ಹಿಂದಿ ಕಿರುತೆರೆಯಲ್ಲಿ ಹೆಡೆ ಬಿಚ್ಚಿ ಬುಸುಗುಟ್ಟಲು ಕನ್ನಡದ ನಾಗಿಣಿಯ ಪ್ರವೇಶ
ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ಸೂಪರ್ ನ್ಯಾಚುರಲ್ ಫ್ಯಾಂಟಸಿ ಕಥಾನಕವನ್ನು ಒಳಗೊಂಡಿರುವ ನಾಗಿಣಿ ಟು ಧಾರಾವಾಹಿ ಕಿರುತೆರೆಯ ಪ್ರೇಕ್ಷಕರ ಅಪಾರವಾದ ಮೆಚ್ಚುಗೆಯನ್ನು ಪಡೆದುಕೊಂಡು ಯಶಸ್ಸಿನ ನಾಗಲೋಟ ವನ್ನು ಮಾಡುತ್ತಿದೆ. ಕಿರುತೆರೆಯಲ್ಲಿ ಪ್ರಸಾರವಾಗುವ ನಾಗಿಣಿ 2 ಧಾರಾವಾಹಿಯನ್ನು ನೋಡುವ ಒಂದು ಪ್ರತ್ಯೇಕ ಪ್ರೇಕ್ಷಕರ ವರ್ಗವೇ ಹುಟ್ಟಿಕೊಂಡಿದೆ. ಕನ್ನಡ ಕಿರುತೆರೆಯಲ್ಲಿ ಇಷ್ಟೊಂದು ಹೆಸರು ಪಡೆದುಕೊಂಡಿರುವ ನಾಗಿಣಿ ಧಾರಾವಾಹಿ ಕಡೆಯಿಂದ ಈಗ ಮತ್ತೊಂದು ಸಂತೋಷದ ಸುದ್ದಿ ಹೊರಬಂದಿದೆ.
ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲಿ ಕನ್ನಡದ ಕೆಲವು ಧಾರಾವಾಹಿಗಳು ಪ್ರಸಾರವನ್ನು ನಿಲ್ಲಿಸಿದ್ದ ಹಿನ್ನೆಲೆಯಲ್ಲಿ ಬೇರೆ ಭಾಷೆಯ ಧಾರಾವಾಹಿಗಳು ಡಬ್ಬಿಂಗ್ ಮೂಲಕ ಕನ್ನಡ ಕಿರುತೆರೆಯನ್ನು ಪ್ರವೇಶ ಮಾಡಿದ್ದವು. ಡಬ್ಬಿಂಗ್ ಧಾರಾವಾಹಿಗಳು ಜನರ ಮೆಚ್ಚುಗೆಯನ್ನು ಸಹಾ ಪಡೆದವು. ಆದರೆ ನಾಗಿಣಿ 2 ಧಾರಾವಾಹಿ ಹಿಂದಿಯಲ್ಲಿ ಪ್ರಸಾರವಾಗಲು ಸಜ್ಜಾಗಿದೆ. ಹಿಂದಿಯ ಚಾನೆಲ್ಲೊಂದರಲ್ಲಿ ಕನ್ನಡದ ನಾಗಿಣಿ ಟು ಧಾರಾವಾಹಿ ಹಿಂದಿಯಲ್ಲಿ ಪ್ರಸಾರವಾಗಲಿದೆ.
ಖಾಸಗಿ ವಾಹಿನಿಯು ನಾಗಿಣಿ ಟು ಧಾರಾವಾಹಿಯ ಹಿಂದಿ ಪ್ರೋಮೋವನ್ನು ಈಗಾಗಲೇ ಬಿಡುಗಡೆ ಮಾಡಿದೆ ಎಂದು ತಿಳಿದುಬಂದಿದೆ. ಅಲ್ಲದೆ ವಾಹಿನಿಯು ಸಾಮಾಜಿಕ ಜಾಲತಾಣಗಳ ವಿವಿಧ ಪ್ಲಾಟ್ ಫಾರಂಗಳಲ್ಲಿ ಕನ್ನಡ ನಾಗಿಣಿ ಟು ಧಾರಾವಾಹಿಯ ಹಿಂದಿ ಡಬ್ಬಿಂಗ್ ಪ್ರೋಮೋವನ್ನು ಶೇರ್ ಮಾಡಿ, ಜನರ ಗಮನವನ್ನು ಸೆಳೆಯುವ ಪ್ರಯತ್ನವನ್ನು ಮಾಡಿದೆ. ನಾಗಿಣಿ ಟು ಹಿಂದಿಗೆ ಡಬ್ಬಿಂಗ್ ಆಗಿರುವುದು ಸೀರಿಯಲ್ ತಂಡಕ್ಕೆ ಬಹಳ ಖುಷಿಯನ್ನು ನೀಡಿದೆ.
ನಾಗಿಣಿ ಟು ಧಾರಾವಾಹಿ ಹಿಂದಿ ಭಾಷೆಗೆ ಡಬ್ ಆಗಿರುವ ವಿಷಯ ತಿಳಿದು ಅಭಿಮಾನಿಗಳು ಬಹಳ ಖುಷಿ ಪಡುತ್ತಿದ್ದಾರೆ. ತಾವು ಕೂಡಾ ಪ್ರೋಮೋದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ತನ್ನ ದೃಶ್ಯ ವೈಭವ, ಅದ್ಭುತವಾದ ಗ್ರಾಫಿಕ್ಸ್ ಹಾಗೂ ವಿಶಿಷ್ಟವಾದ ನಿರೂಪಣೆಯ ಮೂಲಕ ನಾಗಿಣಿ ಟು ಅಪಾರ ಪ್ರೇಕ್ಷಕಾದರಣೆಯನ್ನು ಪಡೆಯುತ್ತಿದೆ.
ನಾಗಲೋಕದಿಂದ ಸೇಡಿನ ಜ್ವಾಲೆಯನ್ನು ಹೊತ್ತು ಬಂದ ನಾಗಿಣಿಯ ಪಾತ್ರದಲ್ಲಿ ನಮ್ರತಾ ಗೌಡ ಅವರು ಮಿಂಚುತ್ತಿದ್ದು, ಆರಂಭದಲ್ಲಿ ಆದಿಶೇಷನ ಪಾತ್ರದಲ್ಲಿ ಜಯರಾಮ್ ಕಾರ್ತಿಕ್ ಅವರು ಕಾಣಿಸಿಕೊಂಡಿದ್ದರು. ಕನ್ನಡದಲ್ಲಿ ಇಷ್ಟೊಂದು ಹೆಸರನ್ನು ಮಾಡಿರುವ ಧಾರಾವಾಹಿ ಹಿಂದಿ ಭಾಷೆಯಲ್ಲಿ ಯಾವ ಮೋಡಿಯನ್ನು ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.