ತೆಲುಗಿನ ಜನಪ್ರಿಯ‌ ನಟನ ಜೊತೆ ದಿಯಾ ಸಿನಿಮಾ ನಟಿ ಖುಷಿ ರವಿ: ಸೈಮಾ ಪ್ರಶಸ್ತಿ ಬೆನ್ನಲ್ಲೇ ಹೊಸ ಸುದ್ದಿ ನೀಡಿದ ನಟಿ

Entertainment Featured-Articles News
78 Views

ಕನ್ನಡ ಸಿನಿಮಾಗಳ ಮೂಲಕ ಚಿತ್ರರಂಗಕ್ಕೆ ಅಡಿ ಇಟ್ಟು ಅನಂತರ ಇತರೆ ಭಾಷೆಗಳಿಗೂ ಪ್ರವೇಶ ನೀಡಿದ ನಟಿಯರು ಸಾಕಷ್ಟು ಜನರಿದ್ದಾರೆ. ಹೀಗೆ ಕನ್ನಡದಿಂದ ಬಂದವರು ತೆಲುಗು, ತಮಿಳು ಮಲಯಾಳಂ ಸಿನಿಮಾಗಳಲ್ಲಿ ಮಿಂಚುತ್ತಾ ದೊಡ್ಡ ಹೆಸರನ್ನು ಮಾಡಿದ್ದಾರೆ. ಕೆಲವು ನಟಿಯರು ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟಿಯರಾಗಿ ಹೆಸರನ್ನು ಮಾಡಿಕೊಂಡಿದ್ದಾರೆ. ಈಗ ಇಂತಹ ನಟಿಯರ ಸಾಲಿಗೆ ಮತ್ತೋರ್ವ ಕನ್ನಡ ನಟಿಯು ಸೇರ್ಪಡೆಯಾಗಿದ್ದಾರೆ. ಹೌದು ದಿಯಾ ಸಿನಿಮಾ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವ ಅಚ್ಚ ಕನ್ನಡದ ನಟಿಯಾಗಿರುವ ಖುಷಿ ರವಿ ಅವರು ತೆಲುಗು ಚಿತ್ರರಂಗಕ್ಕೆ ಅಡಿಯಿಟ್ಟಿದ್ದಾರೆ.

ಸಾಮಾನ್ಯವಾಗಿ ಚಿತ್ರರಂಗದಲ್ಲಿ ನಟಿಯರಿಗೆ ಮದುವೆಯಾದ ಮೇಲೆ ಅಷ್ಟಾಗಿ ದೊಡ್ಡ ಅವಕಾಶಗಳು ಬರುವುದಿಲ್ಲ. ಅಲ್ಲದೇ ಬಹುತೇಕ ನಟಿಯರು ಮದುವೆ ಹಾಗೂ ಮಕ್ಕಳಾದ ನಂತರ ಪೋಷಕ ಪಾತ್ರಗಳಿಗೆ ಸೀಮಿತವಾಗಿ ಬಿಡುತ್ತಾರೆ. ಆದರೆ ಖುಷಿಯಾಗಿ ಅವರ ವಿಚಾರದಲ್ಲಿ ಈ ಮಾತು ಸುಳ್ಳಾಗಿದೆ. ಈಗಾಗಲೇ ಮದುವೆಯಾಗಿ ಒಂದು ಮಗುವಿನ ತಾಯಿ ಆಗಿರುವ ಖುಷಿ ರವಿ ಅವರಿಗೆ ಒಂದಾದ ನಂತರ ಮತ್ತೊಂದು ಎನ್ನುವಂತೆ ಸಿನಿಮಾಗಳ ಅವಕಾಶಗಳು ಅವರನ್ನು ಅರಸಿ ಬರುತ್ತಿದೆ.

ತೆಲುಗು ಚಿತ್ರರಂಗಕ್ಕೆ ಅಡಿಯಿಟ್ಟ ವಿಚಾರವಾಗಿ ಮಾಧ್ಯಮವೊಂದರ ಜೊತೆ ಖುಷಿಯನ್ನು ಹಂಚಿಕೊಂಡಿರುವ ಖುಷಿ ರವಿಯವರು, ನನ್ನ ಮೊದಲ ತೆಲುಗು ಸಿನಿಮಾದ ಮುಹೂರ್ತ ನಡೆದಿದೆ, ಇದೊಂದುಸಸ್ಪೆನ್ಸ್ ಥ್ರಿಲ್ಲರ್ ಕಥೆಯಾಗಿದೆ. ನಾನು ಸಿನಿಮಾದಲ್ಲಿ ಕಾನೂನು ಕಲಿಯುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದಿದ್ದು, ನನಗೆ ಈ ಪಾತ್ರಕ್ಕೆ ಅವಕಾಶ ನನ್ನ ಮ್ಯಾನೇಜರ್ ಉಷಾ ಅವರ ಕಡೆಯಿಂದ ದೊರಕಿದೆ ಎನ್ನುವ ಮಾಹಿತಿಯನ್ನು ಸಹಾ ಅವರು ಹಂಚಿಕೊಂಡಿದ್ದಾರೆ.

ಈ ಸಿನಿಮಾದಲ್ಲಿ ಖುಷಿ ರವಿ ಅವರು ತೆಲುಗು ಚಿತ್ರರಂಗದ ಜನಪ್ರಿಯ ನಟ ಸಂದೀಪ್ ಕಿಶನ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಟಾರ್ ನಟ ರವಿತೇಜ ಅವರ ಡಿಸ್ಕೋ ರಾಜಾ ಸಿನಿಮಾವನ್ನು ನಿರ್ದೇಶನ ಮಾಡಿದ್ದ ವಿ ಐ ಆನಂದ್ ಅವರು ಈ ಸಿನಿಮಾದ ನಿರ್ದೇಶನವನ್ನು ಮಾಡುತ್ತಿದ್ದಾರೆ. ಮೊದಲ ಶಾಟ್ ಗೆ ನಾಯಕ ನಟ ನರೇಶ್ ಕ್ಲಾಪ್ ಮಾಡಿದ್ದಾರೆ. ನಟಿ ಖುಷಿ ರವಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ಹೊಸ ಸಿನಿಮಾದ ಮುಹೂರ್ತದ ಫೋಟೋವನ್ನು ಹಂಚಿಕೊಂಡಿರುವ ಅವರು, “ಹೊಸ ನಗರ, ಹೊಸ ಭಾಷೆ, ಹೊಸ ಆರಂಭ, ನಿಮ್ಮಿಂದ ಅದೇ ಪ್ರೀತಿಯನ್ನು ನಿರೀಕ್ಷೆ ಮಾಡುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಖುಷಿ ರವಿಯವರು ಪ್ರಸ್ತುತ ನಕ್ಷೆ , ಸ್ಪೂಕಿ ಕಾಲೇಜು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವಲ್ಲದೇ ಪೃಥ್ವಿ ಅಂಬರ್ ಅವರ ಜೊತೆ ಇನ್ನೊಂದು ಸಿನಿಮಾದಲ್ಲಿ ನಟಿಸಲಿದ್ದಾರೆ. ಇವೆಲ್ಲವುಗಳ ನಡುವೆ ತಮಿಳು ಚಿತ್ರರಂಗದಿಂದಲೂ ಅವರಿಗೆ ಅವಕಾಶಗಳು ಬರುತ್ತಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *