ಬಾಲಿವುಡ್ ಸಿನಿಮಾ ನಿರ್ದೇಶಕ ಶಕುನ್ ಬಾತ್ರಾ ನಿರ್ದೇಶನದ ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ, ಅನನ್ಯ ಪಾಂಡೆ ಹಾಗೂ ಧೈರ್ಯ ಕರ್ವ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಗೆಹರಾಯಿಯಾ ಸಿನಿಮಾ ಇತ್ತೀಚಿಗೆ ಓಟಿಟಿಯಲ್ಲಿ ಬಿಡುಗಡೆಗೊಂಡಿತ್ತು. ಸಿನಿಮಾ ಬಿಡುಗಡೆಯ ನಂತರ ಈ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಆದರೆ ಗಮನಿಸಬೇಕಾದ ಅಂಶ ಏನೆಂದರೆ ಸಿನಿಮಾದ ಬಗ್ಗೆ ನೆಗೆಟಿವ್ ರಿವ್ಯೂ ಗಳು ಬರಲು ಆರಂಭಿಸಿದ್ದು, ಅನೇಕರು ಚಿತ್ರ ಕಥೆಯ ಬಗ್ಗೆ, ದೃಶ್ಯಗಳ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.
ಸಾಮಾನ್ಯವಾಗಿ ಸಿನಿಮಾ ಇಷ್ಟವಾಗದಿದ್ದರೆ ಪ್ರೇಕ್ಷಕರು ತಮ್ಮಲ್ಲಿ ತಾವು ಸಿನಿಮಾ ಬಗ್ಗೆ ಅಸಮಾಧಾನ ಮಾಡಿಕೊಂಡು, ಬೈದುಕೊಂಡು ಸುಮ್ಮನಾಗುತ್ತಾರೆ. ಆದರೆ ಗೆಹರಾಯಿಯಾ ಸಿನಿಮಾದಲ್ಲಿ ಇದರಲ್ಲಿ ಸ್ವಲ್ಪ ಬದಲಾವಣೆ ಆಗಿದೆ. ಹೌದು ಗೆಹರಾಯಿಯಾ ಸಿನಿಮಾ ನೋಡಿದ ನಂತರ ಸಿನಿಮಾ ಹಿಡಿಸದ ಮಂದಿ ನೇರವಾಗಿ ನಿರ್ದೇಶಕನಿಗೇ ಸೋಶಿಯಲ್ ಮೀಡಿಯಾಗಳ ಮುಖಾಂತರ ಬೈಗುಳಗಳನ್ನು ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಈ ವಿಷಯವನ್ನು ಸ್ವತಃ ನಿರ್ದೇಶಕ ಶಕುನ್ ಬಾತ್ರಾ ಹಂಚಿಕೊಂಡಿದ್ದಾರೆ.
ಶಕುನ್ ಬಾತ್ರಾ ಮಾದ್ಯಮಗಳ ಜೊತೆ ಈ ವಿಚಾರವನ್ನು ಹಂಚಿಕೊಂಡಿದ್ದು, ಹಲವು ನಿಂದನೀಯ ಮೇಲ್ ಗಳು ತನಗೆ ಬಂದಿವೆ ಎಂದು ಹೇಳುತ್ತಾ, ಒಬ್ಬ ವ್ಯಕ್ತಿ ಮೇಲ್ ನಲ್ಲಿ ತನಗೆ ಕಸಿವಿಸಿಯಾಗುವಂತಹ ಕೆಟ್ಟ ಪದಗಳನ್ನು ಬಳಸಿದ್ದಾರೆಂದು ಹೇಳಿದ್ದಾರೆ. ಅಲ್ಲದೇ ಒಬ್ಬ ಮನಶಾಸ್ತ್ರಜ್ಞರು ತನ್ನನ್ನು ಭೇಟಿ ಮಾಡಿ, ಸಿನಿಮಾದಲ್ಲಿ ಅಂತಹ ಪಾತ್ರಗಳನ್ನು ಪರಿಚಯಿಸುವ ಹಿಂದಿನ ಕಾರಣವೇನು? ವ್ಯಕ್ತಿಯ ಮನೋವಾಂಛೆಗಳನ್ನು ಬಹಳ ಚೆನ್ನಾಗಿ ಬಿಂಬಿಸಲಾಗಿದೆ ಎನ್ನುವ ಮೆಚ್ಚುಗೆ ನೀಡಿದರು.
ಹೀಗೆ ಸಿನಿಮಾ ಬಗ್ಗೆ ಪಾಸಿಟಿವ್ ಹಾಗೂ ನೆಗಟಿವ್ ಮಾತುಗಳು ಕೇಳಿ ಬರುತ್ತಿದೆ ಎಂದು ಸಹಾ ಹೇಳಿಕೊಂಡಿದ್ದಾರೆ ಶಕುನ್ ಬಾತ್ರಾ. ಅಲ್ಲದೇ ಈ ಸಿನಿಮಾ ಕುರಿತಾಗಿ ಬೆಂಗಳೂರು ನಗರದ ಮಾಜಿ ಪೋಲಿಸ್ ಕಮೀಷನರ್ ಭಾಸ್ಕರ್ ರಾವ್ ಅವರು ಸಹಾ ಅಸಮಾಧಾನ ಹೊರ ಹಾಕಿ, ಇಪ್ಪತ್ತು ನಿಮಿಷ ನಂತರ ನಾನು ಸಿನಿಮಾ ನೋಡುವುದನ್ನು ನಿಲ್ಲಿಸಿಬಿಟ್ಟೆ ಎನ್ನುವ ಮಾತನ್ನು ಹೇಳಿದ್ದರು. ಒಟ್ಟಾರೆ ಗೆಹರಾಯಿಯಾ ದೊಡ್ಡ ಸದ್ದನ್ನಂತೂ ಮಾಡಿದೆ.