ಶಿಕ್ಷಣ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸುವ ಪ್ರಯತ್ನಕ್ಕಾಗಿ ಮಿಸ್.ನಂದಿನಿಯಾದ ಪ್ರಿಯಾಂಕ ಉಪೇಂದ್ರ

0
208

ಕನ್ನಡ ಚಿತ್ರರಂಗದ ಜನಪ್ರಿಯ ನಟಿ, ಪ್ರಿಯಾಂಕ ಉಪೇಂದ್ರ ಅವರು ಸಿನಿಮಾಗಳಲ್ಲಿ ಸಕ್ರಿಯವಾಗಿದ್ದಾರೆ. ಆಗೊಮ್ಮೆ , ಈಗೊಮ್ಮೆ ಎನ್ನುವಂತೆ ಉತ್ತಮ ಕಥಾ ಹಂದರ ವನ್ನು ಹೊಂದಿರುವ ಸಿನಿಮಾಗಳ ಮೂಲಕ ಅವರು ತಮ್ಮ ಅಭಿಮಾನಿಗಳು ಹಾಗೂ ಸಿನಿ ಪ್ರೇಮಿಗಳ ಮುಂದೆ ಬಂದು ಅವರನ್ನು ರಂಜಿಸುತ್ತಾರೆ. ಇದೀಗ ಪ್ರಿಯಾಂಕ ಅವರು ಮತ್ತೊಂದು ಹೊಸ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಬಾರಿ ಅವರು ಅಭಿಮಾನಿಗಳ ಮುಂದೆ ಶಿಕ್ಷಕಿಯಾಗಿ ಬರುತ್ತಿದ್ದಾರೆ. ಸಿನಿಮಾ ಶೀರ್ಷಿಕೆ ‘ಮಿಸ್ ನಂದಿನಿ’ ಎನ್ನಲಾಗಿದೆ.

ನಟಿ ಪ್ರಿಯಾಂಕ ಉಪೇಂದ್ರ ಅವರು ಈ ವಿಚಾರವಾಗಿ ಮಾದ್ಯಮವೊಂದರ ಮುಂದೆ ಮಾತನಾಡಿ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮಿಸ್ ನಂದಿನಿಯಾಗಿ ಬರುತ್ತಿರುವ ಪ್ರಿಯಾಂಕ ಅವರ ಹೊಸ ಸಿನಿಮಾ ಸರ್ಕಾರಿ ಶಾಲೆಯ ಸುತ್ತ ಸುತ್ತುವ ಕಥೆಯಾಗಿದ್ದು, ಈ ಸಿನಿಮಾ ಒಂದು ಸಾಮಾಜಿಕ ಸಂದೇಶವನ್ನು ನೀಡಲಿದೆ ಎನ್ನಲಾಗಿದೆ. ಗ್ರಾಮಗಳು ಹಾಗೂ ಸರ್ಕಾರಿ ಶಾಲೆಗಳು ಎಂದರೆ ನಮ್ಮಲ್ಲಿ ಅನೇಕರಿಗೆ ಬಹಳ ತಾತ್ಸಾರವಿದೆ. ಆದರೆ ಸರ್ಕಾರಿ ಶಾಲೆಗಳು ಯಾವುದಕ್ಕೂ ಕಮ್ಮಿ ಇಲ್ಲ ಎಂದು ಈ ಸಿನಿಮಾ ತೋರಿಸಲು ಹೊರಟಿದೆ ಎಂದಿದ್ದಾರೆ.

ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲವಿದೆ ಎಂದಿರುವ ಪ್ರಿಯಾಂಕ ಅವರು ಇದಕ್ಕಾಗಿ ಸಾಕಷ್ಟು ತಯಾರಿಯನ್ನು ನಡೆಸಿದ್ದು, ಗ್ರಾಮೀಣ ಪ್ರದೇಶದ ಮಕ್ಕಳೊಡನೆ ಒಡನಾಟ, ಅವರ ಸಂತೋಷ ಹಾಗೂ ದುಃಖದಲ್ಲಿ ಜೊತೆಯಾಗುವ ಶಿಕ್ಷಕಿಯಾಗಿ ಮಕ್ಕಳೊಡನೆ ಕಳೆಯುವ ಒಡನಾಟದ ಸಮಯಕ್ಕಾಗಿ ನಾನು ಬಹಳ ಕಾತುರಳಾಗಿದ್ದೇನೆ ಎಂದು ಅವರು ಹೊಸ ಸಿನಿಮಾದ ಬಗ್ಗೆ ತಮ್ಮ ಉತ್ಸುಕತೆಯನ್ನು ಹಂಚಿಕೊಂಡಿದ್ದಾರೆ.‌

ಶಿಕ್ಷಕಿಯಾಗಿ ನಟಿಸಲು ಅವಕಾಶ ದೊರೆತಿರುವುದು ನನ್ನ ಅದೃಷ್ಟ ಎಂದಿರುವ ಪ್ರಿಯಾಂಕ ಅವರು, ಶಿಕ್ಷಣ ಕ್ಷೇತ್ರದಲ್ಲಿ ಒಂದು ಸಂಚಲನವನ್ನು ಸೃಷ್ಟಿಸಲು ನಮ್ಮ ಚಿತ್ರ ತಂಡದ ಪ್ರಯತ್ನ ಇದು ಎಂದು ಹೇಳಿದ್ದಾರೆ. ಅಲ್ಲದೇ ಶಿಕ್ಷಕಿಯ ಪಾತ್ರ ಹೊಸದು ಆದರೆ ಶಿಕ್ಷಕಿಯ ಜವಾಬ್ದಾರಿ ಹೊಸತಲ್ಲ ಎಂದು ಹೇಳಿದ್ದು, ತಮ್ಮ ಕಾಲೇಜು ದಿನಗಳ ನಂತರ ಆರು ತಿಂಗಳು ಶಿಕ್ಷಕಿಯಾಗಿದ್ದ ವಿಚಾರವನ್ನು ಅವರು ಸ್ಮರಿಸಿಕೊಂಡಿದ್ದಾರೆ.

ಸ್ಪಷ್ಟವಾದ ಕನ್ನಡವನ್ನು ಸಹಾ ಅಭ್ಯಾಸ ಮಾಡುತ್ತಿರುವುದಾಗಿ ಪ್ರಿಯಾಂಕ ಅವರು ಹೇಳಿದ್ದು, ಶಿಕ್ಷಕಿಯಾಗಿ ಈ ಹಿಂದೆ ಮಾಡಿದ್ದ ಕೆಲಸ ಈಗ ಪಾತ್ರಕ್ಕೆ ಒಂದಷ್ಟು ನೆರವಾಗಲಿದೆ ಎಂದು ಹೇಳಿದ್ದಾರೆ. ನಟಿಯಾಗದಿದ್ದರೆ ನಾನು ಶಿಕ್ಷಕಿಯಾಗಿರುತ್ತಿದೆ ಎನ್ನುವ ಮಾತನ್ನು ಅವರು ಹೇಳಿದ್ದಾರೆ. ಶಿಕ್ಷಕಿ ಪಾತ್ರವನ್ನು ಮೈ ಮನ ತುಂಬಿಕೊಂಡು ಸಿದ್ಧರಾಗಿದ್ದು, ನವರಾತ್ರಿ ನಂತರ ಸಿ‌ನಿಮಾ ಚಿತ್ರೀಕರಣ ಆರಂಭವಾಗಲಿದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here