರಮಿಸುತ್ತಾ ಇದು ನಮಗೆ ಸೀರಿಯಲ್ ಅನ್ನೊದಕ್ಕಿಂತ ನಿಜ ಅನ್ನೊ ಭಾವನೆ ಬರುತ್ತಿದೆ. ಜಗದೀಶ್ ಸರ್ ಸೂಪರ್” ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಇನ್ನೊಬ್ಬ ಅಭಿಮಾನಿಯು ಬಹಳ ಅಭಿಮಾನದಿಂದ, “ಪಲ್ಲಕಿ ಮೇಲೆ ಹೊತ್ತು ತಂದ್ರು ಮದುಮಗಳನ್ನ, ಇನ್ನು ಆರ್ಯ ಸರ್ ಕರೆದುಕೊಂಡು ಹೋಗುವದೆ ಬಾಕಿ ಇದೆ, ಹೀಗೆ ಇರಲಿ ನಿಮ್ಮ ಪ್ರೀತಿ” ಎಂದು ಶುಭ ಹಾರೈಸಿದ್ದಾರೆ. ಹೀಗೆ ನೂರಾರು ಜನ ಆರ್ಯವರ್ಧನ್ , ಅನು ಸಿರಿಮನೆ ಕಲ್ಯಾಣೋತ್ಸವದ ಬಗ್ಗೆ ಪ್ರೇಕ್ಷಕರು ಮೆಚ್ಚುಗೆಯನ್ನು ಹರಿಸಿದ್ದಾರೆ.
ಇನ್ನು ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಆರ್ಯ ಮತ್ತು ಅನು ಮದುವೆಯ ನಂತರ ಶೀಘ್ರದಲ್ಲೇ ಹೊಸ ಟ್ವಿಸ್ಟ್ ಬರಲಿದೆ, ಹೊಸ ಅಧ್ಯಾಯ ಆರಂಭವಾಗಲಿದೆ ಎನ್ನುವ ನಿರೀಕ್ಷೆಗಳು ಹೆಚ್ಚಾಗಿದ್ದು, ರಾಜನಂದಿನಿಯ ಪ್ರವೇಶ ಆಗಲಿದೆ ಎನ್ನುವ ಕುತೂಹಲವು ಜನರಲ್ಲಿ ಮೂಡಿದೆ. ಆರ್ಯವರ್ಧನ್ ಜೀವನದಲ್ಲಿ ಹಿಂದೆ ನಡೆದ ಘಟನೆಗಳು, ರಾಜ ನಂದಿನಿಯ ವಾಸ್ತವ ಎಲ್ಲವೂ ಕೂಡಾ ಪ್ರೇಕ್ಷಕರ ಮುಂದೆ ಬರಲಿದ್ದು, ರಾಜನಂದಿನಿ ಪಾತ್ರದಲ್ಲಿ ಯಾವ ನಟಿ ಜನರ ಮುಂದೆ ಬರಲಿದ್ದಾರೆ ಎನ್ನುವುದು ಸದ್ಯಕ್ಕೆ ಅತ್ಯಂತ ರೋಚಕ ಹಾಗೂ ಕುತೂಹಲಕ್ಕೆ ಕಾರಣವಾಗಿರುವ ವಿಷಯವಾಗಿದೆ.