ಶ್ರೀಲಂಕಾ ಆರ್ಥಿಕ ಸಂಕಷ್ಟ: ಪೆಟ್ರೋಲ್ ಪಂಪ್ ನಲ್ಲಿ ಟೀ ಹಂಚುತ್ತಿರುವ ಮಾಜಿ ಕ್ರಿಕೆಟ್ ಆಟಗಾರ

0 4

ದ್ವೀಪ ರಾಷ್ಟ್ರವಾದ ಶ್ರೀಲಂಕಾ ತೀವ್ರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಜನರ ಜೀವನದ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಕಠಿಣ ಸಂದರ್ಭದಲ್ಲಿ 1996 ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಶ್ರೀಲಂಕಾದ ಜನಪ್ರಿಯ ಕ್ರಿಕೆಟ್ ಆಟಗಾರ ರೋಶನ್ ಮಹಾನಾಮ ಅವರು ಸಂಕಷ್ಟದಲ್ಲಿರುವ ಜನರ ನೆರವಿಗೆ ಮುಂದಾಗಿದ್ದಾರೆ ರೋಶನ್ ಮಹಾನಾಮ ಅವರು ಪೆಟ್ರೋಲ್ ಪಂಪ್ ನಲ್ಲಿ ಸಾಲುಗಟ್ಟಿ ನಿಂತಿರುವ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವ ಮಾನವೀಯ ಕಾರ್ಯವನ್ನು ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಅವರ ಈ ನಡೆಯ ಬಗ್ಗೆ ವ್ಯಾಪಕ ಮೆಚ್ಚುಗೆಗಳು ಹರಿದುಬರುತ್ತಿದೆ

ಶ್ರೀಲಂಕಾದಲ್ಲಿ ಜನರು ಅಗತ್ಯ ವಸ್ತುಗಳು ಹಾಗೂ ಇನ್ನಿತರೆ ಸಾಮಗ್ರಿಗಳಿಗೆ ಕ್ಯೂ ಕಟ್ಟಿ ನಿಲ್ಲುವಂತಹ ಪರಿಸ್ಥಿತಿ ಎದುರಾಗಿದೆ. ಹೀಗೆ ಕ್ಯೂನಲ್ಲಿ ನಿಂತಿರುವ ಜನರಿಗೆ ಚಹಾ ಮತ್ತು ಬನ್ ಗಳನ್ನು ನೀಡುವ ಮೂಲಕ ರೋಶನ್ ಮಹಾನಾಮ ಅವರು ಮಾನವೀಯತೆಯನ್ನು ಮೆರೆದಿದ್ದಾರೆ. ಅವರು ಪೆಟ್ರೋಲ್ ಪಂಪ್ ನಲ್ಲಿ ಜನರಿಗೆ ಚಹಾ ಹಂಚುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ಆದ ಫೋಟೋಗಳನ್ನು ನೋಡಿ ನೆಟ್ಟಿಗರಿಂದ ದೊಡ್ಡ ಪ್ರಮಾಣದಲ್ಲಿ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.‌

ವಾರ್ಡ್ ಕ್ಲಾಸ್ ಮತ್ತು ವಿಜಾರಾಮ ಮಠ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೆಟ್ರೋಲ್ ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಜನರಿಗೆ ಚಹಾ ಮತ್ತು ಬನ್ ನೀಡುವ ಕೆಲಸವನ್ನು ನಾವು ಮಾಡಿದ್ದೇವೆ. ದಿನದಿಂದ ದಿನಕ್ಕೆ ಇಂತಹ ಸರತಿ ಸಾಲುಗಳು ಉದ್ದವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಜನರ ಆರೋಗ್ಯ ಕೂಡಾ ಹದಗೆಡುತ್ತಿದೆ. ದಯವಿಟ್ಟು ಹೀಗೆ ಕ್ಯೂನಲ್ಲಿ ನಿಂತಿರುವವರಿಗೆ ಪರಸ್ಪರ ಸಹಾಯ ಮಾಡಿ ಎಂದು ರೋಶನ್ ಮಹಾನಾಮ ಅವರು ಟ್ವೀಟ್ ಒಂದನ್ನು ಮಾಡುವ ಮೂಲಕ ಮನವಿಯನ್ನು ಮಾಡಿಕೊಂಡಿದ್ದಾರೆ.

ರೋಶನ್ ಮಹಾನಾಮ ಅವರ ಈ ಮಾನವೀಯ ನಡೆಗೆ ವ್ಯಾಪಕ ಮೆಚ್ಚುಗೆಗಳು ಹರಿದುಬಂದಿದ್ದು, 1996 ವಿಶ್ವಕಪ್ ಹೀರೋ ಈಗ, ಕಷ್ಟದಲ್ಲಿರುವ ಜನರ ಪಾಲಿಗೆ ರಿಯಲ್ ಹೀರೋ ಆಗಿದ್ದಾರೆ ಎಂದು ನೆಟ್ಟಿಗರು ಕಾಮೆಂಟುಗಳನ್ನು ಮಾಡುವ ಮೂಲಕ ರೋಶನ್ ಮಹಾನಾಮ ಅವರನ್ನು ಹೊಗಳಿದ್ದಾರೆ. ಶ್ರೀಲಂಕಾದ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಿಂದಾಗಿ ಅಲ್ಲಿ ಸಾಮಾನ್ಯ ಜನರ ಬದುಕು ದುರ್ಬರವಾಗಿದೆ. ಅಗತ್ಯ ವಸ್ತುಗಳನ್ನು ಪಡೆಯುವುದಕ್ಕೆ ಕೂಡಾ ಜನರು ಪರದಾಟ ಮಾಡುವಂತಹ ದುಸ್ಥಿತಿ ಎದುರಾಗಿದೆ.

Leave A Reply

Your email address will not be published.