ದೇಶದ ಸಿನಿಮಾ ರಂಗದಲ್ಲಿ ಮಹತ್ವದ ಬದಲಾವಣೆಗಳು ಸ್ಪಷ್ಟವಾಗಿ ಕಾಣುತ್ತಿದೆ. ಭಾರತೀಯ ಸಿನಿಮಾ ರಂಗ ಎಂದರೆ ಬಾಲಿವುಡ್ ಎನ್ನುವ ದಿನಗಳು ಮರೆಯಾಗಿದೆ. ಇಡೀ ದೇಶ ಮಾತ್ರವೇ ಅಲ್ಲದೇ ವಿಶ್ವ ಕೂಡಾ ಇಂದು ದಕ್ಷಿಣ ಭಾರತದ ಸಿನಿಮಾ ರಂಗದ ಕಡೆ ನೋಡುವಂತಹ ಅದ್ದೂರಿ, ಸೂಪರ್ ಹಿಟ್ ಸಿನಿಮಾಗಳು ಇಲ್ಲಿ ನಿರ್ಮಾಣ ಆಗುತ್ತಿದೆ. ಮತ್ತೊಂದು ಹೇಳಲೇಬೇಕಾದ ಮುಖ್ಯವಾದ ವಿಷಯವೇನೆಂದರೆ ದಕ್ಷಿಣದ ಸಿನಿಮಾಗಳ ಅಬ್ಬರಕ್ಕೆ ಬಾಲಿವುಡ್ ಸಿನಿಮಾಗಳು ಧೂಳೀಪಟವಾಗತೊಡಗಿದೆ.
ದಕ್ಷಿಣ ಸಿನಿಮಾಗಳ ಮುಂದೆ ಬಾಲಿವುಡ್ ಸಿನಿಮಾಗಳು ಸೋಲುತ್ತಿರುವ ಸತ್ಯವನ್ನು ಬಾಲಿವುಡ್ ಮಂದಿಯೂ ಒಪ್ಪುತ್ತಿದ್ದಾರೆ. ಅದಕ್ಕೆ ಪೂರಕ ಎನ್ನುವ ಹಾಗೆ ಇತ್ತೀಚಿನ ದಕ್ಷಿಣದ ಸಿನಿಮಾಗಳ ಮುಂದೆ ಬಾಲಿವುಡ್ ನ ಬಹುನಿರೀಕ್ಷಿತ ಸಿನಿಮಾಗಳ ಸೋಲು ಸಾಕ್ಷಿಯಾಗಿದೆ. ಆದರೆ ಇವೆಲ್ಲವುಗಳ ಹೊರತಾಗಿಯೂ ಕೂಡಾ ಇತ್ತೀಚಿಗೆ ತಮ್ಮ ಸಿನಿಮಾ ಪ್ರಮೋಷನ್ ವೇಳೆಯಲ್ಲಿ ಬಾಲಿವುಡ್ ನಟ ಜಾನ್ ಅಬ್ರಹಾಂ ಮಾತ್ರ ದಕ್ಷಿಣ ಸಿನಿಮಾಗಳ ಕುರಿತು ಆಡಿದ ಮಾತುಗಳು ಅವರಿಗೆ ಇಲ್ಲಿನ ಸಿನಿಮಾಗಳ ಕುರಿತು ಇರುವ ಅನಾಸಕ್ತಿಯನ್ನು ಪ್ರದರ್ಶಿಸಿತ್ತು.
ಏಪ್ರಿಲ್ 1 ರಂದು ಜಾನ್ ಅಬ್ರಹಾಂ ನಟನೆಯ ಅಟ್ಯಾಕ್ ಸಿನಿಮಾ ತೆರೆ ಕಂಡಿದೆ. ಈ ಸಿನಿಮಾದ ಪ್ರಚಾರದ ವೇಳೆ ಜಾನ್ ತಾನು ತೆಲುಗು ಅಥವಾ ಯಾವುದೇ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದಿದ್ದರು. ತಾನು ಹಿಂದಿ ಸಿನಿಮಾ ಹೀರೋ, ಪ್ರಾದೇಶಿಕ ಭಾಷೆಯಲ್ಲಿ ಸೆಕೆಂಡ್ ಹೀರೋ ಪಾತ್ರವನ್ನು ತಾನು ಮಾಡೋದಿಲ್ಲ, ಬ್ಯುಸ್ನೆಸ್ ಗಾಗಿ ತಾನು ತೆಲುಗು ಅಥವಾ ಇನ್ನಾವುದೇ ಪ್ರಾದೇಶಿಕ ಭಾಷೆಯ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದಿದ್ದರು.
ಜಾನ್ ಅಂದು ಹೇಳಿದ ಮಾತಿಗೆ ಅನೇಕರು ಅಸಮಾಧಾನ ಹೊರಹಾಕಿದ್ದರು. ಈಗ ತ್ರಿಬಲ್ ಆರ್ ಸಿನಿಮಾದ ಅಬ್ಬರಕ್ಕೆ ಜಾನ್ ನಟನೆಯ ಅಟ್ಯಾಕ್ ಸಿನಿಮಾ ಧೂಳೀಪಟವಾಗಿದೆ. ಭಾರೀ ನಿರೀಕ್ಷೆ ಇದ್ದ ನಟನಿಗೆ ಈಗ ನಿರಾಸೆಯಾಗಿದೆ. ಅಟ್ಯಾಕ್ ಸಿನಿಮಾ ಸೋತ ಬೆನ್ನಲ್ಲೇ ಈಗ ನೆಟ್ಟಿಗರು ಜಾನ್ ಅಬ್ರಹಾಂ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದು, ಎಲ್ಲೆಲ್ಲೂ ಜಾನ್ ಅಬ್ರಹಾಂ ಕುರಿತಾಗಿ ವ್ಯಂಗ್ಯ ಮಾಡುತ್ತಿರುವುದು ಕಂಡು ಬಂದಿದೆ. ನೆಟ್ಟಿಗರು ದಕ್ಷಿಣ ಸಿನಿಮಾಗಳ ಬಗ್ಗೆ ಹೇಳುತ್ತಾ ಜಾನ್ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ನೆಟ್ಟಿಗರೊಬ್ಬರು, ತೆಲುಗಿನಲ್ಲಿ ಬಿಗ್ ಬಜೆಟ್ ಸಿನಿಮಾ, ಮಲೆಯಾಳಂ ನಲ್ಲಿ ಬಲವಾದ ಕಂಟೆಂಟ, ತಮಿಳಿನಲ್ಲಿ ಹೈ ಆ್ಯಕ್ಷನ್, ಕನ್ನಡದಲ್ಲಿ ವಿಶಿಷ್ಟ ಕಾನ್ಸೆಪ್ಟ್ ಗಳ ಸಿನಿಮಾಗಳು ಸಿದ್ಧವಾಗುತ್ತದೆ. ಇಂತಹ ಸಿನಿಮಾಗಳಲ್ಲಿ ಇನ್ನು ಮುಂದೆ ನೀವು ನಟಿಸಬೇಕು ಎಂದರೂ ಯಾರೂ ನಿಮಗೆ ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಇನ್ನೂ ಕೆಲವರು, ನಟರು ತಾವು ಭಾರತೀಯ ಸಿನಿಮಾ ನಟರು ಎಂದು ಹೇಳಿಕೊಳ್ಳಲು ಬಯಸುತ್ತಾರೆ, ಆದರೆ ಜಾನ್ ಅಬ್ರಹಾಂ ತಾವೊಬ್ಬ ಹಿಂದಿ ಸಿನಿಮಾ ಹೀರೋ ಎನ್ನುತ್ತಾರೆ. ಮೊದಲು ಎಲ್ಲಾ ಸಿನಿಮಾಗಳನ್ನು ಗೌರವಿಸುವುದು ಕಲಿಯಿರಿ ಎಂದು ಟೀಕಿಸಿದ್ದಾರೆ.