ವಿಸ್ಮಯ ಹುಟ್ಟಿಸುವ ಮೀನಿನ ಪತ್ತೆ: ಅನೇಕ ರಹಸ್ಯಗಳು ಅನಾವರಣ ಆಗಲಿವೆ ಎಂದ ವಿಜ್ಞಾನಿಗಳು!!
ಸಮುದ್ರ ಹಾಗೂ ಸಾಗರಗಳು ಜೀವ ವೈವಿದ್ಯತೆಗಳ ಆಗರಗಳು, ಸಾಗರ ಗರ್ಭದಲ್ಲಿ ಏನೆಲ್ಲಾ ವಿಶೇಷಗಳು ಅಡಗಿವೆ ಎನ್ನುವುದನ್ನು ಪತ್ತೆ ಹಚ್ಚುವುದು ಸಾಧ್ಯವೇ ಇಲ್ಲ. ನ್ಯೂಜಿಲ್ಯಾಂಡ್ ನ ವಿಜ್ಞಾನಿಗಳು ಸಮುದ್ರದ ಆಳದಿಂದ ಒಂದು ದುರ್ಲಭ ಜಾತಿಯ ಮೀನನ್ನು ಪತ್ತೆ ಹಚ್ಚಿದ್ದಾರೆ. ಈ ವಿಶೇಷವಾದ ಮೀನನ್ನು ಬೇಬಿ ಘೋಸ್ಟ್ ಶಾರ್ಕ್ ಎನ್ನುವ ಹೆಸರಿನಿಂದ ಕರೆಯಲಾಗುತ್ತಿದೆ. ಈ ಮೀನು ಚಿಮೇರಾ ಪ್ರಬೇಧದ ಮೀನು ಎಂದು ಕೂಡಾ ಕರೆಯಲ್ಪಡುತ್ತದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಇದು ನಿಜವಾದ ಶಾರ್ಕ್ ಅಲ್ಲ, ಶಾರ್ಕ್ ಪ್ರಬೇಧದ ಒಂದು ಸಂಬಂಧಿಯಷ್ಟೇ ಎನ್ನಲಾಗಿದೆ.
ಬೇಬಿ ಘೋಸ್ಟ್ ಶಾರ್ಕ್ ಗಳು ಸಾಮಾನ್ಯವಾಗಿ ಸಮುದ್ರದ ತಳದಲ್ಲಿ ಇಡಲಾದ ಮೊಟ್ಟೆಗಳಿಂದ ಹೊರ ಬರುತ್ತವೆ. ಆದ್ದರಿಂದಲೇ ಅವು ಸಮುದ್ರದಲ್ಲಿ ಸಿಗುವ ದುರ್ಲಭ ಜಾತಿಯ ಮೀನು ಎನಿಸಿಕೊಂಡಿದೆ. ಬಿಬಿಸಿ ವರದಿಯ ಪ್ರಕಾರ ಈ ಬೇಬಿ ಘೋಸ್ಟ್ ಶಾರ್ಕ್ ಅನ್ನು ನ್ಯೂಜಿಲೆಂಡ್ ನ ದಕ್ಷಿಣ ದ್ವೀಪದ ಭೂಮಿಯಿಂದ ಕೆಳಗೆ ಸುಮಾರು 1.2 ಕಿಮೀ ಆಳದಲ್ಲಿ ಪತ್ತೆ ಹಚ್ಚಲಾಗಿದೆ ಎನ್ನಲಾಗಿದೆ. ಇದರ ಪತ್ತೆಯಲ್ಲಿ ತೊಡಗಿದ್ದ ಡಾ. ಬ್ರಿಟ್ ಫಾನೂಚಿ ಅವರು ಆಳ ಸಾಗರದಲ್ಲಿ ಜೀವಿಸುವ ಜಲಚರಗಳನ್ನು ಪತ್ತೆ ಹಚ್ಚುವುದು ಬಹಳ ಕಠಿಣ ಎಂದಿದ್ದಾರೆ.
ವಿಶೇಷವಾಗಿ ಆಳ ಸಾಗರದಲ್ಲಿ ಘೋಸ್ಟ್ ಶಾರ್ಕ್ ಗಳನ್ನು ಪತ್ತೆ ಹಚ್ಚುವುದು ಬಲು ಕಠಿಣ, ಅನೇಕ ಸಂದರ್ಭಗಳಲ್ಲಿ ಅವುಗಳನ್ನು ಕಣ್ಣಿನಿಂದ ನೋಡಲು ಕೂಡಾ ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವಾಟರ್ ಅಂಡ್ ಅಟ್ಮೋಸ್ಪೆರಿಕ್ ರೀಸರ್ಚ್ ವಿಜ್ಞಾನಿಗಳ ಪ್ರಕಾರ ಘೋಸ್ಟ್ ಶಾರ್ಕ್ ನ ಈ ಮರಿ ಕೆಲವೇ ದಿನಗಳ ಹಿಂದೆಯಷ್ಟೇ ಮೊಟ್ಟೆಯಿಂದ ಹೊರಗೆ ಬಂದಿದೆ ಎನ್ನಲಾಗಿದೆ. ಅದರ ಹೊಟ್ಟೆಯಲ್ಲಿ ಮೊಟ್ಟೆಯ ಅಂಶಗಳು ಇನ್ನೂ ಇರುವುದರಿಂದ ಅದರ ಜನ್ಮ ಕೆಲವೇ ದಿನಗಳ ಹಿಂದೆ ಆಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನು ಈ ಮೀನನ್ನು ಪತ್ತೆ ಹಚ್ಚಿರುವ ತಂಡವು ಈ ಮೀನಿನ ಮರಿಯಿಂದ ಘೋಸ್ಟ್ ಶಾರ್ಕ್ ಪ್ರಬೇಧದ ಕುರಿತಾಗಿ ಮಹತ್ವದ ಸಂಶೋಧನೆಗಳು , ಅಧ್ಯಯನಗಳು ಸುಲಭವಾಗಲಿದೆ ಎಂದಿದ್ದು, ಈ ಮೀನಿನ ಉಗಮ, ಬೆಳವಣಿಗೆ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಹೆಚ್ಚು ವಿಷಯಗಳು ಹೊರ ಬರಲು ಇದರಿಂದ ಸಾಧ್ಯವಾಗುವುದು ಎಂದಿದ್ದಾರೆ. ವಿಜ್ಞಾನಿಗಳು ಈ ಮೀನು ಬಾಲ್ಯದಲ್ಲಿ ಬೇರೆ ಬೇರೆ ಜಾಗಗಳಲ್ಲಿ ಬದುಕುವ, ಬೇರೆ ಬೇರೆ ರೀತಿಯ ಆಹಾರವನ್ನು ಸೇವಿಸುವ ಸಾಮರ್ಥ್ಯ ಹೊಂದಿದೆ ಎಂದು ಸಹಾ ಹೇಳಿದ್ದಾರೆ.