ಒಂದು ಸಣ್ಣ ಭೂಮಿಯ ತುಂಡಿಗಾಗಿ ದೇಶ ದೇಶಗಳು ಸಮರ ಸಾರಿ ರಕ್ತ ಹರಿಸುವುದನ್ನು ನಾವು ಕೇಳಿದ್ದೇವೆ. ಆದರೆ ಒಂದು ಭೂಪ್ರದೇಶದ ಮೇಲೆ ವಿಶ್ವದ ಯಾವುದೇ ದೇಶ ಕೂಡಾ ಅಧಿಕಾರವನ್ನು ಸ್ಥಾಪಿಸಲು, ಆ ಪ್ರದೇಶ ತಮ್ಮದು ಎಂದು ಹೇಳಲು ಹೆದರುವುದು ಮಾತ್ರವೇ ಅಲ್ಲದೇ ಆ ವಿಷಯದ ಕಡೆಗೆ ಆಸಕ್ತಿಯನ್ನು ಸಹಾ ತೋರಿಸುತ್ತಿಲ್ಲ ಎಂದರೆ ನಂಬೋದಿಕ್ಕೆ ಕಷ್ಟ ಆಗಬಹುದು. ಹಾಗಾದರೆ ಎಲ್ಲಿದೆ ಆ ಪ್ರದೇಶ, ಯಾಕೆ ಯಾವುದೇ ದೇಶ ಈ ಪ್ರದೇಶದ ಕಡೆ ಆಸಕ್ತಿ ತೋರಿಸುತ್ತಿಲ್ಲ ಎನ್ನುವ ಬಹಳ ಕುತೂಹಲಕಾರಿ ವಿಷಯವನ್ನು ತಿಳಿಯೋಣ ಬನ್ನಿ.
ಈ ವಿಶೇಷವಾದ ಜಾಗದ ಹೆಸರು ಬೀರ್ ತವಿಲ್. ಈಜಿಪ್ಟ್ ಮತ್ತು ಸೂಡಾನ್ ನ ಗಡಿಯಲ್ಲಿ ಇರುವ ಈ ಭೂಪ್ರದೇಶವು 2060 ಸ್ಕ್ವೇರ್ ಕಿಲೋಮೀಟರ್ ವ್ಯಾಪ್ತಿಯಲ್ಲಿ ತಮ್ಮ ವಿಸ್ತಾರವನ್ನು ಹೊಂದಿದೆ. ಇದುವರೆಗೆ ಯಾವುದೇ ದೇಶವೂ ಕೂಡಾ ಈ ಪ್ರದೇಶದ ಮೇಲೆ ಅಧಿಕಾರವನ್ನು ಸ್ಥಾಪಿಸಿಲ್ಲ. 1899 ರಲ್ಲಿ ಯುನೈಟೆಡ್ ಕಿಂಗ್ಡಮ್ ಸೂಡಾನ್ ಮತ್ತು ಈಜಿಪ್ಟಿನ ನಡುವೆ ಗಡಿ ನಿರ್ಧಾರ ಮಾಡಿದಾಗಲೂ ಈ ಎರಡೂ ದೇಶಗಳಲ್ಲಿ ಯಾವುದೂ ಕೂಡಾ ಈ ಪ್ರದೇಶದ ಮೇಲೆ ತನ್ನ ಹಕ್ಕು ಸ್ಥಾಪನೆ ಮಾಡಲಿಲ್ಲ.
ಹೀಗೆ ಆ ದೇಶಗಳು ನಿರ್ಧರಿಸಲು ಪ್ರಮುಖ ಕಾರಣ ಈ ಪ್ರದೇಶದ ಪರಿಸ್ಥಿತಿ ಎಂದರೆ ತಪ್ಪಲ್ಲ. ಇದು ಕೆಂಪು ಸಮುದ್ರದ ಬಳಿ ಇರುವಂತಹ ಒಂದು ಮರುಭೂಮಿ ಪ್ರದೇಶವಾಗಿದೆ. ಇಲ್ಲಿ ಬಹಳ ತೀವ್ರವಾದ ಒಣ ಹಾಗೂ ಶುಷ್ಕ ಗಾಳಿಯು ಬೀಸುತ್ತದೆ. ದೂರ ದೂರದವರೆಗೂ ನೀರು ಅಥವಾ ವನ ಸಂಪತ್ತಿನ ಸುಳಿವು ಕೂಡಾ ಕಾಣುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇಲ್ಲಿ ಜನರು ಜೀವನ ಮಾಡುವುದು ಅಸಾಧ್ಯದ ಮಾತು ಎನ್ನಬಹುದು. ಕೆಲವರು ಈ ಮರಳುಗಾಡಿನಲ್ಲಿ ತೈಲ ಹಾಗೂ ಚಿನ್ನದ ನಿಕ್ಷೇಪಗಳು ಇವೆ ಎನ್ನುತ್ತಾರೆ.
ಇದರ ಹೊರತಾಗಿಯೂ ಈ ಪ್ರದೇಶದ ಮೇಲೆ ಯಾವ ದೇಶಕ್ಕೂ ಆಸಕ್ತಿಯಿಲ್ಲ. 2017 ರಲ್ಲಿ ಇಂಧೋರ್ ನ ನಿವಾಸಿಯಾದ ಭಾರತೀಯ ವ್ಯಕ್ತಿ ಈ ಪ್ರದೇಶವನ್ನು ತಲುಪಿ ತಾನೇ ಅದರ ರಾಜನೆಂದು, ಆ ಭೂ ಪ್ರದೇಶಕ್ಕೆ ಕಿಂಗ್ಡಮ್ ಆಫ್ ದೀಕ್ಷಿತ್ ಎನ್ನುವ ಹೆಸರನ್ನು ಕೂಡಾ ಇಟ್ಟ. ಫೋಟೋಗಳನ್ನು ಹಂಚಿಕೊಂಡಅದರ ಬಗ್ಗೆ ವೆಬ್ಸೈಟ್ ತೆರೆದು ಜನರಿಗೆ ಹೂಡಿಕೆ ಮಾಡಲು ಕೋರಿದ. ಆದರೆ ಆತನೇ ಬಹಳ ದಿನ ಅಲ್ಲಿ ಉಳಿಯಲಿಲ್ಲ. ಅಲ್ಲಿಂದ ವಾಪಸ್ಸು ಬಂದ ಆತ ಮತ್ತೆ ಅತ್ತ ತಲೆ ಹಾಕಲೇ ಇಲ್ಲ.
ಅದಕ್ಕೂ ಮೊದಲು ಅಮೆರಿಕಾ ಹಾಗೂ ರಷ್ಯಾದ ಕೆಲವು ವ್ಯಕ್ತಿಗಳು ಸಹಾ ಇದೇ ರೀತಿ ಈ ಪ್ರದೇಶದ ಮೇಲೆ ತಮ್ಮ ಹಕ್ಕನ್ನು ಘೋಷಣೆ ಮಾಡಿದ್ದರು. ಆದರೆ ಅವರು ಸಹಾ ಅಲ್ಲಿ ಹೆಚ್ಚು ದಿನ ಉಳಿಯದೇ ತಮ್ಮ ತಮ್ಮ ದೇಶಗಳಿಗೆ ಮರಳಿ ಹೋದರು ಎನ್ನಲಾಗಿದೆ. ಬೀರ್ ತವಿಲ್ ಇಂದಿಗೂ ಕೂಡಾ ಯಾರ ಅಧೀನಕ್ಕೂ ಒಳಪಟ್ಟಿಲ್ಲ. ಒಂದು ವೇಳೆ ನೀವು ಇಷ್ಟಪಟ್ಟರೆ ಅಲ್ಲಿಗೆ ಹೋಗಿ ನಿಮ್ಮ ಅಧಿಕಾರವನ್ನು ಸ್ಥಾಪಿಸಬಹುದಾಗಿದೆ.