ಹಾಡು ನಿಲ್ಲಿಸಿದ ಗಾನ ಕೋಗಿಲೆ: ದಿಗ್ಗಜ ಗಾಯಕಿ ಲತಾ ಮಂಗೇಶ್ಕರ್ ಇನ್ನಿಲ್ಲ

0
142

ಗಾನ ಕೋಗಿಲೆ, ಭಾರತೀಯ ಸಿನಿಮಾ ರಂಗದ ದಿಗ್ಗಜ ಗಾಯಕಿ, ತನ್ನ ಸಿರಿಕಂಠದಿಂದ ದಶಕಗಳ ಕಾಲ ಸಿನಿ ಪ್ರೇಮಿಗಳ ಹೃದಯಕ್ಕೆ ಲಗ್ಗೆ ಇಟ್ಟು ಅಸಂಖ್ಯಾತ ಅಭಿಮಾನಿಗಳನ್ನು ವಿಶ್ವದಾದ್ಯಂತ ಪಡೆದಿದ್ದ ಗಾಯಕಿ ಲತಾ ಮಂಗೇಶ್ಕರ್ ಅವರು ಇನ್ನಿಲ್ಲ. ಹೌದು ಅದ್ಭುತ ಸಿರಿ ಕಂಠದ ಒಡತಿ ಲತಾ ಮಂಗೇಶ್ಕರ್ ಅವರು ಇಂದು ಮುಂಬೈನ ಬ್ರಿಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ಅವರಿಗೆ ಕೊರೊನಾ ಸೋಂಕು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆರೋಗ್ಯ ಸ್ಥಿರವಾಗಿದೆ ಎನ್ನುವ ಸುದ್ದಿಗಳನ್ನು ನೀಡಲಾಗಿತ್ತು.

ಕೊರೊನಾ ದಿಂದ ನ್ಯುಮೋನಿಯಾ ಆಗಿ ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ನಿನ್ನೆ ಆಸ್ಪತ್ರೆಯ ವೈದ್ಯರು ಮಾಹಿತಿಯನ್ನು ನೀಡಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಹಿರಿಯ ಗಾಯಕಿ ಶಾಶ್ವತವಾಗಿ ಎಲ್ಲರನ್ನೂ ಅಗಲಿ ಹೋಗಿದ್ದಾರೆ. ಭಾರತದ ಗಾನ ಕೋಗಿಲೆ ಎಂದೇ ಹೆಸರಾಗಿದ್ದ ಲತಾ ಮಂಗೇಶ್ಕರ್ ಅವರು ತಮ್ಮ ಹದಿಮೂರನೇ ವಯಸ್ಸಿನಲ್ಲೇ ಹಾಡಲು ಆರಂಭಿಸಿದ್ದರು. ಬಾಲಿವುಡ್ ನಲ್ಲಿ ಇವರ ಕಂಠ ಸಿರಿಯಲ್ಲಿ ಅಸಂಖ್ಯಾತ ಮಧುರ ಹಾಡುಗಳು ಅರಳಿದವು.

36 ಕ್ಕೂ ಹೆಚ್ಚು ಭಾಷೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಈ ಗಾಯಕಿಯ ಕಂಠ ಮಾಧುರ್ಯಕ್ಕೆ ಮನ ಸೋತವರೇ ಇಲ್ಲ. ಇಂದಿಗೂ ಅವರ ಹಾಡುಗಳ ಸುಧೆಯು ಸಂಗೀತ ಪ್ರಿಯರ ಗಮನವನ್ನು ಹಿಡಿದಿಡುವ ಸಾಮರ್ಥ್ಯವನ್ನು ಪಡೆದಿದೆ. ಲತಾ ಮಂಗೇಶ್ಕರ್ ಅವರನ್ನು ಬಾಲಿವುಡ್ ಮಂದಿ ಲತಾ ದೀದಿ, ಲತಾ ಜೀ ಎಂದೇ ಕರೆದು ಗೌರವಿಸುತ್ತಿದ್ದರು. ಲತಾ ದೀದಿ ಅವರ ಅಗಲಿಕೆ ಸಂಗೀತ ಲೋಕಕ್ಕೆ ನೋವನ್ನು ಉಳಿಸಿದೆ.

LEAVE A REPLY

Please enter your comment!
Please enter your name here