ವೇದಿಕೆ ಮೇಲೇ ನಟ ಅಭಿಜಿತ್ ಗೆ ಮರೆಯಲಾಗದ ಉಡುಗೊರೆ ನೀಡಿದ ಶಿವಣ್ಣ: ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ದೃಶ್ಯ

Entertainment Featured-Articles Movies News
55 Views

ಕನ್ನಡ ಚಿತ್ರರಂಗ ಕಂಡಂತಹ ಅತ್ಯುತ್ತಮ ನಟರಲ್ಲಿ ನಟ ಅಭಿಜಿತ್ ಅವರೂ ಒಬ್ಬರಾಗಿದ್ದಾರೆ. ತೊಂಬತ್ತರ ದಶಕದಲ್ಲಿ ಕನ್ನಡ ಸಿನಿಮಾ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದ ಇವರು, ನಾಯಕ ನಟನಾಗಿ, ಅನಂತರ ಪೋಷಕ ನಟನಾಗಿ ಮಿಂಚಿದ್ದರು. ಅಭಿಜಿತ್ ಅವರನ್ನು ಅಭಿಮಾನಿಸುವ ದೊಡ್ಡ ಅಭಿಮಾನಿಗಳ ಬಳಗವೂ ಇದೆ. ಸಿನಿಮಾ ರಂಗದಲ್ಲಿ ನಟ ಅಭಿಜಿತ್ ಅವರು ತಮ್ಮದೇ ಆದ ಛಾಪನ್ನು ಮೂಡಿಸಿರುವುದು ನಿಜವೇ ಆದರೂ, ಚಿತ್ರರಂಗದಲ್ಲಿ ಅವರು ದೊಡ್ಡ ಸ್ಟಾರ್ ನಟನಾಗಿ ಮಿಂಚುವ ಅವಕಾಶಗಳು ಅವರನ್ನು ಅರಸಿ ಬರಲಿಲ್ಲ, ಬಹಳ ಬೇಗ ಅವರು ಬೆಳ್ಳಿತೆರೆಯಿಂದ ವಿರಾಮ ಪಡೆದರೇನೋ ಎಂದು ಸಹಜವಾಗಿಯೇ ಅನಿಸುತ್ತದೆ. ಸದಭಿರುಚಿಯ ಸಿನಿಮಾಗಳಲ್ಲಿ ನಟಿಸಿ ಮನೆ ಮನೆ ಮಾತಾದವರು ನಟ ಅಭಿಜಿತ್.

ನಟ ಅಭಿಜಿತ್ ತಮ್ಮ ಸೆಕೆಂಡ್ ಇನ್ನಿಂಗ್ಸ್ ಅನ್ನು ಕಿರುತೆರೆಯಲ್ಲಿ ನಿರೂಪಕನಾಗಿ, ನಟನಾಗಿ ಆರಂಭಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಈ ಹಿಂದೆ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದ ಅಕ್ಷರ ಮಾಲೆ ಕಾರ್ಯಕ್ರಮವನ್ನು ಅಭಿಜಿತ್ ಅವರು ನಿರೂಪಣೆ ಮಾಡಿ ಕಿರುತೆರೆಯ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದರು. ನಟನೆಯ ಜೊತೆಗೆ ಹಾಡು ಹಾಡುವುದರಲ್ಲಿ ಸಹಾ ಅವರು ನಿಪುಣ ಎನ್ನುವುದರಲ್ಲಿ ಅನುಮಾನವಿಲ್ಲ. ಅಭಿಜಿತ್ ಅಗರು ಕಿರುತೆರೆಯ ಜನಪ್ರಿಯ ಸೀರಿಯಲ್ ಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುವ ಮೂಲಕ ಈಗ ಅವರು ಕಿರುತೆರೆಯಲ್ಲಿ ಜನಪ್ರಿಯ ನಟನಾಗಿ ಜನಮನ್ನಣೆ ಪಡೆದುಕೊಂಡಿದ್ದಾರೆ.

ಇತ್ತೀಚಿಗೆ ಕಿರುತೆರೆಯ ಖಾಸಗಿ ವಾಹಿನಿಯೊಂದರಲ್ಲಿ ಆರಂಭವಾಗಿರುವ ಜನಪ್ರಿಯ ಸೆಲೆಬ್ರಿಟಿ ಜೋಡಿಗಳ ರಿಯಾಲಿಟಿ ಶೋ ಜೋಡಿ ನಂಬರ್ ಒನ್ ನಲ್ಲಿ ತಮ್ಮ ಪತ್ನಿಯೊಂದಿಗೆ ನಟ ಅಭಿಜಿತ್ ಅವರು ಸ್ಪರ್ಧಿಯಾಗಿ ಭಾಗವಹಿಸಿ, ಜನರಿಗೆ ಅವರು ಇನ್ನಷ್ಟು ಹತ್ತಿರವಾಗಿದ್ದಾರೆ‌. ಇವೆಲ್ಲವುಗಳ ನಡುವೆ ಜೋಡಿ ನಂಬರ್ ಒನ್ ಮತ್ತು ಮತ್ತೊಂದು ಡ್ಯಾನ್ಸ್ ರಿಯಾಲಿಟಿ ಶೋ ಡಾನ್ಸ್ ಕರ್ನಾಟಕ ಡ್ಯಾನ್ಸ್ ಅನ್ನು ಇತ್ತೀಚಿಗೆ ಜೊತೆಯಾಗಿ ಮಹಾಸಂಗಮ ಎನ್ನುವಂತೆ ನಡೆಸಲಾಗಿದ್ದು, ಈ ವೇಳೆ ನಟ ಅಭಿಜಿತ್ ಅವರ ಡ್ಯಾನ್ಸ್ ನೋಡಿ ಹ್ಯಾಟ್ರಿಕ್ ಹೀರೋ ಶಿವಣ್ಣ ಹಾಗೂ ಇತರೆ ತೀರ್ಪುಗಾರರು ಸಹಾ ಅಚ್ಚರಿ ಪಟ್ಟಿದ್ದಾರೆ. ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ.

ನಟ ಅಭಿಜಿತ್ ಅವರು ನವ ಯುವಕನಂತೆ ಅದ್ಭುತ ಸ್ಟೆಪ್ ಗಳನ್ನು ಹಾಕುವುದನ್ನು ನೋಡಿ ನಟ ಶಿವರಾಜ್ ಕುಮಾರ್ ಹಾಗೂ ಪ್ರೇಮ್ ಅವರು ಎದ್ದು ನಿಂತು ಗೌರವ ನೀಡಿದ್ದಾರೆ. ಅಭಿಜಿತ್ ಅವರನ್ನು ಹಾಡಿ ಹೊಗಳಿದ್ದಾರೆ. ಈ ವೇಳೆ ಅಭಿಜಿತ್ ಅವರ ಪತ್ನಿ ತಮ್ಮ ಗಂಡ ಸಿನಿಮಾ ರಂಗದಿಂದ ದೂರಾದ ವಿಚಾರದ ಬಗ್ಗೆ, ಅವರಿಗೆ ಸರಿಯಾದ ಪ್ರೋತ್ಸಾಹ ಸಿಗಲಿಲ್ಲ ಎನ್ನುವ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಆಗ ವೇದಿಕೆಯ ಮೇಲೆ ಬಂದ ಶಿವಣ್ಣ ತಮ್ಮ ಮುಂದಿನ ಸಿನಿಮಾದಲ್ಲಿ ಅಭಿಜಿತ್ ಅವರು ಇದ್ದೇ ಇರುತ್ತಾರೆ, ಅವರಿಗಾಗಿ ಒಂದು ಪಾತ್ರ ಇರುತ್ತದೆ ಎನ್ನುವ ಭರವಸೆಯನ್ನು ನೀಡುವ ಮೂಲಕ ಅಭಿಜಿತ್ ಅವರಿಗೆ ಮರೆಯಲಾಗದ ಉಡುಗೊರೆಯೊಂದನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *