ಹಿಂದೂ ಧರ್ಮದಲ್ಲಿ ತುಳಿಸಿ ಗಿಡಕ್ಕೆ ವಿಶೇಷವಾದಂತಹ ಧಾರ್ಮಿಕ ಮಹತ್ವವನ್ನು ನೀಡಲಾಗಿದೆ. ತುಳಸಿಯನ್ನು ಸರ್ವ ಮಂಗಳಕರ ಎಂದೂ, ಇದನ್ನು ದೇವಿ ಮಹಾಲಕ್ಷ್ಮಿಯ ರೂಪವೆಂದೇ ಪರಿಗಣಿಸಿ, ಭಕ್ತಿ, ಶ್ರದ್ಧೆಗಳಿಂದ ಆರಾಧನೆಯನ್ನು ಸಹಾ ಮಾಡುವುದನ್ನು ಕಾಣುತ್ತೇವೆ. ಸಂಪ್ರದಾಯಸ್ಥ ಕುಟುಂಬಗಳಲ್ಲಿ ಇಂದಿಗೂ ಮುತ್ತೈದೆಯರ ದಿನ ಆರಂಭವಾಗುವುದು ತುಳಸಿ ಪೂಜೆಯ ಮೂಲಕವೇ, ಮುಂಜಾನೆ ಎದ್ದು, ಸ್ನಾನಾದಿಗಳನ್ನು ಮುಗಿಸಿದ ನಂತರ ಮಾಡುವ ಮೊದಲ ಕೆಲಸ ತುಳಸಿ ಪೂಜೆಯಾಗಿರುತ್ತದೆ.
ತುಳಸಿಯನ್ನು ಆರಾಧಿಸುವ ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯು ನೆಲೆಸಿರುತ್ತದೆ ಎಂದು ಹೇಳಲಾಗುತ್ತದೆ. ತುಳಸಿಯು ನಮ್ಮ ಪರಿಸರದಲ್ಲಿ ಸಕಾರಾತ್ಮಕತೆಯನ್ನು ತರುವುದರಿಂದಲೇ ಪ್ರತಿ ಮನೆಯಲ್ಲೂ ತುಳಸಿ ಇರುವುದು ಶ್ರೇಯಸ್ಕರ ಎನ್ನಲಾಗಿದೆ. ತುಳಸಿ ಗಿಡವನ್ನು ನೆಡುವಾಗ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ತುಳಸಿಯನ್ನು ಸರಿಯಾದ ಜಾಗದಲ್ಲಿ ನೆಡಬೇಕು. ನೆಟ್ಟ ನಂತರ ಕೊಳಕು ಕೈಗಳಿಂದ, ಸ್ನಾನ ಮಾಡದೇ ಅದನ್ನು ಮುಟ್ಟಬಾರದು.
ತುಳಸಿ ಅತ್ಯಂತ ಪವಿತ್ರ ಎನ್ನುವ ಕಾರಣಕ್ಕೆ ಕಾಲಿಗೆ ಬೂಟು ಧರಿಸಿರುವಾಗ ಅಥವಾ ಚಪ್ಪಲಿ ಧರಿಸಿರುವಾಗ ತುಳಸಿಯನ್ನು ಮುಟ್ಟಬಾರದು. ಸ್ನಾನದ ನಂತರವೇ ತುಳಸಿಯನ್ನು ಸ್ಪರ್ಶ ಮಾಡಬೇಕು. ಅಲ್ಲದೇ ಪ್ರತಿದಿನ ಸಂಜೆ ತುಳಸಿಯ ಕೆಳಗೆ ದೀಪ ಹೊತ್ತಿಸಬೇಕು. ಭಾನುವಾರ ಮತ್ತು ಏಕಾದಶಿಗಳಂದು ತುಳಸಿಗೆ ನೀರು ಹಾಕಬಾರದು. ಏಕೆಂದರೆ ಈ ದಿನಗಳಲ್ಲಿ ತುಳಸಿ ದೇವಿ ಮಹಾ ವಿಷ್ಣುವಿಗೆ ಉಪವಾಸ ಮಾಡುವಳೆಂದು, ನೀರು ಹಾಕಿದರೆ ಆಕೆಯ ಉಪವಾಸ ಮುರಿದಂತೆ ಆಗುತ್ತದೆ.
ತುಳಸಿ ಗಿಡದಲ್ಲಿ ನಾವು ಮಾಡುವ ಆರೈಕೆ ಸಮರ್ಪಕವಾಗಿದ್ದು ಸಹಾ, ಏನಾದರೂ ಹಠಾತ್ ಬದಲಾವಣೆ ಕಂಡು ಬಂದಲ್ಲಿ ಅವುಗಳನ್ನು ಖಂಡಿತ ನಿರ್ಲಕ್ಷ್ಯ ಮಾಡಬೇಡಿ. ಒಂದು ವೇಳೆ ಇದ್ದಕ್ಕಿದ್ದಂತೆ ತುಳಸಿ ಒಣಗಲು ಆರಂಭಿಸಿದರೆ ಯಾವುದೋ ತೊಂದರೆ ಬರುವ ಸೂಚನೆಯಾಗಿರುತ್ತದೆ. ತಕ್ಷಣವೇ ಅದರ ಕಡೆಗೆ ಗಮನವನ್ನು ವಹಿಸಿ, ಒಣಗಿದ ತುಳಸಿ ಗಿಡವನ್ನು ತೆಗೆದು, ಹೊಸ ಗಿಡವನ್ನು ನೆಡಬೇಕಾಗುತ್ತದೆ.
ಮನೆಯಲ್ಲಿ ಹೊಸ ತುಳಸಿ ಗಿಡ ನೆಟ್ಟು ಎರಡು ದಿನಗಳಲ್ಲೇ ಒಣಗಿ ಹೋದರೆ ಅದು ಪಿತೃ ದೋಷದ ಲಕ್ಷಣ ಎನ್ನಲಾಗಿದ್ದು, ಇದರಿಂದ ಜಗಳಗಳು ಆಗುವ ಸಾಧ್ಯತೆಗಳು ಇರುತ್ತವೆ. ಆದ್ದರಿಂದಲೇ ಈ ಲಕ್ಷಣ ಕಂಡ ಕೂಡಲೇ ಪಿತೃದೋಷ ನಿವಾರಣೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕಾಗುವುದು. ಆದ್ದರಿಂದ ಆ ಕಡೆ ಗಮನವನ್ನು ಹರಿಸಬೇಕಾಗುವುದು.
ತುಳಸಿ ಗಿಡವು ನಿರೀಕ್ಷೆಗೂ ಮುನ್ನವೇ ಚೆನ್ನಾಗಿ ಬೆಳೆದು ಹಸಿರಿನಿಂದ ಕಂಗೊಳಿಸಿದರೆ ಇದು ಸಂತೋಷದ ಸಂಕೇತವಾಗಿರುತ್ತದೆ. ಅದು ತುಂಬಾ ಮಂಗಳಕರವಾದುದು ಎಂದು ಸಹಾ ಪರಿಗಣಿಸಲಾಗುತ್ತದೆ. ತುಳಸಿ ಹಸಿರಾಗಿದ್ದರೆ ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿಯು ನೆಲೆಸಿರುತ್ತದೆ ಎನ್ನಲಾಗಿದೆ. ತುಳಸಿ ಗಿಡಕ್ಕೆ ಧಾರ್ಮಿಕ ಮಹತ್ವದ ಜೊತೆಗೆ ಅಸಂಖ್ಯಾತ ಜನರ ನಂಬಿಕೆಗಳು ಬೆಸೆದುಕೊಂಡಿದೆ.