ವೃಕ್ಷ ಮಾತೆ, ಸಾಲು ಮರದ ತಿಮ್ಮಕ್ಕನ ಅರಸಿ ಬಂದ ಅಂತರ್ರಾಷ್ಟ್ರೀಯ ಮಟ್ಟದ ಗೌರವ: ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆ ಪಡುವ ವಿಷಯ

Entertainment Featured-Articles News
49 Views

ಪರಿಸರವಾದಿ, ಪರಿಸರ ಪ್ರೇಮಿ, ವೃಕ್ಷ ಮಾತೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಆಗಿರುವಂತಹ ಶ್ರೀಯುತ ಸಾಲುಮರದ ತಿಮ್ಮಕ್ಕ ನವರ ಪರಿಚಯ ಇಲ್ಲದವರು ಕರ್ನಾಟಕದಲ್ಲಿ ಯಾರೂ ಇಲ್ಲ ಎಂದು ಹೇಳಬಹುದು. ಪರಿಸರ ಸಂರಕ್ಷಣೆಗೆ ಜನರು ಕೇವಲ ದನಿ ಎತ್ತಿ ಸುಮ್ಮನಾಗುವ ಬೂಟಾಟಿಕೆ ಹೋರಾಟಗಾರರ ನಡುವೆ, ಕಳೆದ ಕೆಲವು ದಶಕಗಳಿಂದಲೂ ಮರಗಳನ್ನು ಸಂರಕ್ಷಿಸುತ್ತಿರುವ ಈ ತಾಯಿ ನಿಜವಾದ ಪರಿಸರ ಸಂರಕ್ಷಕಿಯಾಗಿದ್ದಾರೆ. ಸಾಲುಮರದ ತಿಮ್ಮಕ್ಕ ಅವರ ಸಾಧನೆ ಹಾಗೂ ಕೀರ್ತಿ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ವೃಕ್ಷ ಮಾತೆಯಾಗಿ ಅವರು ದೇಶದಾದ್ಯಂತ ಹೆಸರನ್ನು ಮಾಡಿದ್ದಾರೆ.

ಪರಿಸರ ಸಂರಕ್ಷಣೆಯ ವಿಚಾರ ಬಂದಾಗ ಅಲ್ಲಿ ಸಾಲುಮರದ ತಿಮ್ಮಕ್ಕನವರ ಹೆಸರು ಸದಾ ಇದ್ದೇ ಇರುತ್ತದೆ. ಮರಗಳನ್ನು ಮಕ್ಕಳಂತೆ ಸಾಕಿ ಬೆಳೆಸಿದ ಇವರನ್ನು ಈಗಾಗಲೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪುರಸ್ಕಾರಗಳು ಆರಿಸಿ ಬಂದಿರುವುದು ಅವರ ಮಾಡುತ್ತಿರುವ ಪರಿಸರ ಸಂರಕ್ಷಣೆಯ ಕಾರ್ಯವು ಎಷ್ಟು ಜನರನ್ನು ತಲುಪಿದೆ ಎನ್ನುವುದಕ್ಕೆ ಒಂದು ಸಾಕ್ಷಿಯಾಗಿದೆ.‌

ಹೀಗೆ ಹತ್ತು ಹಲವು ಪ್ರಶಸ್ತಿ ಪಡೆದಿರುವ ಈ ತಾಯಿಯ ಮುಡಿಗೆ ಮತ್ತೊಂದು ಪ್ರಶಸ್ತಿಯ ಗರಿ ಈಗ ಸೇರಿದೆ. ಹೌದು, ತಿಮ್ಮಕ್ಕನವರು ಪಡೆದಿರುವ ಹಲವು ಪ್ರಶಸ್ತಿಗಳ ಸಾಲಿಗೆ ಮತ್ತೊಂದು ಪ್ರಶಸ್ತಿಯ ಗೌರವ ಸಂದಿದೆ. ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರನ್ನು ಲಂಡನ್ ನ ಪ್ರತಿಷ್ಠಿತ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಗೌರವಿಸಿದೆ. ಅವರಿಗೆ ಈ ಗೌರವವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಧಾನ ಮಾಡಿದ್ದಾರೆ.

ಸುಮಾರು 80 ವರ್ಷಗಳ ಕಾಲ ಪರಿಸರ ಸಂರಕ್ಷಣೆಯ ಘನ ಉದ್ದೇಶದಿಂದ ಸಾಲುಮರದ ತಿಮ್ಮಕ್ಕ ಮಾಡಿರುವಂತಹ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಬುಕ್ ಅಫ್ ರೆಕಾರ್ಡ್ಸ್ ಸಾಲುಮರದ ತಿಮ್ಮಕ್ಕ ನವರಿಗೆ ಇಂತಹದೊಂದು ಗೌರವ ನೀಡಿದೆ. ವೃಕ್ಷ ಮಾತೆಯನ್ನು ಗೌರವಿಸಿದ ಈ ಸಮಾರಂಭದಲ್ಲಿ ಕೆಲವು ಗಣ್ಯರು ಉಪಸ್ಥಿತರಿದ್ದು, ಈ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ.

ಈ ಸಮಾರಂಭದಲ್ಲಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನ ಅಧ್ಯಕ್ಷ, ಸುಪ್ರೀಂ ಕೋರ್ಟ್ ವಕೀಲ ಸಂತೋಷ್ ಶುಕ್ಲಾ, ಆಲ್ಮಾ ಟುಡೇ ಸಂಪಾದಕಿ ಸಚಿತಾ ಶುಕ್ಲಾ, ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನ ಕರ್ನಾಟಕ ವಿಭಾಗದ ಅಧ್ಯಕ್ಷೆ ಶಿಖಾ ಶರ್ಮಾ ಮುಂತಾದವರು ಉಪಸ್ಥಿತರಿದ್ದರು. ಸಾಲುಮರದ ತಿಮ್ಮಕ್ಕ ನವರ ನಿಸ್ವಾರ್ಥ ಸೇವೆಗೆ ಇಂತಹುದೊಂದು ಗೌರವ ಸಿಕ್ಕಿರುವುದು ಕನ್ನಡ ನಾಡಿದ ಜನತೆಗೆ ಹೆಮ್ಮೆಯ ವಿಷಯವಾಗಿದೆ.

Leave a Reply

Your email address will not be published. Required fields are marked *