ಅಂತರ್ಜಾಲದಲ್ಲಿ ಪ್ರತಿದಿನ ಹಲವಾರು ವಿಡಿಯೋಗಳು ವೈರಲ್ ಆಗುತ್ತಿವೆ. ಇವುಗಳಲ್ಲಿ ಕೆಲವು ವಿಡಿಯೋಗಳು ಜನರ ವಿಶೇಷ ಗಮನವನ್ನು ಸೆಳೆಯುವ ಜೊತೆಗೆ ಅವರ ಮನಸ್ಸಿನ ಮೇಲೆ ಸಹಾ ಪರಿಣಾಮವನ್ನುಂಟು ಮಾಡುತ್ತದೆ. ಪ್ರಸ್ತುತ ಜೊಮ್ಯಾಟೋ ಡೆಲಿವರಿ ಬಾಯ್ ಒಬ್ಬರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋ ನೋಡಿದ ಮೇಲೆ ಆ ವ್ಯಕ್ತಿಯ ಆತ್ಮಸ್ಥೈರ್ಯಕ್ಕೆ ನೀವು ಸಹಾ ಸೆಲ್ಯೂಟ್ ಹೊಡೆಯುವುದರಲ್ಲಿ ಸಂಶಯವಿಲ್ಲ ಎನ್ನಬಹುದು. ಇದು ನಿಜಕ್ಕೂ ಒಂದು ಸ್ಪೂರ್ತಿದಾಯಕ ಮತ್ತು ಪ್ರೇರಣೆಯ ವೀಡಿಯೋ ಆಗಿದೆ.
ಈ ವೀಡಿಯೋದಲ್ಲಿ ಅಂಗವಿಕಲನಾಗಿದ್ದರೂ ಸಹಾ ತನ್ನ ಪರಿಸ್ಥಿತಿಗೆ ಮರುಗಿ ಕೂರದ ವ್ಯಕ್ತಿಯೊಬ್ಬರು, ತನ್ನ ಚೈತನ್ಯವನ್ನು ಕಳೆದುಕೊಳ್ಳದೇ ದುಡಿದು ತಿನ್ನಲು ಮುಂದಾಗಿದ್ದಾರೆ. ಅವರು ತಮ್ಮ ಗಾಲಿಕುರ್ಚಿಯಲ್ಲಿ ಆಹಾರವನ್ನು ಮನೆ-ಮನೆಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ ಹಾಗೂ ಸ್ವಾವಲಂಬಿ ಜೀವನ ನಡೆಸಿದ್ದಾರೆ. ಹಿಂದೊಮ್ಮೆ ಈ ವ್ಯಕ್ತಿಗೆ ಅನುಕಂಪ ತೋರಿದವರೂ ಸಹಾ ಇಂದು ಆ ವ್ಯಕ್ತಿ ತಮ್ಮ ಕಾಲ ಮೇಲೆ ನಿಂತು ತಮ್ಮ ಹೊಣೆಗಾರಿಕೆ ನಿಭಾಯಿಸುತ್ತಿರುವುದನ್ನು ನೋಡಿ ಮೆಚ್ಚುಗೆ ನೀಡುವಂತಾಗಿದೆ.
ವಿಶೇಷ ಚೇತನ ವ್ಯಕ್ತಿಯು ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವ ಈ ವಿಡಿಯೋ ಎಲ್ಲರ ಮನ ಮುಟ್ಟಿದೆ ಮತ್ತು ಅನೇಕರು ಇದನ್ನು ನೋಡಿ ಭಾವುಕರಾಗಿದ್ದಾರೆ. ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಜೊಮಾಟೊ ಡೆಲಿವರಿ ಬಾಯ್ ಡಿಲೆವರಿ ನೀಡಲು ಹೋಗಿಬೇಕಾದ ಸ್ಥಳಕ್ಕೆ ತಲುಪಲು ದಾರಿಯಲ್ಲಿ ಗಾಲಿಕುರ್ಚಿಯಲ್ಲಿ ಕುಳಿತಿರುವುದನ್ನು ನೀವು ನೋಡಬಹುದಾಗಿದ್ದು, ಗಾಲಿಕುರ್ಚಿಗೆ ಮೋಟಾರ್ ಅಳವಡಿಸಿರುವುದರಿಂದ, ಅವರು ಆರಾಮವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳಲು ಸಾಧ್ಯವಾಗಿದೆ.
ಇಲ್ಲಿಯವರೆಗೆ ಕೇವಲ ಬೈಸಿಕಲ್ ಮತ್ತು ಬೈಕ್‌ಗಳಲ್ಲಿ ಮಾತ್ರ ಆಹಾರ ವಿತರಣೆ ನಡೆಯುತ್ತಿತ್ತು. ಆದರೆ ಈ ವ್ಹೀಲ್ ಚೇರ್ ಫುಡ್ ಡೆಲಿವರಿ ಏಜೆಂಟ್ ಅನ್ನು ನೋಡಿದ ಜನ ಭಾವುಕರಾಗುತ್ತಿದ್ದಾರೆ ಮತ್ತು ಈ ಡೆಲಿವರಿ ಬಾಯ್ ಬಗ್ಗೆ ಬಹಳಷ್ಟು ಜನರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಈ ವಿಡಿಯೋ ವಿವಿಧ ಸಾಮಾಜಿಕ ಜಾಲತಾಣಗಳ ವೇದಿಕೆಗಳಲ್ಲಿ ವೈರಲ್ ಆಗುತ್ತಾ ಸಾಗಿದೆ. ಈ ವ್ಯಕ್ತಿಯ ಸ್ವಾಭಿಮಾನಕ್ಕೆ ಜನ ಗೌರವವನ್ನು ನೀಡುತ್ತಿದ್ದಾರೆ.
ಈ ವೀಡಿಯೊವನ್ನು ಇನ್ಸ್ಟಾಗ್ರಾಂ ನಲ್ಲಿ grooming_bulls_ ಎನ್ನುವ ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ವೀಡಿಯೋ ಶೇರ್ ಮಾಡಿಕೊಂಡ ನಂತರ ಅದರ ಶೀರ್ಷಿಕೆಯಲ್ಲಿ ಈ ವ್ಯಕ್ತಿ ಸ್ಫೂರ್ತಿಯ ಜೀವಂತ ಪುರಾವೆ ಎಂದು ಬರೆಯಕಾಗಿದೆ. ಅಪ್ಲೋಡ್ ಮಾಡಿದ ನಂತರ, ವೀಡಿಯೊವನ್ನು 1 ಲಕ್ಷ 33 ಸಾವಿರಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ವೀಕ್ಷಣೆ ಮಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಮೆಚ್ಚುಗೆಯನ್ನು ನೀಡುವವರ ಸಂಖ್ಯೆ ಸಹಾ ಹೆಚ್ಚಾಗುತ್ತಿದೆ.