ಶೂಟಿಂಗ್ ಆರಂಭಕ್ಕೆ ಮೊದಲೇ 400 ಕೋಟಿ ಆಫರ್: ಪುಷ್ಪ 2 ಕ್ರೇಜ್ ಈಗಲೇ ಆರಂಭ ಎಂದ ಅಭಿಮಾನಿಗಳು!!
ಸುಕುಮಾರ್ ನಿರ್ದೇಶನದ, ತೆಲುಗು ಚಿತ್ರರಂಗದ ಐಕಾನ್ ಸ್ಟಾರ್ ಎನಿಸಿರುವ ನಟ ಅಲ್ಲು ಅರ್ಜುನ್ ನಾಯಕನಾಗಿ, ರಶ್ಮಿಕಾ ಮಂದಣ್ಣ ನಾಯಕಿಯಾಗಿ ತೆರೆಗೆ ಬಂದ ಸಿನಿಮಾ ಪುಷ್ಪ ದೊಡ್ಡ ವಿಜಯವನ್ನು ಸಾಧಿಸಿ, ಎಲ್ಲೆಲ್ಲೂ ಸದ್ದು ಮಾಡಿದೆ. ಈ ಸಿನಿಮಾ ಈಗಾಗಲೇ ಓಟಿಟಿಗೂ ಎಂಟ್ರಿ ನೀಡಿ, ಪ್ರಸಾರ ಕಾಣುವ ಮೂಲಕ ಜನರ ಮನಸ್ಸನ್ನು ಗೆದ್ದಿದೆ. ವಿಶೇಷವೆಂದರೆ ಇನ್ನೂ ಕೂಡಾ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಪುಷ್ಪ ಸಿನಿಮಾ ವಿಶ್ವಮಟ್ಟದಲ್ಲಿ ಗೆಲುವನ್ನು ಸಾಧಿಸುವ ಮೂಲಕ ಗಳಿಕೆಯಲ್ಲೂ ದಾಖಲೆಯನ್ನು ಬರೆದಿದೆ.
ಈಗ ಈ ಗೆಲುವು ಸಹಜವಾಗಿಯೇ ಪುಷ್ಪ 2 ಬಗ್ಗೆ ಇನ್ನಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಪುಷ್ಪ ಪ್ಯಾನ್ ಇಂಡಿಯಾ ಸಿನಿಮಾ ಆದ ಕಾರಣ ಈ ಸಿನಿಮಾದ ಮೂಲಕ ನಟ ಅಲ್ಲು ಅರ್ಜುನ್ ಬಾಲಿವುಡ್ ಗೆ ಪ್ರವೇಶ ನೀಡಿದ್ದಾರೆ. ಅವರ ಮೊದಲನೆಯ ಸಿನಿಮಾ ಬಾಲಿವುಡ್ ನಲ್ಲಿ 91 ಕೋಟಿ ಗಳಿಸಿರುವುದು ವಿಶೇಷವಾಗಿದೆ. ಬಾಲಿವುಡ್ ನಲ್ಲೂ ಅಲ್ಲು ಅರ್ಜುನ್ ಈಗ ಗಮನ ಸೆಳೆದಿದ್ದಾರೆ. ಈಗ ಸಿನಿಮಾ ಗಳಿಸಿದ ಇಂತಹ ವಿಜಯವು ಸಹಜವಾಗಿಯೇ ಈ ಸಿನಿಮಾದ ಮುಂದಿನ ಭಾಗ ಹೇಗೆ ಇರಲಿದೆ ಎನ್ನುವುದರ ಮೇಲೆ ಕುತೂಹಲವನ್ನು ಕೆರಳಿಸುವಂತೆ ಮಾಡಿದ್ದ, ನಿರೀಕ್ಷೆಗಳು ದುಪ್ಪಟ್ಟಾಗಿದೆ.
ಪುಷ್ಪ 2 ಸಿನಿಮಾದ ಚಿತ್ರೀಕರಣ ಶೀಘ್ರದಲ್ಲಿಯೇ ಪ್ರಾರಂಭಗೊಳ್ಳುತ್ತದೆ ಎಂದು ಚಿತ್ರತಂಡ ಈಗಾಗಲೇ ಮಾಹಿತಿಯನ್ನು ನೀಡಿದೆ. ಆದರೆ ಈಗ ಸಿನಿಮಾ ಆರಂಭವಾಗುವ ಮೊದಲೇ ಹೊಸ ಸುದ್ದಿಯೊಂದು ಹೊರ ಬಂದಿದೆ. ಪುಷ್ಪ 2 ಸಿನಿಮಾ ಪ್ರಾರಂಭವಾಗುವ ಮೊದಲೇ ಬರೋಬ್ಬರಿ 400 ಕೋಟಿ ರೂಪಾಯಿಗಳ ಭರ್ಜರಿ ಆಫರ್ ಒಂದು ಹುಡುಕಿಕೊಂಡು ಬಂದಿದೆ ಎಂದು ಹೇಳಲಾಗುತ್ತಿದೆ. ಪುಷ್ಪ ಮೊದಲ ಭಾಗ ಸಿನಿಮಾ ಮಾಡಿರುವ ಮೋಡಿಯಿಂದಾಗಿ ಎರಡನೆಯ ಭಾಗಕ್ಕೆ 400 ಕೋಟಿ ರೂಪಾಯಿಗಳ ಆಫರ್ ಬಂದಿದೆ.
ಅಂದರೆ ಪುಷ್ಪ 2 ಸಿನಿಮಾ ಬಿಡುಗಡೆಯ ನಂತರ ಓಟಿಟಿಯಲ್ಲಿ ಅದನ್ನು ಪ್ರಸಾರ ಮಾಡುವುದಕ್ಕೆ ಹಕ್ಕು ಖರೀದಿ ಮಾಡುವ ವಿಚಾರವಾಗಿಯಲ್ಲ ಈ ಬಹುಕೋಟಿ ಆಫರ್, ಬದಲಿಗೆ ಖ್ಯಾತ ನಿರ್ಮಾಣ ಸಂಸ್ಥೆಯೊಂದು ಪುಷ್ಪ 2 ಸಿನಿಮಾ ಚಿತ್ರಮಂದಿರದ ಬಿಡುಗಡೆಯ ಹಕ್ಕುಗಳನ್ನು ತನಗೆ ನೀಡಬೇಕೆಂದು ಬೇಡಿಕೆಯನ್ನು ಇಟ್ಟಿದ್ದು, ಅದಕ್ಕಾಗಿ 400 ಕೋಟಿ ರೂಪಾಯಿಗಳ ಆಫರ್ ನೀಡಿದೆ ಎಂದು ತಿಳಿದುಬಂದಿದೆ. ಉತ್ತರ ಭಾರತದ ನಿರ್ಮಾಣ ಸಂಸ್ಥೆಯೊಂದು ಇಂತಹ ಆಫರ್ ನೀಡಿದೆ ಎನ್ನಲಾಗಿದ್ದು, ಇದರ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರ ಬಂದಿಲ್ಲ.