ವಿಜಯ್ ಸೇತುಪತಿ ನಟನೆಯ ಸಿನಿಮಾ ಮೇಲೆ ದೂರು: ದೂರು ನೀಡಿದ್ದು ಸಂಗೀತ ನಿರ್ದೇಶಕ ಇಳಯರಾಜ

Entertainment Featured-Articles News
78 Views

ಭಾರತೀಯ ಸಿನಿಮಾ ರಂಗದಲ್ಲಿ ತನ್ನದೇ ಆದ ವಿಶೇಷ ಸ್ಥಾನವನ್ನು ಪಡೆದಿರುವ ಸಂಗೀತ ನಿರ್ದೇಶಕ ರಲ್ಲಿ ಇಳಯರಾಜ ಕೂಡಾ ಒಬ್ಬರು. ಅವರ ಸ್ವರ ಸಂಯೋಜನೆಯಲ್ಲಿ ಅದೆಷ್ಟೋ ಇಂಪಾದ ಹಾಡುಗಳು ಮೂಡಿ ಬಂದಿವೆ. ಮೆಲೋಡಿ ಹಾಡುಗಳ ವಿಷಯ ಬಂದಾಗ ಸಂಗೀತ ಪ್ರಿಯರು ಇಳಯರಾಜ ಅವರ ಸಂಗೀತ ನಿರ್ದೇಶನದ ಹಾಡುಗಳನ್ನು ನೆನಪಿಸಿಕೊಳ್ಳುವುದು ಉಂಟು. ಈಗ ಇದೇ ಹಿರಿಯ, ಜನಪ್ರಿಯ ಸಂಗೀತ ನಿರ್ದೇಶಕ ತಮಿಳಿನ ಸ್ಟಾರ್ ನಟ ವಿಜಯ್ ಸೇತುಪತಿ ನಟಿಸುತ್ತಿರುವ ಸಿನಿಮಾ ಮೇಲೆ ದೂರನ್ನು ದಾಖಲಿಸಿದ್ದಾರೆ.

ವಿಜಯ್ ಸೇತುಪತಿ ನಟಿಸುತ್ತಿರುವ, ನಿರ್ದೇಶಕ ಎಂ.ಮಣಿಕಂಠನ್ ನಿರ್ದೇಶನದ ಕಡೈಸಿ ವ್ಯವಸಾಯಿ ಸಿನಿಮಾದ ವಿರುದ್ಧ ಇಳಯರಾಜ ಅವರು ದೂರನ್ನು ದಾಖಲಿಸಿದ್ದಾರೆ. ಇಳಯರಾಜ ಅವರು ಈ ಸಿನಿಮಾದಲ್ಲಿ ತಾನು ನೀಡಿದ್ದ ಸಂಗೀತವನ್ನು ತನ್ನ ಗಮನಕ್ಕೆ ತರದೇ ಚಿತ್ರ ತಂಡವು ಕೈ ಬಿಟ್ಟಿರುವುದು ಮಾತ್ರವೇ ಅಲ್ಲದೇ ತನಗೆ ಮಾಹಿತಿಯನ್ನು ನೀಡದೇ ಬೇರೊಬ್ಬ ಸಂಗೀತ ನಿರ್ದೇಶಕರನ್ನು ಕರೆ ತರಲಾಗಿದೆ ಎನ್ನುವುದನ್ನು ಸಹಾ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಿನಿಮಾಕ್ಕೆ ಇಳಯರಾಜ ಅವರು ಸಂಗೀತ ನಿರ್ದೇಶನ ಮಾಡಿದ್ದರು, ಆದರೆ ಇಳಯರಾಜ ಅವರು ನೀಡಿದ ಸಂಗೀತ ಸಿನಿಮಾ ನಿರ್ದೇಶಕ ಮಣಿಕಂಠನ್ ಅವರಿಗೆ ಹಿಡಿಸಲಿಲ್ಲ ಎನ್ನಲಾಗಿದ್ದು, ಅವರು ಇಳಯರಾಜ ಅವರಿಗೆ ಬದಲಾವಣೆ ಮಾಡಿಕೊಳ್ಳಲು ಸೂಚಿಸಿದರೂ ಇಳಯರಾಜ ಅವರು ಅದಕ್ಕೆ ಒಪ್ಪದ ಕಾರಣ, ‌ನಿರ್ದೇಶಕ ಮಣಿಕಂಠನ್ ಅವರು ಇಳಯರಾಜ ಅವರ ಬದಲಿಗೆ ಸಂತೋಷ್ ನಾರಾಯಣನ್ ಹಾಗೂ ರಿಚರ್ಡ್ ಹಾರ್ವಿ ಅವರಿಂದ ಹಿನ್ನೆಲೆ ಸಂಗೀತವನ್ನು ಹೊಸದಾಗಿ ಕೊಡಿಸಿದ್ದಾರೆ.

ಇದರಿಂದ ಅಸಮಾಧಾನಗೊಂಡ ಇಳಯರಾಜ ಅವರು ಸಿನಿಮಾ ತಂಡ ತನ್ನ ಗಮನಕ್ಕೆ ತರದೇ ತಾನು ನೀಡಿದ ಸಂಗೀತವನ್ನು ಕೈ ಬಿಟ್ಟಿದೆ ಎಂದು ಸಂಗೀತ ನಿರ್ದೇಶಕರ ಸಂಘದಲ್ಲಿ ದೂರನ್ನು ದಾಖಲು ಮಾಡಿದ್ದಾರೆ. ಈ ಸಿನಿಮಾ ಕೃಷಿಯ ಆಧಾರಿತ ಸಿನಿಮಾ ಆಗಿದೆ ಎನ್ನಲಾಗಿದೆ. 85 ವರ್ಷ ವಯಸ್ಸಿನ ರೈತನ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *