ಹುಟ್ಟೂರಿಗಾಗಿ ಮಿಡಿದ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್, ಮಾಡಿದ ಮಾನವೀಯ ಕೆಲಸಕ್ಕೆ ಕೈ ಎತ್ತಿ ಮುಗಿದ ಜನ!!
ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಪ್ರಸ್ತುತ ಪ್ರತ್ಯೇಕವಾದ ಪರಿಚಯದ ಅಗತ್ಯವಿಲ್ಲ. ಏಕೆಂದರೆ ಅವರ ನಿರ್ದೇಶನದಲ್ಲಿ ಮೂಡಿ ಬಂದ ಕೆಜಿಎಫ್, ಕೆಜಿಎಫ್-2 ಸಿನಿಮಾಗಳು ಮಾಡಿದ ಸದ್ದು ಏನೆಂದು ಎಲ್ಲರಿಗೂ ತಿಳಿದೇ ಇದೆ. ಭಾರತದಾದ್ಯಂತ ಸಂಚಲನ ಸೃಷ್ಟಿಸಿದ ಕೆಜಿಎಫ್-2 ಸಿನಿಮಾದ ನಂತರ ಪ್ರಶಾಂತ್ ನೀಲ್ ಅವರ ಜನಪ್ರಿಯತೆ ಇನ್ನೂ ಹೆಚ್ಚಿದೆ. ದೇಶದ ಸ್ಟಾರ್ ಡೈರೆಕ್ಟರ್ ಗಳಲ್ಲಿ ಒಬ್ಬರಾಗಿದ್ದಾರೆ. ಪ್ರಶಾಂತ್ ನೀಲ್ ಅವರಿಗೆ ಬೇಡಿಕೆ ಸಹಾ ಹೆಚ್ಚಿದ್ದು, ಸದ್ಯಕ್ಕೆ ಅವರು ಟಾಲಿವುಡ್ ನಲ್ಲಿ ಸಿನಿಮಾಗಳ ನಿರ್ದೇಶನದಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ಟಾಲಿವುಡ್ ನ ಸ್ಟಾರ್ ನಟರ ಸಿನಿಮಾಗಳನ್ನು ಮಾಡುವತ್ತ ಅವರು ತಮ್ಮ ಗಮನವನ್ನು ಹರಿಸಿದ್ದಾರೆ.
ಇದೀಗ ಸಿನಿಮಾಗಳ ನಡುವೆಯೇ ಪ್ರಶಾಂತ್ ನೀಲ್ ಅವರು ಮಾಡಿರುವಂತಹ ಒಂದು ಮಾದರಿ ಕಾರ್ಯದಿಂದ ಜನರು ಅವರನ್ನು ಹೊಗಳುತ್ತಿದ್ದಾರೆ. ಹೌದು, ಪ್ರಶಾಂತ್ ನೀಲ್ ಅವರು ತಮ್ಮ ಹುಟ್ಟೂರಿಗಾಗಿ ಒಂದು ಮಹತ್ವದ ಕಾರ್ಯವನ್ನು ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಪ್ರಶಾಂತ್ ನೀಲ್ ಅವರು ಜನಿಸಿದ್ದು ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ನೀಲಕಂಠ ಪುರಂ ನಲ್ಲಿ ಎನ್ನಲಾಗಿದ್ದು, ಅವರ ಪೂರ್ಣ ಹೆಸರು ಸಹಾ ಪ್ರಶಾಂತ್ ನೀಲಕಂಠಪುರಂ ಆಗಿದ್ದು, ಅವರು ಅದನ್ನು ಬದಲಾವಣೆ ಮಾಡಿಕೊಂಡು ಪ್ರಶಾಂತ್ ನೀಲ್ ಆಗಿದ್ದಾರೆ.
ಇದೀಗ ಅವರು ತಮ್ಮ ಹುಟ್ಟೂರಾದ ನೀಲಕಂಠ ಪುರಂನ ಕಣ್ಣಿನ ಆಸ್ಪತ್ರೆಗೆ ತಮ್ಮ ತಂದೆಯ 75 ನೇ ಜನ್ಮದಿನದ ನೆನಪಿನಲ್ಲಿ 50 ಲಕ್ಷ ರೂ.ಗಳ ದೇಣಿಗೆಯನ್ನು ನೀಡಿದ್ದು, ಈ ವಿಚಾರವನ್ನು ಅವರ ಚಿಕ್ಕಪ್ಪ, ಆಂಧ್ರಪ್ರದೇಶದ ಪ್ರದೇಶ ಕಾಂಗ್ರೆಸ್ ನ ಮಾಜಿ ಅಧ್ಯಕ್ಣ, ಮಾಜಿ ಸಚಿವ ಡಾ. ರಘುವೀರ ರೆಡ್ಡಿ ಟ್ವೀಟ್ ಮಾಡಿ ತಿಳಿಸಿದ್ದು, ತಮ್ಮನ ಮಗ ಮಾಡಿರುವ ಈ ಕೆಲಸದಿಂದ ನನಗೆ ಮತ್ತು ಗ್ರಾಮಸ್ಥರಿಗೆ ಹೆಮ್ಮೆ ಮತ್ತು ಖುಷಿಯನ್ನು ನೀಡಿದೆ ಎಂದು ಟ್ವೀಟ್ ಮಾಡಿದ್ದಾರೆ. ಪ್ರಶಾಂತ್ ನೀಲ್ ಅವರ ಈ ಮಾನವೀಯ ಕಾರ್ಯ ಕಂಡು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸಂಖ್ಯೆಯಲ್ಲಿ ಮೆಚ್ಚುಗೆ ಹರಿದು ಬರುತ್ತಿದೆ.