ವೃತ್ತಿ ರಂಗಭೂಮಿ ಕಡೆಗೆ ಹೊರಟ ಅಗ್ನಿಸಾಕ್ಷಿ ನಟಿ ಚಂದ್ರಿಕಾ: ನಟಿಯ ನಿರ್ಧಾರದ ಹಿಂದಿನ ಕಾರಣ ನಿಜಕ್ಕೂ ಗ್ರೇಟ್

Entertainment Featured-Articles Movies News

ಹಿಂದೊಮ್ಮೆ ಕನ್ನಡ ಸಿನಿ ರಂಗ ಎಂದರೆ ಅಲ್ಲಿನ ಬಹಳಷ್ಟು ಜನ ಕಲಾವಿದರು ವೃತ್ತಿ ರಂಗಭೂಮಿಯಿಂದ ಬಂದವರಾಗಿದ್ದರು. ಆದರೆ ವೃತ್ತಿ ರಂಗಭೂಮಿಯಿಂದ ಬಂದು ಸಿನಿಮಾದಲ್ಲಿ ಹೆಸರನ್ನು ಪಡೆದ ಮೇಲೆಯೂ ಅನೇಕರು ರಂಗಭೂಮಿಯೊಡನೆ ಇದ್ದ ನಂಟನ್ನು ಮರೆತಿರಲಿಲ್ಲ. ಆದರೆ ಇಂದು ಕಾಲ ಬದಲಾಗಿದೆ. ಅನೇಕರು ವೃತ್ತಿ ರಂಗಭೂಮಿಯಿಂದ ಬಂದು, ಸಿನಿಮಾ, ಕಿರುತೆರೆಯಲ್ಲಿ ಹೆಸರನ್ನು ಮಾಡಿದ ಮೇಲೆ ಮತ್ತೆ ರಂಗಭೂಮಿಯ ಕಡೆ ಮುಖ ಮಾಡುವುದು ಅಪರೂಪ. ಅಲ್ಲದೇ ರಂಗಭೂಮಿ ಕಲಾವಿದರು ಎನ್ನುವುದನ್ನೇ ಮರೆತು ಬಿಡುವಂತಹ ಉದಾಹರಣೆಗಳು ಸಹಾ ಉಂಟು.

ಆದರೆ ಇವೆಲ್ಲವುಗಳಿಗಿಂತ ಭಿನ್ನವಾಗಿ ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿರು ನಟಿ, ಅಗ್ನಿಸಾಕ್ಷಿ ಮತ್ತು ಸತ್ಯ ಸೀರಿಯಲ್ ಗಳ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುವ, ತೆಲುಗು ಕಿರುತೆರೆಯಲ್ಲಿ ಕೂಡಾ ಈಗಾಗಲೇ ಹೆಸರು ಮಾಡಿರುವ ನಟಿ ಚಂದ್ರಿಕಾ ಅವರು ರಂಗಭೂಮಿಯ ಕಡೆಗೆ ಒಲವನ್ನು ತೋರಿಸುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಹೌದು, ನಟಿ ಚಂದ್ರಿಕಾ ಅವರು ಉತ್ತರ ಕರ್ನಾಟಕದಲ್ಲಿ ಮನೆ ಮಾತಾಗಿರುವ ಖಾನಾವಳಿ ಚೆನ್ನಿ ನಾಟಕದಲ್ಲಿ ಪ್ರಮುಖ ಪಾತ್ರ ಪೋಷಿಸುತ್ತಿದ್ದಾರೆ.

ರಾಣೆಬೆನ್ನೂರಿನ ಮಂಜುನಾಥ ನಾಟ್ಯ ಸಂಘವು ರೋಣ ಪಟ್ಟಣದ ಸಾಯಿ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಿರುವ ಖಾನಾವಳಿ ಚೆನ್ನಿ ನಾಟಕವು ಇದೇ‌ ಜೂನ್ 11 ಮತ್ತು 12 ರಂದು ಪ್ರದರ್ಶನಗಳನ್ನು ಕಾಣಲಿವೆ. ವಿಶೇಷ ಏನೆಂದರೆ ಈ ನಾಟಕವನ್ನು ಈ ನಾಟಕದ ಹಾಸ್ಯ ಪಾತ್ರಧಾರಿ ಶ್ರೀದೇವಿ ಅವರ ಮದುವೆ ಸಹಾಯಾರ್ಥವಾಗಿ ನಡೆಸಲಾಗುತ್ತಿದ್ದು ಇದೇ ಕಾರಣದಿಂದ ಚಂದ್ರಿಕಾ ಅವರು ಪ್ರಮುಖ ಪಾತ್ರವನ್ನು ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಖಾನಾವಳಿ ಚೆನ್ನಿ ನಾಟಕದಲ್ಲಿ ಹಾಸ್ಯದ ಜೊತೆ ಜೊತೆಗೆ ಡಬಲ್ ಮೀನಿಂಗ್ ಡೈಲಾಗ್ ಗಳು ಸಹಾ ಇವೆ. ಇಡೀ ನಾಟಕವನ್ನು ಚೆನ್ನಿಯ ಪಾತ್ರದ ಸುತ್ತಲೂ ನಡೆಯುವ ಘಟನೆಗಳ ಹಿನ್ನೆಲೆಯಲ್ಲಿ ಹೆಣೆಯಲಾಗಿದೆ. ಉತ್ತರ ಕರ್ನಾಟಕದಲ್ಲಿ ಈ ನಾಟಕ ಈಗಾಗಲೇ ಸಾವಿರಾರು ಯಶಸ್ವಿ ಪ್ರಯೋಗಗಳನ್ನು ಕಂಡಿದೆ. ಹೆಸರಾಂತ ಕಲಾವಿದೆಯರು ಚೆನ್ನಿ ಪಾತ್ರವನ್ನು ಮಾಡುವ ಮೂಲಕ ಈಗಾಗಲೇ ಹೆಸರು ಮಾಡಿದ್ದಾರೆ. ಅಲ್ಲದೇ ಪ್ರತಿ ಬಾರಿಯೂ ಹೊಸ ಪ್ರಯೋಗ ಜನರ ಮೆಚ್ಚುಗೆಯನ್ನು ಪಡೆದಿದೆ ಎನ್ನಲಾಗಿದೆ.

Leave a Reply

Your email address will not be published.