ಕಲಿಯುಗ ಪ್ರತ್ಯಕ್ಷ ದೈವ ಶ್ರೀ ವೆಂಕಟೇಶ್ವರ ಸ್ವಾಮಿ ನೆಲೆನಿಂತಿರುವ ತಿರುಮಲ ತಿರುಪತಿ ಕ್ಷೇತ್ರಕ್ಕೆ ದೇಶ-ವಿದೇಶಗಳಿಂದ ಭಕ್ತರು ಆಗಮಿಸಿ ವೆಂಕಟೇಶ್ವರ ಸ್ವಾಮಿಯನ್ನು ದರ್ಶನ ಮಾಡಿ ಪುನೀತರಾಗುತ್ತಾರೆ, ತಮ್ಮ ಹರಕೆ ತೀರಿಸಿಕೊಳ್ಳುತ್ತಾರೆ. ಪ್ರತಿದಿನವೂ ಸಹಸ್ರಾರು ಭಕ್ತರಿಂದ ತಿರುಮಲ ಕ್ಷೇತ್ರವು ಕಂಗೊಳಿಸುತ್ತದೆ. ಆದರೆ ಕೊರೋನಾ ವೈರಸ್ ಪರಿಣಾಮ ಎಲ್ಲಾ ಕ್ಷೇತ್ರಗಳ ಮೇಲೆ ಆದಂತೆ ದೇಶದ ಪ್ರಮುಖ ದೇವಾಲಯಗಳ ಮೇಲೆಯೂ ಆಗಿದೆ. ಈ ಹಿನ್ನೆಲೆಯಲ್ಲಿ ದೇವಾಲಯಗಳಿಗೆ ಭೇಟಿ ನೀಡುವ ಭಕ್ತರಿಗೆ ಸ್ವಲ್ಪ ಸಮಯ ನಿರ್ಬಂಧವನ್ನು ಹೇರಲಾಗಿತ್ತು.
ಅನಂತರ ದೇವಾಲಯಗಳ ಭಕ್ತರಿಗೆ ದರ್ಶನ ಅವಕಾಶವನ್ನು ನೀಡಲಾಯಿತಾದರೂ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆಯನ್ನು ಪರಿಮಿತಗೊಳಿಸಲಾಯಿತು. ಈ ಕಾರಣದಿಂದ ತಿರುಮಲ ಕ್ಷೇತ್ರದಲ್ಲಿ ಶ್ರೀ ವೆಂಕಟೇಶ್ವರನ ಆದಾಯ ಕಡಿಮೆಯಾಗಿದ್ದು, ಕೊರೋನ ವೈರಸ್ ಕಾರಣದಿಂದ ಸತತ ಎರಡನೇ ವರ್ಷವೂ ತಿರುಮಲ ಶ್ರೀಕ್ಷೇತ್ರದ ಆದಾಯವು ಗಣನೀಯವಾಗಿ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ. ಕಳೆದ ಏಪ್ರಿಲ್ ನಲ್ಲಿ ಕೊರೊನಾ ಎರಡನೇ ಅಲೆ ವಿಜೃಂಭಿಸಿತ್ತು.
ದೇಗುಲದ ಆದಾಯ ಏರಿಕೆಯಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದ ಟಿಟಿಡಿಗೆ ಕೊರೊನಾ ಎರಡನೇ ಅಲೆಯ ಅಬ್ಬರ ನಿರಾಸೆ ಮೂಡಿಸಿತ್ತು. ಆನಂತರ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆ ಆದ ಮೇಲೆ ದೇವರ ದರ್ಶನಕ್ಕೆ ಭಕ್ತರಿಗೆ ಆನ್ ಲೈನ್ ನಲ್ಲಿ ಪರಿಮಿತ ಸಂಖ್ಯೆಯಲ್ಲಿ ಮಾತ್ರವೇ ಅನುಮತಿ ನೀಡಿದ್ದು ದೇಗುಲದ ಆದಾಯದ ಮೇಲೆ ಪ್ರಭಾವ ಬೀರಿದೆ. ಮಾರ್ಚ್ 2021ರಲ್ಲಿ ಸರ್ವದರ್ಶನ ಟಿಕೆಟ್ ಗಳನ್ನು ಮೂವತ್ತು ಸಾವಿರದಿಂದ 15 ಸಾವಿರಕ್ಕೆ ಇಳಿಸಲಾಯಿತು.
ಏಪ್ರಿಲ್ 12ಕ್ಕೆ ಸರ್ವದರ್ಶನ ಟಿಕೆಟ್ ಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಯಿತು. ಆಗಸ್ಟ್ ವರೆಗೆ ವಿಶೇಷ ದರ್ಶನ ಟಿಕೆಟ್ ಗಳನ್ನು ಮಾತ್ರವೇ ನೀಡಲಾಯಿತು, ಅದು ಕೂಡಾ ದಿನಕ್ಕೆ ಐದು ಸಾವಿರ ಮಾತ್ರ. ಕೊರೊನಾ ಕಡಿಮೆಯಾದ ಮೇಲೆ ದಿನಕ್ಕೆ 8000 ಟಿಕೆಟ್ ಗಳಿಗೆ ಅನುಮತಿ ನೀಡಲಾಯಿತು ಈ ಎಲ್ಲವುಗಳ ನೇರ ಪರಿಣಾಮ ದೇಗುಲದ ಆದಾಯದ ಮೇಲೆ ಆಗಿದೆ. ಮಾರ್ಚ್ 2021ರಲ್ಲಿ 150 ಕೋಟಿ ಇದ್ದ ಆದಾಯ ಏಪ್ರಿಲ್ ನಲ್ಲಿ 62.62 ಕೋಟಿಗೆ ತಗ್ಗಿದೆ.
ಸೆಪ್ಟೆಂಬರ್ ಅಂತ್ಯದ ವೇಳೆಗೆ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆಯನ್ನು ಹೆಚ್ಚಿಸಿದ್ದು, ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೂ ಅನುಮತಿಯನ್ನು ನೀಡಿದ್ದರಿಂದ ಆದಾಯದ ಪ್ರಮಾಣ ಸ್ವಲ್ಪ ಏರಿಕೆಯಾಗಿದ್ದುಉ ಪ್ರಸ್ತುತ 75 ರಿಂದ 80 ಕೋಟಿಗಳ ನಡುವೆ ಇದೆ ಎನ್ನಲಾಗಿದೆ. ಟಿಟಿಡಿ ಆದಾಯ ತಗ್ಗಿರುವ ಕಾರಣ ವಾರ್ಷಿಕ ಬಜೆಟ್ ನ ಭಾಗವಾಗಿ ಹಂಚಿಕೆಯನ್ನು ಕಡಿತಗೊಳಿಸಲಾಗಿದೆ. 2020-21ರಲ್ಲಿ 3309 ಕೋಟಿ ರೂ.ಗಳ ಬಜೆಟ್ ಹೊಂದಿದ್ದ ಟಿಟಿಡಿ ಈ ವರ್ಷ ಕೇವಲ 2937.82 ಕೋಟಿ ರೂ. ಬಜೆಟ್ ಹೊಂದಿದೆ.