ಜೀವನ ನಿರ್ವಹಣೆಗೆ ಶ್ರಮವಹಿಸಿ ದುಡಿಯುವ ಯಾವುದೇ ಕೆಲಸವಾಗಲೀ ಅದರಲ್ಲಿ ಚಿಕ್ಕದು ಅಥವಾ ದೊಡ್ಡದು ಎನ್ನುವ ಭೇದ ಇರುವುದಿಲ್ಲ. ಪ್ರತಿಯೊಂದು ಕೆಲಸಕ್ಕೂ ಕೂಡಾ ತನ್ನದೇ ಆದ ಗೌರವ ಇರುತ್ತದೆ. ಸಾಮರ್ಥ್ಯಕ್ಕೆ ಶಿಕ್ಷಣದ ಅವಶ್ಯಕತೆ ಇಲ್ಲ ಎನ್ನುವ ಮಾತೊಂದು ಇದೆ. ಈ ಮಾತಿಗೆ ಜೀವಂತ ಉದಾಹರಣೆಯಾಗಿದ್ದಾರೆ ಬನಸ್ಕಾಂಟ ಜಿಲ್ಲೆಯ ಅಶಿಕ್ಷಿತ ಆದರೆ ಶ್ರಮಜೀವಿ ಮಹಿಳೆಯಾಗಿರುವ ನವಲ್ ಬೇನ್ ಅವರು. 2020ರಲ್ಲಿ ಎದುರಾದ ಸಂಕಷ್ಟದ ಸಮಯದಲ್ಲಿ ಜನರ ಬಳಿ ಯಾವುದೇ ವ್ಯಾಪಾರ-ವ್ಯವಹಾರ ಇಲ್ಲದೇ ಇರುವಾಗ ಈ ಮಹಿಳೆ ಒಂದು ದಾಖಲೆಯನ್ನೇ ಮಾಡಿದ್ದಾರೆ.
62 ವರ್ಷ ವಯಸ್ಸಿನ ನವಲ್ ಬೇನ್ ತಮ್ಮ ಸ್ವಶಕ್ತಿಯಿಂದ ಪಶುಸಂಗೋಪನೆ ಮಾಡುತ್ತಾ ಹಾಲು ಉತ್ಪಾದನೆಯಲ್ಲಿ ತೊಡಗಿಕೊಂಡಿದ್ದಾರೆ. 2020 ರಲ್ಲಿ ಇವರು ಮಾಡಿರುವ ಹಾಲಿನ ವ್ಯಾಪಾರ ಅಚ್ಚರಿಯನ್ನು ಮೂಡಿಸುತ್ತದೆ. ಹೌದು 2020 ರಲ್ಲಿ ಇವರು ಬರೋಬ್ಬರಿ 1 ಕೋಟಿ 40 ಲಕ್ಷ ರೂಪಾಯಿಗಳ ಹಾಲನ್ನು ಮಾರಾಟ ಮಾಡುವ ಮೂಲಕ ಹೊಸದೊಂದು ದಾಖಲೆಯನ್ನು ಬರೆದಿದ್ದಾರೆ. ನವಲ್ ಬೇನ್ ಅವರು ಗುಜರಾತಿನ ಬನಸ್ಕಾಂಟ ಜಿಲ್ಲೆಯ ನಗಾನಾ ಗ್ರಾಮದ ನಿವಾಸಿಯಾಗಿದ್ದಾರೆ.
ಇವರು ಪಶು ಸಂಗೋಪನೆಯನ್ನು ಆರಂಭಮಾಡಿದ್ದು ಸಣ್ಣಮಟ್ಟದಲ್ಲಿ. ಆದರೆ ದಿನ ಕಳೆದಂತೆ ಅದು ಬೆಳೆಯುತ್ತಾ ಹೋಗಿದ್ದು, ಪ್ರಸ್ತುತ ನವಲ್ ಬೇನ್ ಅವರ ಬಳಿ 80 ಎಮ್ಮೆಗಳು ಹಾಗೂ 45 ಹಸುಗಳ ಇದ್ದು, ದಿನವೊಂದಕ್ಕೆ ಸಾವಿರ ಲೀಟರ್ ಹಾಲನ್ನು ಉತ್ಪಾದನೆ ಮಾಡಲಾಗುತ್ತದೆ. ಈ ಹಾಲಿನ ವ್ಯಾಪಾರದ ಮೂಲಕ ನವಲ್ ಬೇನ್ ಅವರು ಪ್ರತಿ ತಿಂಗಳಿಗೆ 6 ಲಕ್ಷ 50 ಸಾವಿರ ರೂಪಾಯಿಗಳನ್ನು ಗಳಿಸುತ್ತಾರೆ.
ಇವರು ತಮ್ಮ ಗ್ರಾಮದಲ್ಲಿ ಸ್ವಂತ ವಾದ ಡೈರಿಯನ್ನು ನಡೆಸುತ್ತಾರೆ. ಈ ಡೈರಿ ಮೂಲಕ ಗ್ರಾಮದ 11 ಜನರಿಗೆ ಉದ್ಯೋಗ ಒದಗಿಸಿದ್ದಾರೆ. ನವಲ್ ಬೇನ್ ಅವರಿಗೆ ನಾಲ್ಕು ಜನ ಮಕ್ಕಳಿದ್ದು, ಅವರು ನಗರದಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಅವರು ತಮ್ಮ ತಾಯಿಯ ಜೊತೆಗೆ ಡೈರಿಯಲ್ಲಿ ಹಾಗೂ ಪಶುಸಂಗೋಪನೆ ಕೆಲಸದಲ್ಲಿ ಕೈಜೋಡಿಸುತ್ತಾರೆ. 2019ರಲ್ಲಿ ನವಲ್ ಬೇನ್ ಅವರು 87.95 ಲಕ್ಷ ರೂಪಾಯಿಗಳ ಹಾಲನ್ನು ಮಾರಾಟ ಮಾಡಿದ್ದಾರೆ.
ನವಲ್ ಬೇನ್ ಅವರು ಶಿಕ್ಷಣವನ್ನು ಪಡೆಯದೇ ಇರಬಹುದು ಆದರೆ ಅವರು ತನ್ನನ್ನು ತಾನು ಸ್ವಾವಲಂಬಿಯನ್ನಾಗಿ ರೂಪಿಸಿಕೊಂಡಿದ್ದಾರೆ. ತಮ್ಮ ಪರಿಶ್ರಮದಿಂದ ಒಂದು ಯಶಸ್ವಿ ಹಾಲಿನ ವ್ಯವಹಾರವನ್ನು ಕಟ್ಟಿ ನಿಲ್ಲಿಸಿದ್ದಾರೆ. ಅವರ ಈ ಪ್ರತಿಭೆ ಹಾಗೂ ಸಾಧನೆಗೆ ಮೆಚ್ಚಿ ಅವರಿಗೆ ಎರಡು ಬಾರಿ ಲಕ್ಷ್ಮೀ ಪುರಸ್ಕಾರವನ್ನು ಮತ್ತು ಮೂರು ಬಾರಿ ಪಾದರಿ ಪುರಸ್ಕಾರವನ್ನು ನೀಡಿ ಸನ್ಮಾನಿಸಲಾಗಿದೆ.