ತೆಲುಗು ಹಾಗೂ ತಮಿಳು ಸಿನಿಮಾ ರಂಗಗಳಲ್ಲಿ ಸರಿ ಸುಮಾರು 800 ಸಿನಿಮಾಗಳಲ್ಲಿ ಹಾಡುಗಳಿಗೆ ನೃತ್ಯ ನಿರ್ದೇಶನವನ್ನು ಮಾಡಿದಂತಹ ಹಿರಿಯ ನೃತ್ಯ ನಿರ್ದೇಶಕ ಶಿವ ಶಂಕರ್ ಮಾಸ್ಟರ್, ದಕ್ಷಿಣ ಸಿನಿಮಾ ರಂಗದ ದಿಗ್ಗಜ ನೃತ್ಯ ನಿರ್ದೇಶಕರಲ್ಲಿ ಒಬ್ಬರಾಗಿ ಸ್ಥಾನವನ್ನು ಪಡೆದುಕೊಂಡಿದ್ದು, ಹಲವು ರಾಜ್ಯ ಪ್ರಶಸ್ತಿಗಳನ್ನು ಹಾಗೂ ರಾಷ್ಟ್ರ ಪ್ರಶಸ್ತಿಯನ್ನು ಸಹಾ ಪಡೆದುಕೊಂಡಿರುವ ಪ್ರತಿಭಾವಂತ ನೃತ್ಯ ನಿರ್ದೇಶಕ ಕೂಡಾ ಆಗಿದ್ದಾರೆ. ಇಂತಹ ಹಿರಿಯ ನೃತ್ಯ ನಿರ್ದೇಶಕನ ಆರೋಗ್ಯವು ತೀವ್ರವಾಗಿ ಹದಗೆಟ್ಟಿದ್ದು ಅವರು ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿವಶಂಕರ್ ಮಾಸ್ಟರ್ ಅವರಿಗೆ ಕೋವಿಡ್ ಸೋಂಕು ತಗುಲಿದ್ದು, ಇದರ ಪರಿಣಾಮ ಅವರ ಶ್ವಾಸಕೋಶಗಳ ಮೇಲೆ ಆಗಿದ್ದು ಅವರ ಆರೋಗ್ಯ ಹದಗೆಟ್ಟಿದ್ದು, ಹೈದ್ರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆಯಾದರೂ, ಶಿವಶಂಕರ ಮಾಸ್ಟರ್ ಅವರ ಪರಿಸ್ಥಿತಿ ಮಾತ್ರ ಬಹಳ ಗಂಭೀರವಾಗಿದೆ ಎನ್ನಲಾಗಿದೆ. ಶಿವಶಂಕರ್ ಮಾಸ್ಟರ್ ಅವರ ಕುಟುಂಬದವರಿಗೂ ಸಹಾ ಕೊರೊನಾ ಸೋಂಕು ತಗುಲಿದ ಕಾರಣ ಅವರು ಕೂಡಾ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಕುಟುಂಬದವರು ಸಹಾ ಆಸ್ಪತ್ರೆಗೆ ದಾಖಲಾದ ಕಾರಣ, ಅವರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಸಂಕಷ್ಟದಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನಟ ಸೋನು ಸೂದ್ ಅವರು ಈಗಾಗಲೇ ತಾನು ಆ ಕುಟುಂಬದ ಸಂಪರ್ಕದಲ್ಲಿ ಇರುವುದಾಗಿ ಹೇಳಿದ್ದಾರೆ. ಇನ್ನೊಂದು ಕಡೆ ತಮಿಳಿನ ಸ್ಟಾರ್ ನಟ ಧನುಷ್ ಅವರು ಸಹಾ ಶಿವಶಂಕರ್ ಮಾಸ್ಟರ್ ಅವರ ಕುಟುಂಬದ ನೆರವಿಗೆ ಧಾವಿಸಿದ್ದಾರೆ.
ನಟ ಧನುಷ್ ಅವರು ಶಿವಶಂಕರ್ ಮಾಸ್ಟರ್ ಅವರ ಕುಟುಂಬದ ಪರಿಸ್ಥಿತಿ ಯ ಬಗ್ಗೆ ತಿಳಿದು ಸುಮಾರು ಹತ್ತು ಲಕ್ಷ ರೂಪಾಯಿಗಳ ನೆರವನ್ನು ಒದಗಿಸುವ ಮೂಲಕ, ಶಿವಶಂಕರ್ ಮಾಸ್ಟರ್ ಅವರ ಕುಟುಂಬದ ಈ ಸಂಕಷ್ಟದ ಸಮಯದಲ್ಲಿ ಅವರಿಗೆ ನೈತಿಕ ಹಾಗೂ ಆರ್ಥಿಕ ಬೆಂಬಲವನ್ನು ನೀಡಿ ಮಾನವೀಯತೆ ಮೆರೆದಿರುವುದು ಮಾತ್ರವೇ ಅಲ್ಲದೇ ತಮ್ಮ ಜವಾಬ್ದಾರಿ ನಿಭಾಯಿಸಿದ್ದಾರೆ.
ಧನುಷ್ ಹಾಗೂ ಛಾಯಾಸಿಂಗ್ ಅಭಿನಯದ ತಿರುಡಾ ತಿರುಡಿ ಸಿನಿಮಾದ ಸೂಪರ್ ಹಿಟ್ ಹಾಡು ಮನ್ಮಥ ರಾಜಾ, ಮನ್ಮಥ ರಾಜಾ ಹಾಡಿಗೆ ಶಿವಶಂಕರ್ ಮಾಸ್ಟರ್ ನೃತ್ಯ ನಿರ್ದೇಶನವನ್ನು ಮಾಡಿದ್ದರು. ಈ ಹಾಡು ಆಗ ಎಷ್ಟು ಸದ್ದು ಮಾಡಿತ್ತೋ, ಈ ಹಾಡಿನ ಡಾನ್ಸ್ ಕೂಡಾ ಅಭಿಮಾನಿಗಳು ಹುಚ್ಚೆದ್ದು ಕುಣಿಯುವ ಹಾಗೆ ಮಾಡಿತ್ತು. ಶಿವಶಂಕರ್ ಮಾಸ್ಟರ್ ರಾಮ್ ಚರಣ್ ತೇಜ ಅಭಿನಯದ ಮಗಧೀರ ಸಿನಿಮಾದ ಧೀರ ಧೀರ ಹಾಡಿನ ನೃತ್ಯ ನಿರ್ದೇಶನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.