ಪ್ಲಾಸ್ಟಿಕ್ ಎಂಬುದು ನಮ್ಮ ನಿತ್ಯ ಜೀವನದಲ್ಲಿ ಒಂದು ಭಾಗವಾಗಿ ಹೋಗಿದೆ ಎಂದರೆ ಅದು ಅತಿಶಯೋಕ್ತಿಯೇನಲ್ಲ. ಪ್ಲಾಸ್ಟಿಕ್ ಬಳಕೆಯಿಂದ ಆಗುವ ತೊಂದರೆಗಳ ಬಗ್ಗೆ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ವರ್ಷಗಳಿಂದಲೂ ಮಾಡಲಾಗುತ್ತಿದೆ. ಇನ್ನೂ ಕೆಲವು ಕಡೆಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಈಗಾಗಲೇ ನಿಷೇಧ ಮಾಡಲಾಗಿದೆ. ಇದರ ಹೊರತಾಗಿಯೂ ಜನರು ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿಲ್ಲ. ಮನುಷ್ಯರು ಬಳಸಿ ಬಿಸಾಡಿದ ಪ್ಲಾಸ್ಟಿಕ್ ತ್ಯಾಜ್ಯಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಪ್ಲಾಸ್ಟಿಕ್ ತ್ಯಾಜ್ಯ ಗಳಿಂದ ದಿನದಿಂದ ದಿನಕ್ಕೆ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ.
ಮನುಷ್ಯನಿಂದ ಆಗುವ ಪ್ಲಾಸ್ಟಿಕ್ ಬಳಕೆ, ನಿರ್ಮಾಣ ಆಗುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯಗಳು ಮೂಕಪ್ರಾಣಿಗಳ ಜೀವಕ್ಕೆ ಸಂಕಷ್ಟವನ್ನು ತಂದೊಡ್ಡಿದೆ. ದಿನನಿತ್ಯ ಇಂತಹ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಿಂದು ಅದೆಷ್ಟೋ ಪ್ರಾಣಿಗಳು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿವೆ. ಪ್ರವಾಸಿ ತಾಣಗಳಿಗೆ ಹೋದಂತಹ ಸಂದರ್ಭದಲ್ಲಿ ಸಹಾ ಜನರು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ನದಿಗಳು ಹಾಗೂ ಸರೋವರಗಳಲ್ಲಿ ಎಸೆದು ಬರುತ್ತಾರೆ. ಇದರಿಂದಾಗಿ ಜಲ ಜೀವಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ಲಾಸ್ಟಿಕ್ ತ್ಯಾಜ್ಯದಿಂದ ನದಿ, ಸರೋವರಗಳ ನೀರು ಕಲುಷಿತವಾಗುವುದು ಮಾತ್ರವೇ ಅಲ್ಲದೇ ಜಲಚರಗಳ ಪ್ರಾಣಕ್ಕಿದು ಕುತ್ತಾಗಿದೆ.
ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಹಂಸವೊಂದು ಮಾಡುತ್ತಿರುವ ಕೆಲಸವನ್ನು ನೋಡಿದಾಗ ನೀವು ಕೂಡಾ ಮೆಚ್ಚುಗೆಯನ್ನು ನೀಡದೇ ಇರಲಾರಿರಿ. ಅಲ್ಲದೇ ಹಂಸ ಮಾಡುವ ಕೆಲಸವನ್ನು ನೋಡಿದ ಮೇಲಾದರೂ ನದಿ ಹಾಗೂ ಸರೋವರಗಳಿಗೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆಯುವ ಜನರಿಗೆ ಬುದ್ಧಿ ಬಂದರೆ ಅದಕ್ಕಿಂತ ಸಾರ್ಥಕತೆಯ ಬೇರೊಂದು ಇಲ್ಲ ಎಂದು ಹೇಳಬಹುದು.
ವೈರಲ್ ಆಗಿರುವ ವಿಡಿಯೋದಲ್ಲಿ ಹಂಸವು ನೀರಿನಲ್ಲಿ ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತನ್ನ ಕೊಕ್ಕಿನಿಂದ ಹೆಕ್ಕಿ ತೆಗೆದು ಹೊರ ಹಾಕುವುದನ್ನು ನಾವು ನೋಡಬಹುದಾಗಿದೆ. ನೀರಿನಲ್ಲಿ ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯ ಗಳಿಂದ ತನ್ನ ಮರಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದೆಂದು ಕಾಳಜಿಯನ್ನು ವಹಿಸುತ್ತಾ, ಹಂಸವು ತನ್ನ ಕೊಕ್ಕಿನಿಂದ ತ್ಯಾಜ್ಯವನ್ನು ಹೆಕ್ಕಿ ತೆಗೆದಿದೆ. ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಅವರು ವಿಡಿಯೋ ಶೇರ್ ಮಾಡಿಕೊಂಡು, “ಹಂಸವು ತನ್ನ ಮರಿಗಳಿಗಾಗಿ ನೀರಿನಿಂದ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೊರಹಾಕುತ್ತಿದೆ. ನಾವು ಯಾವಾಗ ಇದನ್ನು ಅರ್ಥ ಮಾಡಿಕೊಳ್ಳಲಿದ್ದೇವೆ” ಎಂದು ಬರೆದುಕೊಂಡಿದ್ದಾರೆ. ಈಗಾಗಲೇ ಈ ವಿಡಿಯೋವನ್ನು ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ನೆಟ್ಟಿಗರು ವೀಕ್ಷಣೆ ಮಾಡಿದ್ದು, ಸಾವಿರಾರು ಜನರು ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಏಳು ಸಾವಿರಕ್ಕಿಂತಲೂ ಅಧಿಕ ಮಂದಿ ಲೈಕ್ ನೀಡಿದ್ದು, ಕಾಮೆಂಟ್ ಗಳ ಮೂಲಕ ಪ್ರತಿಕ್ರಿಯೆ ನೀಡಿದವರು ಹಂಸ ಮಾಡುತ್ತಿರುವ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಇದೇ ಸಮಯದಲ್ಲಿ, ಮನುಷ್ಯರು ಮಾಡುವ ತಪ್ಪಿನಿಂದ ಅಮಾಯಕ ಪ್ರಾಣಿಗಳಿಗೆ ಹೇಗೆ ತೊಂದರೆಯಾಗುತ್ತಿದೆ ಎನ್ನುವುದನ್ನು ಈ ವಿಡಿಯೋ ನೋಡಿದಾಗ ತಿಳಿಯುತ್ತದೆ ಇನ್ನಾದರೂ ಜನರಲ್ಲಿ ಬದಲಾವಣೆ ಎನ್ನುವುದು ಮೂಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಪ್ರಾಣಿ-ಪಕ್ಷಿಗಳಿಗೆ ಇರುವ ಬುದ್ಧಿ ಕೂಡಾ ಮನುಷ್ಯರಿಗೆ ಇಲ್ಲವಾಗಿದೆ. ಇದು ತಿದ್ದಿಕೊಳ್ಳುವ ಸಮಯ, ಇನ್ನಾದರೂ ಬದಲಾವಣೆ ಮೂಡಬೇಕು ಎನ್ನುವ ಆಶಯವನ್ನು ವ್ಯಕ್ತಪಡಿಸಿದ್ದಾರೆ.